ಬೆಂಗಳೂರು: ಜೂನ್‌ನಿಂದ ಸೆಪ್ಟಂಬರ್‌ವರೆಗಿನ ಮುಂಗಾರು ಮಳೆಯ ಅವಧಿ ಮುಗಿದಿದ್ದು, ಈ ಬಾರಿ ವಾಡಿಕೆಗಿಂತ ಶೇ. 29 ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ವಾಡಿಕೆಯಂತೆ ನಾಲ್ಕು ತಿಂಗಳಲ್ಲಿ 831.8 ಮಿ.ಮೀ. ವಾಡಿಕೆ ಮಳೆಯಾಗಲಿದೆ. ಈ ಬಾರಿ 1075.2 ಮಿ.ಮೀ. ಮಳೆಯಾಗಿದ್ದು, ಶೇ.29 ಹೆಚ್ಚಾಗಿದೆ.
ಸಾಮಾನ್ಯವಾಗಿ ಸೆಪ್ಟಂಬರ್ ತಿಂಗಳವರೆಗೆ ನೈಋತ್ಯ ಮುಂಗಾರು ಮಳೆಯಾಗಲಿದೆ ಎಂದು ಅಂದಾಜಿಸುತ್ತೇವೆ. ಆದರೆ ಮುಂಗಾರು ಮಾರುತಗಳು ಎಲ್ಲಿಯವರೆಗೆ ಬೀಸುತ್ತವೆಯೇ ಅಲ್ಲಿಯವರೆಗೂ ಮುಂಗಾರು ಮಳೆಯೆಂದೇ ಪರಿಗಣಿಸಲಾಗುತ್ತದೆ. ಈ ಬಾರಿ ಕೇರಳದಿಂದ ಆರಂಭವಾಗಿರುವ ನೈಋತ್ಯ ಮುಂಗಾರು ಸದ್ಯ ಗುಜರಾತ್‌ನಲ್ಲಿದ್ದು, ಇನ್ನೂ ಒಂದು ವಾರ ಕಾಲ ಉತ್ತರ ಭಾರತದಲ್ಲಿ ಮಳೆಯಾಗಲಿದೆ. ಅನಂತರ ಮುಂಗಾರು ಪೂರ್ಣವಾಗುತ್ತದೆ. ಅದಾದ ಬಳಿಕ ಈಶಾನ್ಯ ಮುಂಗಾರು ಮಾರುತಗಳು (ಹಿಂಗಾರು) ಆರಂಭಗೊಳ್ಳಲಿವೆ ಎಂದು ಬೆಂಗಳೂರು ಹವಾಮಾನ ಕೇದ್ರದ ಆಡಳಿತಾಧಿಕಾರಿ ಸದಾನಂದ ಅಡಿಗ ತಿಳಿಸಿದ್ದಾರೆ.
ಈ ಬಾರಿಯ ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಬೆಂಗಳೂರಿನಲ್ಲಿ 15 ವರ್ಷಗಳ ಬಳಿಕ ದಾಖಲೆಯ ಮಳೆಯಾಗಿದೆ. ಹಿಂದೆಂದೂ ಕಾಣದಂಥ ಪ್ರವಾಹ ಉಂಟಾಗಿತ್ತು. ಹಿಂದಿನ ವರ್ಷಗಳಲ್ಲಿ ಬಯಲು ಸೀಮೆ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರಿನಲ್ಲಿ ಕೊರತೆ ಮಳೆಯಾಗಿತ್ತು. ಈ ಬಾರಿ ಉತ್ತಮ ಮಳೆಯಾಗಿದೆ.
ಉತ್ತರ ಒಳನಾಡು ಜಿಲ್ಲೆಗಳು ಸೇರಿ ಯಾವುದೇ ಜಿಲ್ಲೆಗಳಲ್ಲಿ ಈ ವರ್ಷ ವಾಡಿಕೆಗಿಂತ ಎಲ್ಲಿಯೂ ಮಳೆಯಾಗದಿರುವುದು ಗಮನಾರ್ಹ ಅಂಶವಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.