Advertisement

Bill: ಬಿಲ್‌ ಬಾಕಿ ಪಾವತಿಗೆ ತಿಂಗಳ ಗಡುವು- ತಪ್ಪಿದರೆ ಪ್ರತಿಭಟನೆ: ಕೆಂಪಣ್ಣ

11:20 PM Oct 13, 2023 | Team Udayavani |

ಬೆಂಗಳೂರು: ಬಿಲ್‌ ಬಾಕಿ ಸಂಬಂಧ ರಾಜ್ಯದ ಗುತ್ತಿಗೆದಾರರು ವಿಷ ಸೇವಿಸುವ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಸರಕಾರ ಒಂದು ತಿಂಗಳೊಳಗೆ ಎಲ್ಲ ಇಲಾಖೆಗಳಲ್ಲೂ ಕನಿಷ್ಠ ಶೇ.50ರಷ್ಟಾದರೂ ಬಾಕಿ ಮೊತ್ತ ಬಿಡುಗಡೆ ಮಾಡ ಬೇಕು. ಇಲ್ಲದಿದ್ದರೆ ಸರಕಾರದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟಿಸ ಲಾಗುವುದು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿ ವಿಚಾರವಾಗಿ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಗುತ್ತಿಗೆದಾರರು ವಿಷ ಸೇವಿಸಿದ್ದಾರೆ. ಬಿಲ್‌ ಬಾಕಿ ಸಂಬಂಧ ನಾಲ್ಕು ಬಾರಿ ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದೇವೆ. ತನಿಖೆ ಹಾಗೂ ಆಯೋಗದ ಹೆಸರಿನಲ್ಲಿ ಬಿಲ್‌ ಬಾಕಿ ಉಳಿಸಿಕೊಳ್ಳಲಾಗಿದೆ. ಆಯುಧ ಪೂಜೆ ಮತ್ತಿತರ ಹಬ್ಬಗಳು ಬರಲಿದ್ದು, ಸರಕಾರ ಶೇ.50ರಷ್ಟಾದರೂ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದುವರೆಗೆ ಬಿಲ್‌ ಪಾವತಿಸಿಲ್ಲ. ರಾಜ್ಯ ಸರಕಾರದಿಂದ ಇನ್ನೂ 20 ಸಾವಿರ ಕೋಟಿ ರೂ. ಬಾಕಿ ಬರಬೇಕಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಸಹಿತ ಹಲವು ಇಲಾಖೆಗಳಿಂದ ಬಾಕಿ ಬರಬೇಕು. ಶುಕ್ರವಾರದಿಂದ ಸರಕಾರಕ್ಕೆ 30 ದಿನ ಗಡುವು ನೀಡುತ್ತೇವೆ. ತಪ್ಪಿದರೆ ಪ್ರತಿಭಟನೆ ಅನಿವಾರ್ಯ ಎಂದರು.

ನಮ್ಮಪ್ಪನ ಮಕ್ಕಳಲ್ಲ
ಈಗ ಹಳೆಯದರ ಜತೆಗೆ ಹೊಸ ಸಮಸ್ಯೆಗಳೂ ಸೇರ್ಪಡೆಯಾಗಿವೆ. ತನಿಖೆ ಹೆಸರಲ್ಲಿ ರಾಜ್ಯ ಸರಕಾರ ಬಾಕಿ ಹಣ ತಡೆಹಿಡಿದಿದೆ. ತಮಗೆ ಬೇಕಾದ ಕೆಲವು ಗುತ್ತಿಗೆದಾರರಿಗೆ ಮಾತ್ರ ಹಣ ಬಿಡುಗಡೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ನಮಗೇನೂ ಗೊತ್ತಿಲ್ಲವೆಂದು ಎಂಜಿನಿಯರ್‌ಗಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ನಮ್ಮಪ್ಪನ ಮಕ್ಕಳಲ್ಲ, ನಮಗೆ ಎಲ್ಲ ಸರಕಾರಗಳೂ ಒಂದೇ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಪ್ರಧಾನಿಗೂ ಪತ್ರ ಬರೆಯುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ಜೇಷ್ಠತೆ ಪಾಲಿಸುತ್ತಿಲ್ಲ
ಬಿಲ್‌ಬಾಕಿ ವಿಚಾರದಲ್ಲಿ ಸರಕಾರ ಜೇಷ್ಠತೆ ಪಾಲಿಸುತ್ತಿಲ್ಲ. ಹಿರಿತನ ಪಟ್ಟಿಯನ್ನು ನೀಡುತ್ತಿಲ್ಲ. ಹಿರಿತನದ ಆಧಾರದಲ್ಲಿ ಹಣ ಬಿಡುಗಡೆ ಮಾಡದೇ ತಮಗೆ ಬೇಕಾದವರಿಗೆ ಮಾತ್ರ ಚೆಕ್‌ಗಳನ್ನು ನೀಡಲಾಗುತ್ತಿದೆ. ಈ ವಿಚಾರದಲ್ಲಿ ಬಿಬಿಎಂಪಿ ಗುತ್ತಿಗೆದಾರರು ಅನಾಥ ಮಕ್ಕಳಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಹಿರಿತನದ ಆಧಾರದಲ್ಲಿ ಹಣ ಬಿಡುಗಡೆ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಆರ್‌ಟಿಐ ಅರ್ಜಿ ಸಲ್ಲಿಕೆ ಮಾಡಲಾಗಿದೆ ಎಂದರು.

Advertisement

ಸಭೆ ಕರೆಯಲು ಹಿಂದೇಟು
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಬಿಟ್ಟರೆ ಬೇರೆ ಯಾವುದೇ ಇಲಾಖೆಯ ಕಾಮಗಾರಿಗಳಲ್ಲಿ ಹಣ ಬಿಡುಗಡೆ ಆಗಿಲ್ಲ. ಜಲಸಂಪನ್ಮೂಲ, ಸಣ್ಣ ನೀರಾವರಿ, ಆರ್‌ಡಿಪಿಆರ್‌ ಮತ್ತು ಬಿಬಿಎಂಪಿ ಉಸ್ತುವಾರಿ ವಹಿಸಿಕೊಂಡಿ ರುವ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಸಂಬಂಧ ಪಟ್ಟ ಅಧಿಕಾರಿಗಳ ಸಭೆ ಕರೆದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳ ಜತೆ ಚರ್ಚಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಸಭೆ ಕರೆದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next