ಮಡಿಕೇರಿ: ಸುಮಾರು ಒಂದೂವರೆ ತಿಂಗಳ ಕಾಲ ಮಳೆ, ಬಿಸಿಲಿನ ಕಣ್ಣಾಮುಚ್ಚಾಲೆಯಲ್ಲಿದ್ದ ಕಾವೇರಿನಾಡು ಕೊಡಗಿನಲ್ಲೀಗ ಮುಂಗಾರಿನ ವಾತಾವರಣ ಮೂಡಿದೆ. ಕಳೆದ ಎರಡು ದಿನಗಳಿಂದ ಮಡಿಕೇರಿ ತಾಲ್ಲಕು ಸೇರಿದಂತೆ ಜಿಲ್ಲೆಯ ಧೆಡೆ ಉತ್ತಮ ಮಳೆಯಾಗುತ್ತಿದೆ.
Advertisement
ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಸುರಿದ ಅಕಾಲಿಕ ಮಳೆಯ ಅನಂತರ ಜೂನ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ನಿರೀಕ್ಷಿತ ಮಳೆಯಾಗಲಿಲ್ಲ. ಜುಲೈ ತಿಂಗಳಿನಲ್ಲಾದರೂ ಮಳೆ ಬರಬಹುದೆನ್ನುವ ನಿರೀಕ್ಷೆ ಮೂಡಿತ್ತಾದರೂ ಕಳೆದ 10 ದಿನಗಳಿಂದ ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಇದೀಗ ದಿಢೀರ್ ಆಗಿ ಹವಾಗುಣ ಬದಲಾಗಿದ್ದು, ಸಾಧಾರಣ ಗಾಳಿ ಸಹಿತ ಮಳೆಯಾಗುತ್ತಿದೆ. ಮಡಿಕೇರಿಯಲ್ಲಿ ಉತ್ತಮ ಮಳೆಯಾಗುತ್ತಿದೆಯಾದರೂ ಅತಿ ಹೆಚ್ಚು ಮಳೆಯಾಗುವ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ಮಳೆ ಕ್ಷೀಣಿಸಿದೆ.ಜುಲೈ ತಿಂಗಳಿನಲ್ಲಿ ತುಂಬಿ ಹರಿಯ ಬೇಕಾಗಿದ್ದ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಇನ್ನೂ ಕೂಡ ನೀರಿನ ಹರಿವು ಹೆಚ್ಚಾಗಿಲ್ಲ. ತುಂತುರು ಮಳೆಯಷ್ಟೇ ಆಗುತ್ತಿದ್ದು, ಈ ಭಾಗದ ರೈತಾಪಿ ವರ್ಗದಲ್ಲಿ ಆತಂಕ ಮನೆ ಮಾಡಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಸುರಿದಿರುವ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಕಡಿಮೆ ಇದೆ. ಕಳೆದ ವರ್ಷ ಬರದಿಂದ ಕೊಡಗು ಜಿಲ್ಲೆ ಕೂಡ ತತ್ತರಿಸಿತ್ತು. ಈ ಬಾರಿ ಕೂಡ ಇದೇ ಪರಿಸ್ಥಿತಿ ಎದುರಾಗಬಹುದೆಂದು ಹೇಳಲಾಗುತ್ತಿದೆ. ಉತ್ತಮ ಮಳೆಗಾಗಿ ಪ್ರಾರ್ಥಿಸಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ವಿಶೇಷ ಪೂಜೆಯನ್ನು ಕೂಡ ಭಕ್ತರು ಸಮರ್ಪಿಸುತ್ತಿದ್ದಾರೆ.
ಕೊಡಗು ಜಿಲ್ಲೆಯ ಇಂದಿನ ಸರಾಸರಿ ಮಳೆ 3.83 ಮಿ.ಮೀ. ಕಳೆದ ವರ್ಷ ಇದೇ ದಿನ 21.32 ಮಿ.ಮೀ. ಮಳೆಯಾಗಿತ್ತು. ಜನವರಿ ಯಿಂದ ಇಲ್ಲಿಯವರೆಗಿನ ಮಳೆ 826.13 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1012.21 ಮಿ.ಮೀ.ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಗುರುವಾರ ಸರಾಸರಿ ಮಳೆ 6.85 ಮಿ.ಮೀ. ಕಳೆದ ವರ್ಷ ಇದೇ ದಿನ 26.65 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 1137.6 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 1480.69 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಗುರುವಾರ ಸರಾಸರಿ ಮಳೆ 4.3 ಮಿ.ಮೀ. ಕಳೆದ ವರ್ಷ ಇದೇ ದಿನ 19.67 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 617.82 ಮಿ.ಮೀ. ಕಳೆದ ವರ್ಷ ಇದೇ ಅವಧಿಯಲ್ಲಿ 809.66 ಮಿ.ಮೀ. ಅಗಿತ್ತು. ಜಿಲ್ಲೆಯಲ್ಲಿ ಹೋಬಳಿವಾರು
ದಾಖಲಾಗಿರುವ ಮಳೆ ವಿವರ
ಮಡಿಕೇರಿ ಕಸಬಾ 19.8, ಸಂಪಾಜೆ 1.6, ಭಾಗಮಂಡಲ 6, ರಾಜಪೇಟೆ ಕಸಬಾ 1.6, ಅಮ್ಮತ್ತಿ 0.5, ಸೋಮವಾರಪೇಟೆ ಕಸಬಾ 5.8, ಶನಿವಾರಸಂತೆ 3.2, ಶಾಂತಳ್ಳಿ 6.4, ಕುಶಾಲನಗರ 2.4, ಸುಂಟಿಕೊಪ್ಪ 8 ಮಿ.ಮೀ. ಮಳೆಯಾಗಿದೆ.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು, ಇಂದಿನ ನೀರಿನ ಮಟ್ಟ 2,834.62 ಅಡಿಗಳು, ಕಳೆದ ವರ್ಷ ಇದೇ ದಿನ 2,857.74 ಅಡಿ. ಹಾರಂಗಿಯಲ್ಲಿ ಬಿದ್ದ ಮಳೆ 2.2 ಮಿ.ಮೀ. ಕಳೆದ ವರ್ಷ ಇದೇ ದಿನ 6.8 ಮಿ.ಮೀ., ಇಂದಿನ ನೀರಿನ ಒಳ ಹರಿವು 746 ಕ್ಯೂಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 5,851 ಕ್ಯೂಸೆಕ್.