Advertisement

16 ಲಕ್ಷ ಪಡಿತರ ಚೀಟಿ ಅರ್ಜಿಗಳಿಗೆ ತಿಂಗಳಲ್ಲಿ  ಮುಕ್ತಿ

03:00 AM Jul 17, 2017 | Harsha Rao |

ಬೆಂಗಳೂರು: ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಹೊಣೆಯ “ಕುರ್ಚಿಯಾಟ’ ಮುಕ್ತಾಯಗೊಂಡಿದ್ದು, ಬಾಕಿ ಇರುವ 16 ಲಕ್ಷ ಅರ್ಜಿಗಳ ಪರಿಶೀಲನೆಯ ಜವಾಬ್ದಾರಿ ಮತ್ತೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳ ಹೆಗಲಿಗೆ ಬಿದ್ದಿದೆ.

Advertisement

ಈ ಮೂಲಕ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ತಿಂಗಳುಗಟ್ಟಲೆ ಕಾದು ಕುಳಿತವರಿಗೆ ಶೀಘ್ರವೇ “ರೇಷನ್‌ಕಾರ್ಡ್‌’ ಭಾಗ್ಯ ಸಿಗಲಿದೆ. ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ ಮೂಲಕ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಕಾರ್ಯ ತಿಂಗಳಲ್ಲಿ ಪೂರ್ಣಗೊಳಿಸಲು ಮುಂದಾಗಿರುವ ಕಂದಾಯ ಇಲಾಖೆ, ಬಾಕಿ ಅರ್ಜಿಗಳಿಗೆ ಮುಕ್ತಿ ನೀಡಲು ತೀರ್ಮಾನಿಸಿದೆ.

ಪಡಿತರ ಚೀಟಿಗೆ ಆನ್‌ಲೈನ್‌ ಮೂಲಕ ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಕಾರ್ಯವನ್ನು ಮೊದಲಿಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಓ) ವಹಿಸಲಾಗಿತ್ತು. ಆದರೆ, ಪಿಡಿಓಗಳು ಒಪ್ಪದಿದ್ದಾಗ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರಿಗೆ ಈ ಜವಾಬ್ದಾರಿ ನೀಡಲಾಗಿತ್ತು. ಇವರೂ ನಿರಾಕರಿಸಿದಾಗ ಅನಿವಾರ್ಯವಾಗಿ ಆಹಾರ ಇಲಾಖೆಯ
ತಾಲೂಕು ಅಧಿಕಾರಿಗಳ ಮೂಲಕವೇ ಅರ್ಜಿಗಳ ಪರಿಶೀಲನೆಗೆ ಸರ್ಕಾರ ಮುಂದಾಯಿತು.

ತಿಂಗಳ ಗಡುವು: ಆದರೆ, ಆಹಾರ ಇಲಾಖೆಯ ತಾಲೂಕು ಅಧಿಕಾರಿಗಳ ಸಂಖ್ಯೆ ಕಡಿಮೆ ಇದ್ದು, ಬಾಕಿ ಅರ್ಜಿಗಳು ಲಕ್ಷಾಂತರ ಸಂಖ್ಯೆಯಲ್ಲಿದ್ದರಿಂದ ಪರಿಶೀಲನೆ ಕಾರ್ಯ ನಿಧಾನವಾಗಿ ಪಡಿತರ ಚೀಟಿಗಳ ವಿತರಣೆ ವಿಳಂಬವಾಗುತ್ತಿತ್ತು. ಹೀಗಾಗಿ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಮನೆ ಬಾಗಿಲಿಗೆ ಪಡಿತರ ಚೀಟಿ ತಲುಪಿಸುವ ಆಹಾರ ಇಲಾಖೆಯ ಭರವಸೆ
ಹುಸಿಯಾಯಿತು. ಈ ಬಗ್ಗೆ ಅರ್ಜಿದಾರರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅರ್ಜಿಗಳ ಪರಿಶೀಲನೆ ಹೊಣೆಯನ್ನು ಅಂತಿಮವಾಗಿ ಗ್ರಾಮ ಲೆಕ್ಕಾಧಿಕಾರಿಗಳಿಗೆ ನೀಡಲಾಗಿದ್ದು, ಈ ಬಗ್ಗೆ ಕಳೆದ ವಾರ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಭೆ ನಡೆಸಿ, ಬಾಕಿ ಅರ್ಜಿಗಳ ಪರಿಶೀಲನೆಗೆ ಒಂದು ತಿಂಗಳ ಗಡುವು ನೀಡಿದ್ದಾರೆ.

ತಹಶೀಲ್ದಾರ್‌ ಕಚೇರಿಯಿಂದ ಅರ್ಜಿದಾರರಿಗೆ:
ಹೊಸ ತೀರ್ಮಾನದಂತೆ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ನೇರವಾಗಿ ಉಪ ತಹಶೀಲ್ದಾರ್‌ ಸ್ವೀಕರಿಸುತ್ತಾರೆ. ಬಂದ ಅರ್ಜಿಗಳನ್ನು ಉಪ ತಹಶೀಲ್ದಾರ್‌ ಅವರು ಗ್ರಾಮ ಪಂಚಾಯಿತಿವಾರು ವಿಂಗಡಿಸಿ ಸಂಬಂಧಪಟ್ಟ ಗ್ರಾಮ ಲೆಕ್ಕಾಧಿಕಾರಿಗೆ ರವಾನಿಸುತ್ತಾರೆ. ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲನೆ ನಡೆಸುವ ಗ್ರಾಮ ಲೆಕ್ಕಿಗರು ಅರ್ಜಿದಾರನ ವಾರ್ಷಿಕ ಆದಾಯ, ವಾಸಸ್ಥಳ ಮತ್ತು ಅರ್ಜಿಯಲ್ಲಿ ನಮೂದಿಸಿದ ಇತರ
ಸದಸ್ಯರ ಅರ್ಜಿದಾರನ ಜತೆಗಿನ ಸಂಬಂಧ ಏನು ಎಂಬ ಈ ಮೂರು ಅಂಶಗಳನ್ನು ದೃಢೀಕರಿಸಿ ಪುನಃ ಆ ಆರ್ಜಿಗಳನ್ನು ಉಪ ತಹಶೀಲ್ದಾರರಿಗೆ ಕಳಿಸಿಕೊಡುತ್ತಾರೆ. ಅಲ್ಲಿ ಅಂತಿಮ ಹಂತದ ಪರಿಶೀಲನೆ ಬಳಿಕ ಪಡಿತರ ಚೀಟಿ ಸಿದ್ಧವಾಗಿ
ಉಪ ತಹಶೀಲ್ದಾರ್‌ ಕಚೇರಿಯಿಂದಲೇ ನೇರವಾಗಿ ಅರ್ಜಿದಾರನ ಕೈ ಸೇರುತ್ತದೆ.

Advertisement

16.35 ಲಕ್ಷ ಅರ್ಜಿಗಳು ಬಾಕಿ: 2017ರ ಫೆ.1ರಿಂದ ಹೊಸ ಪಡಿತರ ಚೀಟಿಗೆ ಆನ್‌ ಲೈನ್‌ ಅರ್ಜಿ ಸ್ವೀಕರಿಸಲು ಆರಂಭಿಸಲಾಯಿತು. ಇಲ್ಲಿವರೆಗೆ 17.04 ಲಕ್ಷ ಅರ್ಜಿಗಳು ಸ್ವೀಕರಿಸಲಾಗಿದ್ದು, ಅದರಲ್ಲಿ 16.35 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ. ಇಲ್ಲಿಯವರೆಗೆ 65 ಸಾವಿರ ಹೊಸ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಬಿಪಿಎಲ್‌, ಅಂತ್ಯೋದಯ ಅನ್ನ
ಯೋಜನೆಯ 1.4 ಕೋಟಿ ಪಡಿತರ ಚೀಟಿಗಳು ಮತ್ತು 18 ಲಕ್ಷ ಎಪಿಎಲ್‌ ಕಾರ್ಡ್‌ಗಳು ಸೇರಿ ರಾಜ್ಯದಲ್ಲಿ ಒಟ್ಟು 1.22 ಕೋಟಿ ರೇಷನ್‌ಕಾಡ್‌ìಗಳಿವೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 1.31 ಕೋಟಿ ಕುಟುಂಬಗಳಿದ್ದು, ಅದರಂತೆ
ಇನ್ನೂ 9 ಲಕ್ಷ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

– ರಫೀಕ್ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next