Advertisement

ಮುಂಗಾರು ಪೂರ್ವ ಮಳೆಯಬ್ಬರಕ್ಕೆ ಜನ ತತ್ತರ

04:30 PM May 19, 2022 | Team Udayavani |

ಗದಗ: ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಸುಮಾರು 88.9 ಹೆಕ್ಟೇರ್‌ ಬೆಳೆ ಹಾನಿಯಾಗಿದೆ. 148 ಮನೆಗಳು ಹಾನಿಯಾಗಿದ್ದು, ನೂರಾರು ಕುಟುಂಬಗಳನ್ನು ಬೀದಿಗೆ ತಂದು ನಿಲ್ಲಿಸಿದೆ. ಸಿಡಿಲಿಗೆ 6 ಜನರು ಬಲಿಯಾದರೆ, 48 ಜಾನುವಾರುಗಳು ಅಸುನೀಗಿವೆ. ಕಳೆದ ನಾಲ್ಕೈದು ವರ್ಷಗಳಿಂದ ಮುಂಗಾರು ಪೂರ್ವದಲ್ಲೇ ಭರ್ಜರಿ ಮಳೆ ದಾಖಲಾಗುತ್ತಿದೆ.

Advertisement

ಅದರಂತೆ ಈ ಬಾರಿಯೂ ಮುಂಗಾರು ಪೂರ್ವದಲ್ಲೇ ಮಳೆ ಚುರುಕು ಪಡೆದಿದೆ. ವಾರ್ಷಿಕ 641.1 ಮಿ.ಮೀ. ಮಳೆಯಾಗುತ್ತದೆ. ಈ ಪೈಕಿ ಜನವರಿಯಿಂದ ಮೇ ಅಂತ್ಯದ ವರೆಗೆ 75.5 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಮೇ 17ರ ವರೆಗೆ 78.4 ಮಿ.ಮೀ. ಮಳೆಯಾಗಿದೆ. ಇದರಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲೇ ಹೆಚ್ಚು ಮಳೆ ದಾಖಲಾಗಿದೆ. ಮಳೆಯೊಂದಿಗೆ ಬೀಸುವ ಬಿರುಗಾಳಿ, ಗುಡುಗು ಹಾಗೂ ಸಿಡಿಲು ಹಲವು ಅನಾಹುತಗಳಿಗೆ ಕಾರಣವಾಗಿದೆ.

ಸಿಡಿಲಿಗೆ 6 ಜನ-ಹತ್ತಾರು ಕುರಿ ಬಲಿ: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಮಳೆಯಿಂದ ಸೃಷ್ಟಿಯಾದ ಅನಾಹುತಕ್ಕೆ 6 ಜನರು ಪ್ರಾಣ ತೆತ್ತಿದ್ದಾರೆ. ಮುಂಡರಗಿ, ಶಿರಹಟ್ಟಿ ತಾಲೂಕಿನ ತಲಾ ಇಬ್ಬರು, ರೋಣ ತಾಲೂಕಿನ ಒಬ್ಬರು ಸಿಡಿಲಿಗೆ ಬಲಿಯಾಗಿದ್ದರೆ, ನರಗುಂದ ತಾಲೂಕಿನಲ್ಲಿ ಮನೆ ಕುಸಿದು ಒಬ್ಬರು ಮೃತಪಟ್ಟಿದ್ದಾರೆ.

ಅದರಂತೆ ಸಿಡಿಲಿಗೆ 6 ಎತ್ತು, ಎಮ್ಮೆಗಳು ಹಾಗೂ 42 ಕುರಿ, ಮೇಕೆಗಳು ಮೃತಪಟ್ಟಿವೆ. 148 ಮನೆಗಳಿಗೆ ಹಾನಿ: ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಚುರುಕಾಗಿದೆ. ಅದರೊಂದಿಗೆ ಕಚ್ಚಾ ಹಾಗೂ ಪಕ್ಕಾ ಸೇರಿದಂತೆ ಒಟ್ಟು 148 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಈ ಪೈಕಿ ಗದಗ ತಾಲೂಕಿನಲ್ಲಿ ಗರಿಷ್ಠ 52 ಮನೆಗಳು ಧರೆಗುರುಳಿವೆ. ನರಗುಂದ ತಾಲೂಕಿನ 36, ಲಕ್ಷ್ಮೇಶ್ವರದಲ್ಲಿ 24, ರೋಣದದಲ್ಲಿ 15, ಶಿರಹಟ್ಟಿಯಲ್ಲಿ 12, ಮುಂಡರಗಿ 8 ಹಾಗೂ ಗಜೇಂದ್ರಗಡದಲ್ಲಿ 1 ಮನೆಗಳು ಭಾಗಶಃ ಹಾನಿಗೊಳಗಿದೆ. ಈ ಪೈಕಿ ಶೇ.95 ರಷ್ಟು ಮನೆಗಳಿಗೆ ಎನ್‌ಡಿಆರ್‌ಎಫ್‌ ನಿಯಮಾವಳಿಂತೆ ಪರಿಹಾರ ವಿತರಿಸಲಾಗಿದೆಂದು ಆಯಾ ತಾಲೂಕು ತಹಶೀಲ್ದಾರ್‌ರು ಮಾಹಿತಿ ನೀಡಿದ್ದಾರೆ.

88.9 ಹೆಕ್ಟೇರ್‌ ಬೆಳೆ ಹಾನಿ: ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಗಾಳಿಗೆ ಸುಮಾರು 88.9 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದಿದ್ದ ವಿವಿಧ ಬೆಳೆಗಳು ನೆಲ ಕಚ್ಚಿವೆ. ಗದಗ ತಾಲೂಕಿನ ಮುಗುಂದ, ಲಕ್ಷ್ಮೇಶ್ವರ, ಮುಂಡರಗಿ ಮತ್ತು ರೋಣ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆಗಳು ನೆಲಕಚ್ಚಿವೆ. ಈ ಪೈಕಿ ಪೇರಲ, ಬಾಳೆ ಗಿಡಗಳು ಮತ್ತಿತರೆ ಬೆಳೆಗಳು ಹಾನಿಗೀಡಾಗಿದ್ದು, ರೈತರು ಕಣ್ಣೀರಿಡುವಂತಾಗಿದೆ.

Advertisement

ಗದಗ ತಾಲೂಕಿನ 52 ಮನೆಗಳು ಹಾನಿಗೊಳಗಾಗಿದ್ದು, 45 ಮನೆಗಳಿಗೆ ಎನ್‌ ಡಿಆರ್‌ಎಫ್‌ ನಿಯಮಾವಳಿಯಂತೆ ತಲಾ 3,200 ರೂ. ಪರಿಹಾರ ವಿತರಿಸಲಾಗಿದೆ. ಇನ್ನುಳಿದವುಗಳಲ್ಲಿ ಕೆಲ ಮನೆಗಳ ಸಮೀಕ್ಷೆ ನಡೆಯಬೇಕಿದೆ. ಇನ್ನೂ, ಕೆಲವು ಎನ್‌ ಡಿಆರ್‌ಎಫ್‌ ನಿಯಮದಲ್ಲಿ ಬರುತ್ತಿಲ್ಲ. ಸಿಡಿಲಿಗೆ 32 ಜಾನುವಾರುಗಳು ಬಲಿಯಾಗಿದ್ದು, ಸಂಬಂಧಿಸಿದವರಿಗೆ ಸುಮಾರು 96 ಸಾವಿರ ರೂ. ಪರಿಹಾರ ವಿತರಿಸಲಾಗಿದೆ. –ಕಿಶನ್‌ ಕಲಾಲ್‌, ಗದಗ ತಹಶೀಲ್ದಾರ್‌

ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಟಗೇರಿ ಹೋಬಳಿ ವ್ಯಾಪ್ತಿಯಲ್ಲಿ ನಮ್ಮ ಪರಿಚಯ ಸ್ಥರ ಮನೆ ಕುಸಿದಿದೆ. ಅದಕ್ಕೆ ಕೇವಲ 3,500 ರೂ. ಪರಿ ಹಾರ ದೊರಕಿದೆ. ಅದರಿಂದ ಮನೆ ದುರಸ್ತಿ ಮಾಡಿ ಕೊಳ್ಳಲು ಸಾಧ್ಯವಿಲ್ಲ. ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಸರಕಾರ ನಿಯಮಾವಳಿ ಪರಿಷ್ಕರಿಸಿ, ಕನಿಷ್ಟ 10 ಸಾವಿರ ರೂ. ಪರಿಹಾರ ನೀಡಬೇಕು. –ರಾಘವೇಂದ್ರ ಯಳವತ್ತಿ, ನಗರಸಭೆ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next