Advertisement
ಮುಂಗಾರು ಪೂರ್ವ ಮಳೆ ನಂಬಿ ಬಿತ್ತಿದವರು ಇಂದು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಜೂನ್ ಮೊದಲವಾರದಲ್ಲಿ ಮುಂಗಾರು ಪ್ರವೇಶಿಸುವುದು ವಾಡಿಕೆ, ಆದರೆ, ಈ ಮುಂಗಾರು ಹಂಗಾಮಿನಲ್ಲಿ ಮೋಡ ಕವಿದ ವಾತವರಣದಲ್ಲಿ ಸಾಧಾರಣ ಮಳೆಯಾಗಿದ್ದು ಬಿಟ್ಟರೆ, ದೊಡ್ಡ ಮಳೆಯಾಗಿಲ್ಲ. ಏಪ್ರಿಲ್-ಮೇ ತಿಂಗಳಲ್ಲಿ ಬಿತ್ತಿದ ಹತ್ತಿ ಈಗ ಹೂ ಬಿಡುವ ಹಂತದಲ್ಲಿದ್ದು ಮಳೆ ಇಲ್ಲದೆ ಸೊರಗುತ್ತಿದೆ.
Related Articles
Advertisement
ಅಚ್ಚುಕಟ್ಟಿಗೂ ಹೊಡೆತ: ಇನ್ನು ಕಾವೇರಿ ಕಣಿವೆಯ ಕಬಿನಿ, ಹಾರಂಗಿ ಜಲಾಶಯಗಳು ಜುಲೈ ಎರಡನೇ ವಾರವಾದರೂ ಭರ್ತಿಯಾಗದಿರುವುದು, ರೈತರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಭತ್ತದ ಸಸಿಮಡಿ ಮಾಡಿಕೊಂಡು ನಾಲೆಯಲ್ಲಿ ನೀರು ಬಿಡುವುದನ್ನು ಎದುರು ನೋಡುತ್ತಿದ್ದರೆ, ಕೇರಳದ ವೈನಾಡು ಪ್ರದೇಶದಲ್ಲಿ ಮಳೆ ಕಡಿಮೆಯಾಗಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯಕ್ಕೆ ಬರುವ ಒಳ ಹರಿವು ಕಡಿಮೆಯಾಗಿದೆ. ಇತ್ತ ಕೊಡಗು ಜಿಲ್ಲೆಯಲ್ಲೂ ಮಳೆ ಕಡಿಮೆಯಿರುವುದರಿಂದ ಹಾರಂಗಿ ಜಲಾಶಯಕ್ಕೂ ಹೆಚ್ಚಿನ ಒಳ ಹರಿವಿಲ್ಲದೆ, ಜಿಲ್ಲೆಯ ಈ ಎರಡೂ ಜಲಾಶಯಗಳೂ ಇನ್ನೂ ಭರ್ತಿಯಾಗಿಲ್ಲ.
ಜಿಲ್ಲೆಯಲ್ಲಿ ಬಿತ್ತನೆ ಪರಿಸ್ಥಿತಿ: ಮೈಸೂರು ಜಿಲ್ಲೆಯು ಭೌಗೋಳಿಕವಾಗಿ 6,76, 382 ಹೆಕ್ಟೇರ್ ವಿಸ್ತೀರ್ಣವಿದ್ದು, ಈ ಪೈಕಿ 3,70,790 ಹೆಕ್ಟೇರ್ ಭೂ ಪ್ರದೇಶವು ಸಾಗುವಳಿಗೆ ಯೋಗ್ಯವಾಗಿದ್ದರೆ, 1,54,117 ಹೆಕ್ಟೇರ್ ಪ್ರದೇಶವು ನೀರಾವರಿಗೆ ಒಳಪಟ್ಟಿದೆ.
2017-18ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 4.320 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಗುರಿ ಹೊಂದಲಾಗಿದ್ದು, ಈವರೆಗೆ 222261 ಹೆಕ್ಟೇರ್ ಪ್ರದೇಶದಲ್ಲಿ (ಶೇ.55) ಬಿತ್ತನೆಯಾಗಿದೆ. ಮಳೆ ಆ]ತ ಪ್ರದೇಶದಲ್ಲಿ 286220 ಹೆಕ್ಟೇರ್ ಗುರಿಗೆ ಈವರೆಗೆ 219467 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ.
ನೀರಾವರಿ ಪ್ರದೇಶದ 114100 ಹೆಕ್ಟೇರ್ ಪ್ರದೇಶದ ಗುರಿಗೆ ಈವರೆಗೆ 2310 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಏಕದಳ ಧಾನ್ಯದ ಬೆಳೆಗಳಾದ ರಾಗಿ, ಮುಸುಕಿನಜೋಳ, ಜೋಳ ಬೆಳೆಗಳನ್ನು 40700 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ದ್ವಿದಳ ಧಾನ್ಯದ ಬೆಳೆಗಳಾದ ಅಲಸಂದೆ, ಹೆಸರು, ಉದ್ದು, ಅವರೆ ಮತ್ತು ತೊಗರಿ ಬೆಳೆಗಳನ್ನು 53464 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಎಣ್ಣೆಕಾಳು ಬೆಳೆಗಳಾದ ನೆಲಗಡಲೆ, ಹರಳು, ಎಳ್ಳು 7796 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು, ವಾಣಿಜ್ಯ ಬೆಳೆಗಳಾದ ಹತ್ತಿ, ಕಬ್ಬು, ಹೊಗೆಸೊಪ್ಪು ಬೆಳೆಗಳನ್ನು 120144 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ ಎನ್ನುತ್ತಾರೆ ಜಂಟಿ ಕೃಷಿ ನಿರ್ದೇಶಕ ಸೋಮಸುಂದ್ರು.
2017ನೇ ಸಾಲಿನಲ್ಲಿ ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 795 ಮಿ.ಮೀ ಇದ್ದು, ಎಲ್ಲ ತಾಲೂಕುಗಳಲ್ಲೂ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇದ್ದುದರಲ್ಲಿ ಪಿರಿಯಾಪಟ್ಟಣ ತಾಲೂಕಿನಲ್ಲಿ ಅತಿ ಹೆಚ್ಚು ಮಳೆಯಾಗಿದ್ದರೆ, ಎಚ್.ಡಿ.ಕೋಟೆ ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿರುವುದರಿಂದ ಕೆರೆ-ಕಟ್ಟೆಗಳು ತುಂಬಿದ್ದು, ಸದ್ಯ ದನ-ಕರುಗಳ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಈ ವರ್ಷವು ಕಾವೇರಿ ಕಣಿವೆಯ ಜಲಾಶಯಗಳು ಭರ್ತಿಯಾಗದಿದ್ದರೆ, ಕುಡಿಯುವ ನೀರಿಗೆ ತತ್ವಾರ ಉಂಟಾಗಲಿದೆ.
ಜಿಲ್ಲೆಯಲ್ಲಿ ಮುಸುಕಿನ ಜೋಳ, ರಾಗಿ ಬಿತ್ತನೆ ನಡೆಯುತ್ತಿದ್ದು, ಜುಲೈ ನಂತರ ಭತ್ತ ಬಿತ್ತನೆ ಆರಂಭವಾಗಲಿದೆ. ಅಗತ್ಯವಾದ ಎಲ್ಲ ಬಿತ್ತನೆ ಬೀಜಗಳೂ ದಾಸ್ತಾನಿದ್ದು, ಯಾವುದೇ ತೊಂದರೆ ಇಲ್ಲ.-ಸೋಮಸುಂದ್ರು, ಜಂಟಿ ಕೃಷಿ ನಿರ್ದೇಶಕ * ಗಿರೀಶ್ ಹುಣಸೂರು