ಎಲ್‌ಪಿಜಿ ದರ ಏರಿಕೆಗೆ ಖಂಡನೆ
ಹೊಸದಿಲ್ಲಿ: ತಿಂಗಳಿಗೆ 4 ರೂ.ಗಳಂತೆ ಎಲ್‌ಪಿಜಿ ಸಿಲಿಂಡರ್ ದರವನ್ನು ಏರಿಸಿ, ಮಾರ್ಚ್ ವೇಳೆಗೆ ಸಂಪೂರ್ಣ ಸಬ್ಸಿಡಿಯನ್ನು ತೆಗೆದುಹಾಕುವ ಕೇಂದ್ರ ಸರಕಾರದ ನಿರ್ಧಾರ ಮಂಗಳವಾರ ಸಂಸತ್‌ನ ಉಭಯ ಸದನಗಳಲ್ಲೂ ಭಾರೀ ಚರ್ಚೆಗೆ ಗ್ರಾಸವಾಯಿತು. ಲೋಕಸಭೆ ಹಾಗೂ ರಾಜ್ಯಸಭೆಯ ಕಲಾಪಗಳಲ್ಲಿ ವಿಪಕ್ಷಗಳೆಲ್ಲ ಒಗ್ಗಟ್ಟಾಗಿ ಕೇಂದ್ರದ ನಿರ್ಧಾರದ ವಿರುದ್ಧ ಹರಿಹಾಯ್ದವು.
ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್, ‘ಕಚ್ಚಾ ತೈಲದ ದರ ಬ್ಯಾರೆಲ್‌ಗೆ 111 ಡಾಲರ್ ಇದ್ದದ್ದು ಈಗ 48 ಡಾಲರ್‌ಗೆ ಇಳಿದಿದೆ. ಹೀಗಿರುವಾಗ ಎಲ್‌ಪಿಜಿ ದರ ಇಳಿಕೆ ಮಾಡುವುದನ್ನು ಬಿಟ್ಟು, ಸರ್ಕಾರ ಏರಿಕೆ ಮಾಡಲು ಮುಂದಾಗಿರುವುದು ಅತ್ಯಂತ ಕ್ರೂರ ನಿರ್ಧಾರ,’ ಎಂದರು. ಇದಕ್ಕೆ ಟಿಎಂಸಿ, ಸಿಪಿಎಂ, ಆರ್‌ಎಸ್‌ಪಿ ಸೇರಿದಂತೆ ಇತರ ಪಕ್ಷಗಳೂ ಧ್ವನಿಗೂಡಿಸಿದವು. ಈ ಬಗ್ಗೆ ಸರಕಾರ ಪ್ರತಿಕ್ರಿಯೆ ನೀಡಬೇಕು ಎಂದು ಆಗ್ರಹಿಸಿ, ಕೊನೆಗೆ ವಿಪಕ್ಷಗಳೆಲ್ಲ ಸಭಾತ್ಯಾಗ ಮಾಡಿದವು.
ಇನ್ನು ರಾಜ್ಯಸಭೆಯಲ್ಲೂ ವಿಪಕ್ಷಗಳು ಇದೇ ವಿಚಾರದಲ್ಲಿ ಭಾರೀ ಗದ್ದಲ ಎಬ್ಬಿಸಿದವು. ಪ್ರಧಾನಿ ಮೋದಿ ಅವರು 2.5 ಕೋಟಿ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕ ಒದಗಿಸಿದ್ದಾರಲ್ಲವೇ? ಈಗ ಆ ಮಹಿಳೆಯರ ಗತಿಯೇನು? ಪ್ರಧಾನಿ ಕರೆಯ ಮೇರೆಗೆ ಎಷ್ಟೋ ಮಂದಿ ಎಲ್‌ಪಿಜಿ ಸಬ್ಸಿಡಿಯನ್ನು ಬಿಟ್ಟು ಕೊಟ್ಟಿದ್ದು, ಬಡವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ. ಈಗ ಸರಕಾರ, ಅದೇ ಬಡವರ ಹೊಟ್ಟೆಗೆ ಹೊಡೆಯುತ್ತಿದೆ ಎಂದು ವಿಪಕ್ಷಗಳು ಪ್ರಶ್ನಿಸಿದವು. ಇದಕ್ಕೆ ಪ್ರತಿಕ್ರಿಯಿಸಿದ ತೈಲ ಸಚಿವ ಧರ್ಮೇಂದ್ರ ಪ್ರಧಾನ್, ಬೆಲೆ ಏರಿಕೆ ಮಾಡುತ್ತಾ ಬಂದು ಸಬ್ಸಿಡಿಯನ್ನು ರದ್ದು ಮಾಡುವ ಪ್ರಸ್ತಾವವನ್ನು ಯುಪಿಎ ಸರಕಾರವಿದ್ದಾಗಲೇ ಹಾಕಿತ್ತು ಎಂದು ನುಡಿದರು. ವಿಪಕ್ಷಗಳ ಗದ್ದಲದಿಂದಾಗಿ ಹಲವು ಬಾರಿ ಕಲಾಪವನ್ನು ಮುಂದೂಡಬೇಕಾಯಿತು. ಇದೇ ವೇಳೆ, ದೇಶದ 81 ಕೋಟಿ ಮಂದಿಗೆ ಕೆಜಿಗೆ 2 ರೂ. ಮತ್ತು 3 ರೂ.ಗಳಂತೆ ನೀಡಲಾಗುತ್ತಿರುವ ಗೋಧಿ ಮತ್ತು ಅಕ್ಕಿಯ ಬೆಲೆಯನ್ನು 2018ರವರೆಗೂ ಪರಿಷ್ಕರಿಸುವುದಿಲ್ಲ ಎಂದು ಆಹಾರ ಸಚಿವ ರಾಮ್‌ವಿಲಾಸ್ ಪಾಸ್ವಾನ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಅಪನಗದೀಕರಣದ ಪ್ರಶ್ನೆ: ನೋಟು ಅಮಾನ್ಯ ನಿರ್ಧಾರ ಕುರಿತಂತೆಯೂ ಕೇಂದ್ರ ಸರಕಾರವನ್ನು ವಿಪಕ್ಷಗಳು ಲೋಕಸಭೆಯಲ್ಲಿ ತರಾಟೆಗೆ ತೆಗೆದುಕೊಂಡವು. ಅಪಮೌಲ್ಯದ ಅನಂತರ ಬ್ಯಾಂಕ್‌ಗಳಿಗೆ ಎಷ್ಟು ಹಳೇ ನೋಟುಗಳು ಬಂದವು, ಎಷ್ಟು ಕಪ್ಪುಹಣ ಸಿಕ್ಕಿತು ಹಾಗೂ ಎಷ್ಟು ನೋಟುಗಳನ್ನು ಈವರೆಗೆ ಮುದ್ರಿಸಲಾಗಿದೆ ಎಂಬ ಮಾಹಿತಿ ನೀಡಿ ಎಂದು ಕಾಂಗ್ರೆಸ್‌ನ ವೇಣುಗೋಪಾಲ್ ಆಗ್ರಹಿಸಿದರು. ಜತೆಗೆ, ಅಪನಗದೀಕರಣದ ಬಳಿಕ ಇಡೀ ದೇಶ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದೆ. ಉದ್ಯೋಗ ಸೃಷ್ಟಿ ಕುಸಿಯುತ್ತಿದೆ. ಸರಕಾರ ಹೇಳಿದ್ದಕ್ಕೆ ವಿರುದ್ಧವಾಗಿ ಎಲ್ಲವೂ ನಡೆಯುತ್ತಿದೆ. ನೋಟು ಅಪಮೌಲ್ಯದಿಂದ ಭಯೋತ್ಪಾದನೆ ನಿರ್ಮೂಲನೆ ಆಗುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, ಕಾಶ್ಮೀರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸಿಗುತ್ತಿಲ್ಲ, ಅಮರನಾಥ ಯಾತ್ರಿಕರ ಮೇಲೆ ಉಗ್ರರ ದಾಳಿ ನಡೆಯುತ್ತಿದೆ. ನೋಟು ಅಮಾನ್ಯಕ್ಕೆ ಮುನ್ನ 119.07 ಕೋಟಿ ಇದ್ದ ಡಿಜಿಟಲ್ ವಹಿವಾಟು ಇದೀಗ 111.45 ಕೋಟಿಗೆ ಕುಸಿದಿದೆ. ಇದೆಲ್ಲ ಏನು ಎಂದೂ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ‘ಜಮ್ಮು- ಕಾಶ್ಮೀರ ಸೇರಿದಂತೆ ದೇಶದಲ್ಲಿ ಉಗ್ರರಿಗೆ ರವಾನೆಯಾಗುತ್ತಿದ್ದ ಹಣಕಾಸನ್ನು ತಡೆ ಹಿಡಿಯುವಲ್ಲಿ ನೋಟು ಅಮಾನ್ಯ ನಿರ್ಧಾರ ನೆರವಾಗಿದೆ’ ಎಂದರು.
ರಾಜ್ಯಸಭೆಗೆ ಗೈರಾಗಿದ್ದಕ್ಕೆ ಶಾ ಗರಂ
ವಿಪ್ ಜಾರಿ ಮಾಡಿದ್ದರೂ ರಾಜ್ಯಸಭೆ ಕಲಾಪಕ್ಕೆ ಗೈರಾದ ಕೇಂದ್ರ ಸಚಿವರು, ಸದಸ್ಯರ ವಿರುದ್ಧ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕಿಡಿಕಾರಿದ್ದಾರೆ. ಮಂಗಳವಾರ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಗೈರಾದ ಎಲ್ಲ ಸದಸ್ಯರೂ ಕಾರಣ ಹೇಳಿ ಲಿಖಿತ ವಿವರಣೆ ನೀಡುವಂತೆ ಸೂಚಿಸಿದ್ದಾರೆ. ರಾಜ್ಯಸಭೆಯಲ್ಲಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸೋಮವಾರ ವಿಪಕ್ಷಗಳೆಲ್ಲ ಒಟ್ಟು ಸೇರಿ ಮೂರು ತಿದ್ದುಪಡಿಗಳನ್ನು ತಂದು, ಅದಕ್ಕೆ ಅಂಗೀಕಾರ ಪಡೆದಿದ್ದವು. ಇದರಿಂದ ಕೇಂದ್ರ ಸರಕಾರ ತೀವ್ರ ಮುಜುಗರ ಅನುಭವಿಸಿತ್ತು. ಸಚಿವರಾದ ರವಿಶಂಕರ್ ಪ್ರಸಾದ್, ಪಿಯೂಶ್ ಗೋಯಲ್, ಧರ್ಮೇಂದ್ರ ಪ್ರಧಾನ್ ಗೈರಾಗಿದ್ದವರಲ್ಲಿ ಪ್ರಮುಖರು. ಜತೆಗೆ, ಕಾಂಗ್ರೆಸ್ ಪಕ್ಷವು ಮಸೂದೆಯನ್ನು ಹಳಿ ತಪ್ಪಿಸುವ ಸಂಚು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಕೇರಳದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಾದಾಗ ಗೃಹ ಸಚಿವರು ಅಲ್ಲಿನ ಸಿಎಂಗೆ ದೂರವಾಣಿ ಕರೆ ಮಾಡಿ ಮಾತಾಡಿದಂತೆಯೇ, ಗೋರಕ್ಷಣೆ ಹೆಸರಲ್ಲಿ ಹತ್ಯೆಗಳು ನಡೆದಾಗ ಆಯಾ ರಾಜ್ಯಗಳ ಸಿಎಂಗಳೊಂದಿಗೆ ಸಚಿವರು ಮಾತನಾಡಿದ್ದರೆ, ನಾವೀಗ ಹಲವು ಜೀವಗಳನ್ನು ರಕ್ಷಿಸಬಹುದಿತ್ತು.
– ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ನಾಯಕ