Advertisement

ಉಡುಪಿ ಜಿಲ್ಲೆಯಾದ್ಯಂತ ಮುಂಗಾರು ಚುರುಕು

11:32 PM Jun 10, 2020 | Sriram |

ಉಡುಪಿ: ಜಿಲ್ಲೆಯಾದ್ಯಂತ ಮುಂಗಾರು ಚುರುಕು ಪಡೆದುಕೊಂಡಿದೆ. ಬುಧವಾರ ಸಂಜೆ ವೇಳೆಗೆ ಜಿಲ್ಲೆಯ ಹಲವು ಭಾಗಗಳಲ್ಲಿ ಮಳೆಯಾಗಿದೆ.

Advertisement

ಜೂ.12ರಿಂದ 15ರ ವರೆ‌ಗೆ ಕರಾವಳಿ ಭಾಗದಲ್ಲಿ ಭಾರೀ ಗಾಳಿ, ಮಳೆ ಆಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಬುಧವಾರ ಮುನ್ಸೂಚನೆ ನೀಡಿದ್ದು, ಅದರ ಬೆನ್ನಲ್ಲೆ ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಬಿರುಸು ಪಡೆದುಕೊಂಡಿದೆ.

ನಗರದಲ್ಲಿ ಬೆಳಗ್ಗೆ ತುಸು ಕಾಲ ಸಾಧಾರಣ ಮಳೆಯಾಗಿತ್ತು. ಬಳಿಕ ಮಧ್ಯಾಹ್ನದ ತನಕವೂ ಮೋಡದ ವಾತಾವರಣ ಮುಂದುವರಿದಿತ್ತು. ಅನಂತರದಲ್ಲಿ ಕೆಲಸ ಸಮಯ ಬಿಸಿಲಿನ ವಾತಾವರಣ ಕಂಡು ಬಂದಿತ್ತಾದರೂ, ಸಂಜೆ ವೇಳೆಗೆ ಮಳೆ ಸುರಿದಿದೆ. ಮಳೆಯಿಂದ ನಗರದ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ನಗರ, ಮಣಿಪಾಲ, ಉದ್ಯಾವರ. ಮಲ್ಪೆ, ಕರಾವಳಿ, ಬನ್ನಂಜೆ, ಶಿರಿಬೀಡು, ಕಲ್ಸಂಕ, ಎಂಜಿಎಂ, ಸಿಂಡಿಕೇಟ್‌ ಸರ್ಕಲ್‌, ಟೈಗರ್‌ ಸರ್ಕಲ್‌, ಎಂಐಟಿ ಜಂಕ್ಷನ್‌, ಪರ್ಕಳ, ಪುತ್ತೂರು, ಬೈಲೂರು, ದೊಡ್ಡಣಗುಡ್ಡೆ, ಆದಿ ಉಡುಪಿ, ಇಂದ್ರಾಳಿ, ಮಲ್ಪೆ ಪರಿಸರ ಮುಂತಾದೆಡೆಗಳಲ್ಲಿ ಉತ್ತಮ ಮಳೆಯಾಗಿತ್ತು.

ಮಳೆಗೆ ನಗರ ಹಾಗೂ ಇತರ ಪ್ರದೇಶಗಳ ಅನೇಕ ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿದು ಸಂಚಾರಕ್ಕೆ ಅಡಚಣೆಯಾಯಿತು. ಹೆದ್ದಾರಿ ಹಾಗೂ ಒಳಭಾಗಗಳ ರಸ್ತೆಗಳ ಎರಡು ಪಾರ್ಶ್ವಗಳಲ್ಲಿ ಮಳೆ ನೀರು ಸರಿಯಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಎತ್ತರ ಪ್ರದೇಶದಿಂದ ನೀರು ತಗ್ಗು ಪ್ರದೇಶಗಳ ಕಡೆಗೆ ಹರಿದು ಬಂದಿತ್ತು. ಪರಿಣಾಮ ತಗ್ಗು ಪ್ರದೇಶಗಳ ಸ್ಥಳಗಳಲ್ಲಿ ನೀರು ನಿಂತು ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸಿದರು.

Advertisement

ಮಂಗಳವಾರ ತಡರಾತ್ರಿ ಕೂಡ ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಉತ್ತಮ ಮಳೆಯಾಗಿತ್ತು. ಬುಧವಾರ ನಸುಕಿನಲ್ಲೂ ಗುಡುಗು, ಮಿಂಚು ಮಳೆಯಾಗಿದೆ.ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಬಂದು ಹೋಗುವುದು ಮಾಡುತ್ತಿತ್ತು. ಆದರೆ ಇದೀಗ ಮಳೆ ಚುರುಕು ಗೊಂಡಿರುವುದರಿಂದ ಮುಂದಿನ ದಿನಗಳಲ್ಲಿ ಪೂರ್ಣ ಮಳೆ ಹಿಡಿಯುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಬುಧವಾರ ಸಂಜೆ ಹೊತ್ತು ಸುದೀರ್ಘ‌ ಅವಧಿ ಮಳೆ ಸುರಿದ ಕಾರಣ ಕೊಡೆ ಇಲ್ಲದೆ ನಾಗರಿಕರು, ಉದ್ಯೋಗಿಗಳು ಒದ್ದೆಯಾಗಿ ಓಡಾಡುತ್ತಿದ್ದ ದೃಶ್ಯ ನಗರದ ಅಲ್ಲಲ್ಲಿ ಕಂಡುಬಂತು.

ಕಾರ್ಕಳದಲ್ಲೂ ಮಳೆ
ಕಾರ್ಕಳ, ಹೆಬ್ರಿ, ಕಾಪು ಈ ಎಲ್ಲ ತಾಲೂಕುಗಳಲ್ಲಿ ಕೂಡ ಉತ್ತಮ ಮಳೆಯಾದ ಬಗ್ಗೆ ವರದಿಯಾಗಿದೆ. ಬೆಳ್ಮಣ್‌, ಮುಂಡ್ಕೂರು ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಹಾನಿ ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ.

ಕುಂದಾಪುರದಲ್ಲೂ ಬಿರುಸಿನ ಮಳೆ
ಕುಂದಾಪುರ ನಗರವೂ ಸೇರಿದಂತೆ ತಾಲೂಕಿನ ವಿವಿ ಧೆಡೆ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ, ಸಂಜೆ ಉತ್ತಮ ಮಳೆಯಾಗಿದೆ. ಬುಧವಾರ ಬೆಳಗ್ಗೆವರೆಗೆ ನಾವುಂದ 11, ಕಾಳಾವರ 5, ಶಂಕರ ನಾರಾಯಣ 6, ಬಿಜೂರು 14, ಹೆಂಗವಳ್ಳಿ 6, ಕೋಣಿ 6, ಕುಂಭಾಶಿ 18, ಮೊಳಹಳ್ಳಿ 4, ಚಿತ್ತೂರು 14, ಗಂಗೊಳ್ಳಿ 7, ಗುಜ್ಜಾಡಿ 7, ಹಕ್ಲಾಡಿ 12, ಹೆಮ್ಮಾಡಿ 5, ಕಟ್‌ಬೆಲೂ¤ರು 4, ತಗ್ಗರ್ಸೆ 19 ಮಿ.ಮೀ. ಮಳೆಯಾಗಿದೆ. ಕೋಟೇಶ್ವರ, ಬೀಜಾಡಿ, ಗೋಪಾಡಿ, ವಕ್ವಾಡಿ, ಕಾಳಾವರ, ಉಳೂ¤ರು, ಬಿದ್ಕಲ್‌ಕಟ್ಟೆ , ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಸಿದ್ದಾಪುರ, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಹಾಲಾಡಿ, ಗೋಳಿಯಂಗಡಿ, ಬೆಳ್ವೆ , ಮಡಾಮಕ್ಕಿ , ಹೆಂಗವಳ್ಳಿ , ಅಮಾಸೆಬೈಲು, ಉಳ್ಳೂರು-74 , ಬಸ್ರೂರು ಪರಿಸರದಲ್ಲಿ ಉತ್ತಮ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next