ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ದಾಖಲಾಗಿರುವ ವಿದ್ಯಾರ್ಥಿಗಳ ಹಿಂದಿನ ಸಾಲಿನ ಶುಲ್ಕವನ್ನು ಜೂನ್ ಅಂತ್ಯದೊಳಗೆ ಮರುಪಾವತಿ ಮಾಡದಿದ್ದರೆ ಸರ್ಕಾರ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ಪ್ರತಿಭಟನೆಯ ಅಸ್ತ್ರ ಉಪಯೋಗಿಸಬೇಕಾಗುತ್ತದೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.
ಸುಮಾರು 600 ಕೋಟಿಯಷ್ಟು ಶುಲ್ಕ ಮರುಪಾವತಿ ಮಾಡಲು ಬಾಕಿಯಿದೆ. ಈ ವರ್ಷದ ಶುಲ್ಕವೂ ಸೇರಿದರೆ 1200 ಕೋಟಿ ರೂ.ಗಳಷ್ಟಾಗಲಿದೆ. ಸರ್ಕಾರ ಬಿಡುಗಡೆ ಮಾಡಿರುವ ಅನುದಾನವನ್ನು ಶಾಲೆಗಳಿಗೆ ನೀಡಲು ಜಿಲ್ಲಾ ಉಪನಿರ್ದೇಶಕರು ಹಿಂದೇಟು ಹಾಕುತ್ತಿದ್ದಾರೆ. ಸೂಕ್ತ ಸಮಯದಲ್ಲಿ ಶುಲ್ಕ ಮರುಪಾವತಿ ಮಾಡದಿದ್ದರೆ, ಆಡಳಿತ ಮಂಡಳಿಗಳಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಎಲ್ಲ ರೀತಿಯ ಕಾನೂನು ಮಾತಾಡುವ ಇಲಾಖೆಯ ಅಧಿಕಾರಿಗಳು ಶುಲ್ಕ ಮರುಪಾವತಿ ವಿಚಾರದಲ್ಲಿ ಏನನ್ನೂ ಹೇಳುತ್ತಿಲ್ಲ ಏಕೆ ಎಂದು ಎಲ್ಲ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಡಿ.ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಅವೈಜ್ಞಾನಿಕ ಕ್ರಮ: ಶಾಲಾ ಮಕ್ಕಳ ಬ್ಯಾಗ್ ಭಾರ ಕಡಿಮೆ ಮಾಡಬೇಕು ನಿಜ. ಆದರೆ, ಅವೈಜ್ಞಾನಿಕವಾಗಿ ಆದೇಶ ಹೊರಡಿಸಿದ ತಕ್ಷಣವೇ ವಾಸ್ತವದಲ್ಲಿ ಅನುಷ್ಠಾನ ಮಾಡಲು ಸಾಧ್ಯವೇ ಇರುವುದಿಲ್ಲ. ಬ್ಯಾಗ್ ಭಾರ ಇಳಿಸಲು ಹಂತಹಂತವಾಗಿ ಕ್ರಮ ತೆಗೆದುಕೊಳ್ಳಬೇಕು. ಖಾಸಗಿ ಆಡಳಿತ ಮಂಡಳಿಗಳು ನೀಡಿರುವ ಆಕ್ಷೇಪಣೆಗಳನ್ನು ಪರಿಗಣಿಸಬೇಕಿತ್ತು. ಅಧಿಕಾರಿಗಳಿಗೆ, ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಈ ಸಂಬಂಧ ಮನವಿ ಸಲ್ಲಿಸಿದ್ದೆವು. ಸರ್ಕಾರ ಪರಿಗಣಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ದಂಧೆ: ಇನ್ನೂ ಶೇ.30ರಷ್ಟು ಪಠ್ಯಪುಸ್ತಕ ಬಂದಿಲ್ಲ. ಆಡಳಿತ ಮಂಡಳಿಗೂ ಪ್ರತ್ಯೇಕವಾಗಿ ಖರೀದಿಗೆ ಅವಕಾಶ ನೀಡುತ್ತಿಲ್ಲ. ಹೆಚ್ಚುವರಿಯಾಗಿ ಉಳಿದ ಪುಸ್ತಕವನ್ನು ವಾಪಸ್ ಪಡೆಯುತ್ತಿಲ್ಲ, ಹೆಚ್ಚು ಪುಸ್ತಕ ಬೇಕೆಂದರೂ ನೀಡುತ್ತಿಲ್ಲ. ಸರ್ಕಾರ ಪಠ್ಯಪುಸ್ತಕ ಸಂಘದೊಂದಿಗೆ ಸೇರಿ ದಂಧೆ ನಡೆಸುತ್ತಿದೆ ಎಂದು ದೂರಿದರು. ಮಿಕ್ಸಾ ಸಂಘಟನೆಯ ಶ್ರೀನಿವಾಸ್, ಐಸಿಎಸ್‌ಇ ಶಾಲೆಗಳ ಪ್ರಾಂಶುಪಾಲರ ಒಕ್ಕೂಟದ ಗಾಯತ್ರಿದೇವಿ, ಕ್ಯಾಮ್ಸ್ ಉಪಾಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು.
ಮೂರನೇ ಭಾಷೆ ಕನ್ನಡ ಕಲಿಕೆಗೆ ಅವಕಾಶ ನೀಡಲಿ!: ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳು ಸೇರಿ ರಾಜ್ಯದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡವನ್ನು ಮೊದಲು ಅಥವಾ ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕೆಂಬ ಸರ್ಕಾರದ ನಿಯಮ ಅನುಷ್ಠಾನಕ್ಕೆ ಕಷ್ಟವಾಗುತ್ತಿದೆ. ಸುಪ್ರೀಂಕೋರ್ಟ್ ಹೇಳಿರುವಂತೆ ಮಾಧ್ಯಮದ ಆಯ್ಕೆಯಲ್ಲಿ ಪಾಲಕ, ಪೋಷಕರು ಸ್ವತಂತ್ರರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಒಂದು ಅಥವಾ ಎರಡನೇ ಭಾಷೆಯಾಗಿ ಕನ್ನಡ ಕಲಿಯಬೇಕು ಎಂಬುದು ಸರಿಯಲ್ಲ. ಕನ್ನಡ ಕಲಿಸಲು ನಾವೆಲ್ಲರೂ ಸಿದ್ಧರಿದ್ದೇವೆ.
ಮೂರನೇ ಭಾಷೆಯಾಗಿ ಕನ್ನಡ ಕಲಿಸಲು ಅವಕಾಶ ನೀಡಬೇಕು. ರಾಜ್ಯದಲ್ಲಿ 300ಕ್ಕೂ ಹೆಚ್ಚು ಐಸಿಎಸ್‌ಇ ಶಾಲೆಗಳಿವೆ. ಇಲ್ಲಿ ಎರಡು ದ್ವಿತೀಯ ಭಾಷೆ ಆಯ್ಕೆಗೆ ಅವಕಾಶ ಇರುತ್ತದೆ. ಹಿಂದಿ ಅಥವಾ ಬೇರೆ ಭಾಷಿಕರು ತಮ್ಮ ಮಕ್ಕಳಿಗೆ ಎರಡನೇ ಭಾಷೆಯನ್ನು ಹಿಂದಿ ಆಯ್ಕೆ ಮಾಡಿಕೊಳ್ಳುತ್ತಾರೆ. ಎಲ್ಲರಿಗೂ ಅವರವರ ಮಾತೃಭಾಷೆ ಮುಖ್ಯವಾಗಿರುತ್ತದೆ. ಹೀಗಾಗಿ ಸರ್ಕಾರ ಮೂರನೇ ಭಾಷೆಯಾಗಿ ಕನ್ನಡ ಕಲಿಕೆಗೆ ಅವಕಾಶ ನೀಡಬೇಕು. ಆಗ ಮಾತ್ರ ಅನುಷ್ಠಾನ ಸಾಧ್ಯವಾಗಲಿದೆ ಎಂದು ಐಸಿಎಸ್‌ಇ ಶಾಲೆಗಳ ಪ್ರಾಂಶುಪಾಲರ ಒಕ್ಕೂಟದ ಗಾಯತ್ರಿದೇವಿ ಹೇಳಿದರು.