Advertisement
ತುಳು ಭಾಷೆಯಲ್ಲಿ ಇದನ್ನು “ಬೊಂಕ’ ಎನ್ನುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ‘ಮೊಂಟೆತಡ್ಕ ಶ್ರೀದುರ್ಗಾಪರಮೇಶ್ವರಿ’ ದೇವಾಲಯದಲ್ಲಿ ಪೂಜಿಸಿ ಹರಕೆಯಾಗಿ ಬಿದಿರಿನಿಂದ ತಯಾರಿಸಿದ ‘ಮೊಂಟೆ’ಯನ್ನೇ ಹರಕೆಯಾಗಿ ಭಕ್ತಾದಿಗಳು ಒಪ್ಪಿಸುತ್ತಾರೆ.
ಶಿರಾಡಿ ಪರ್ವತದ ಮಗ್ಗುಲಲ್ಲಿ ಕಾಡುಗಳಿಂದಾವೃತವಾದ ಶಿಬಾಜೆ ಗ್ರಾಮವು ಪ್ರಕೃತಿಯ ಹಚ್ಚ ಹಸುರಿನ ಕಾಡು ಹಾಗೂ ಹಸಿರಿನಿಂದ ನಳನಳಿಸುವ ತೋಟಗಳನ್ನು ತನ್ನ ಮೈಮೇಲೆ ಹೊದ್ದುಕೊಂಡಂತಿದ್ದು, ಕಾಡು ಪ್ರಾಣಿಗಳ ಆವಾಸ ಸ್ಥಾನವೂ ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ತಮ್ಮ ಹಸುಗಳನ್ನು ಹೆಚ್ಚಾಗಿ ಸಮೀಪದ ಗುಡ್ಡಗಾಡು ಪ್ರದೇಶಗಳಿಗೆ ಮೇಯಲು ಬಿಡುವುದು ವಾಡಿಕೆ. ಈ ಹಸುಗಳು ಮೇಯುತ್ತಾ ಮೇಯುತ್ತಾ ದೂರಕ್ಕೆ ಹೋದಲ್ಲಿ, ಅಥವಾ ದೊಡ್ಡ ದೊಡ್ಡ ಪೊದೆಗಳೊಳಗೆ ಇದ್ದಲ್ಲಿ, ಅವುಗಳು ಎಲ್ಲಿವೆಯೆಂಬ ಗುರುತು ಮಾಲೀಕನಿಗೆ ಸುಲಭವಾಗಿ ದೊರೆಯಲೋಸುಗ ಅವುಗಳ ಕೊರಳಿಗೆ ಅತ್ಯಂತ ವಿಶಿಷ್ಟವಾಗಿ ಸದ್ದು ಮಾಡುವ ಬಿದಿರಿನ ‘ಮೊಂಟೆ’ಗಳನ್ನು ಕಟ್ಟುತ್ತಾರೆ. ಮೊಂಟೆಯ ಶಬ್ದವು ಅತ್ಯಂತ ಭಿನ್ನವಾಗಿದ್ದು, ಇತರೆಲ್ಲಾ ಶಬ್ದಕ್ಕಿಂತಲೂ ಅತ್ಯಂತ ಭಿನ್ನವಾಗಿ ಹಾಗೂ ಎಷ್ಟೇ ದೂರದಲ್ಲಿ ಹಸುವಿದ್ದರೂ ಎಲ್ಲರ ಕಿವಿಗೂ ಬೀಳುತ್ತದೆ. ಅದೇ ರೀತಿ ರೈತರು ಮೇಯಲು ಬಿಟ್ಟ ತಮ್ಮ ಗೋವುಗಳನ್ನು ಕಾಡಿನ ಹುಲಿಗಳು ತಿನ್ನಬಾರದೆಂದು ಇಲ್ಲಿನ ‘ದುರ್ಗಾಪರಮೇಶ್ವರಿ’ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸಿ ಎರಡು ‘ಮೊಂಟೆ’ಗಳಲ್ಲಿ ಒಂದನ್ನು ದೇವರಿಗೆ ಸಮರ್ಪಿಸಿ ಇನ್ನೊಂದನ್ನು ಹಸುವಿನ ಕೊರಳಿಗೆ ಕಟ್ಟಿ, ಹುಲ್ಲುಗಾವಲಿಗೆ ಮೇಯಲು ಬಿಡುತ್ತಿದ್ದರು. ಹೀಗೆ ಮಾಡಿದಲ್ಲಿ ಹಸುವನ್ನು ಹುಲಿಗಳು ತಿನ್ನುವುದಿಲ್ಲವಂತೆ ಎಂಬ ನಂಬಿಕೆ ಇಲ್ಲಿನ ಜನರಿಗಿದೆ. ಹಸುಗಳು ರೋಗಗ್ರಸ್ತವಾದಾಗ, ಹಾಲು ಕರೆಯಲು ಬಿಡದೇ ಇದ್ದಾಗ, ಹಸು ಕರು ಹಾಕದೇ ಇದ್ದಾಗ ಹಾಗೂ ಹಸುಗಳ ಮೈಯಲ್ಲಿ ‘ಉಣ್ಣೆ’ಗಳಾದಾಗ (ಹೇನು) ಅವುಗಳ ನಿವಾರಣೆಗಾಗಿ, ಕಾಡಿಗೆ ಮೆಯಲು ಬಿಟ್ಟ ಹಸುಗಳು ಕಾಣೆಯಾದ ಸಂದರ್ಭದಲ್ಲಿ ಅವುಗಳು ಮರಳಿ ದೊರೆತಲ್ಲಿ ಈ ದೇವಾಲಯಕ್ಕೆ ವಿಶೇಷ ಸೇವೆ ನೀಡುವುದಾಗಿ ರೈತಾಪಿ ಜನರು ಹರಕೆ ಹೊತ್ತುಕೊಳ್ಳುತ್ತಾರೆ.
Related Articles
Advertisement