ಆಂಧ್ರಪ್ರದೇಶ(ವಿಶಾಖಪಟ್ಟಣಂ): ಕೋವಿಡ್ 19 ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆಯ ಕರ್ತವ್ಯ ನಿಷ್ಠ ಜನರು ಹಲವಾರು ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಅದಕ್ಕೊಂದು ಸೇರ್ಪಡೆ ಎಂಬಂತೆ ವಿಶಾಖಪಟ್ಟಣದ ಮಹಾನಗರ ಪಾಲಿಕೆಯ ಮಹಿಳಾ ಕಮಿಷನರ್ ಇದೀಗ ಸಾಮಾಜಿಕ ಜಾಲತಾಣ, ಅಂತರ್ಜಾಲದಲ್ಲಿ ಭಾರೀ ಮೆಚ್ಚುಗೆ, ಶ್ಲಾಘನೆಗೆ ಒಳಗಾಗಿದ್ದಾರೆ.
ಈ ಕರ್ತವ್ಯ ನಿಷ್ಠ ಮಹಿಳಾ ಅಧಿಕಾರಿ ಒಂದು ತಿಂಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದರು. ಇದೀಗ ಕೋವಿಡ್ 19 ವೈರಸ್ ವಿರುದ್ಧದ ಹೋರಾಟದ ಕರೆಗೆ ಓಗೊಟ್ಟಿರುವ ಐಎಎಸ್ ಅಧಿಕಾರಿ ಒಂದು ತಿಂಗಳ ಪುಟ್ಟ ಮಗುವಿನೊಂದಿಗೆ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫೋಟೋ ಭಾರೀ ಜನಮೆಚ್ಚುಗೆಗೆ ಪಾತ್ರವಾಗಿದೆ ಎಂದು ವರದಿ ವಿವರಿಸಿದೆ.
2013ರ ಐಎಎಸ್ ಬ್ಯಾಚ್ ನ ಮಹಿಳಾ ಅಧಿಕಾರಿ ಕಚೇರಿಯಲ್ಲಿ ಕೈಯಲ್ಲಿ ಪುಟ್ಟ ಮಗುವನ್ನು ಹಿಡಿದು ಕುಳಿತುಕೊಂಡು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದು ನನಗೆ ಕರ್ತವ್ಯದ ಕರೆ. ಇದು ಮನುಷ್ಯ ಸಹಜ ಗುಣವಾಗಿದೆ, ಆಡಳಿತಾತ್ಮಕವಾಗಿ ನೆರವು ನೀಡುವುದು ನನ್ನ ಹೊಣೆಯಾಗಿದೆ. ಈ ಸಮಯದಲ್ಲಿ ಎಲ್ಲರೂ ಒಗ್ಗಟ್ಟಾಗಿ ಒಬ್ಬರಿಗೊಬಬ್ಬರು ಸಹಾಯ ಮಾಡುವ ನಿಟ್ಟಿನಲ್ಲಿ ಒಟ್ಟು ಸೇರಿ ಹೋರಾಡಬೇಕಾಗಿದೆ ಎಂದು ಗ್ರೇಟರ್ ವಿಶಾಖಪಟ್ಟಣಂ ಮುನ್ಸಿಪಲ್ ಕಾರ್ಪೋರೇಶನ್ ಕಮಿಷನರ್ ಸೃಜನಾ ಗುಮ್ಮಾಲ್ಲಾ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಿಯಮದ ಪ್ರಕಾರ ಮಹಿಳೆಯರಿಗೆ ಆರು ತಿಂಗಳ ಕಾಲ ಸಂಬಳ ಸಹಿತ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಮಗುವಿನ ಜತೆಗೆ ಕರ್ತವ್ಯಕ್ಕೆ ಹಾಜರಾದ ಮಹಿಳಾ ಅಧಿಕಾರಿ ಬಗ್ಗೆ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.