ಮಂಗಳೂರು: ಪೂರ್ವ ಮುಂಗಾರು ಋತು ಈ ತಿಂಗಳಾಂತ್ಯಕ್ಕೆ ಕೊನೆಗೊಳ್ಳಲಿದ್ದು, ಅರಬಿ ಸಮುದ್ರದಲ್ಲಿ ಮೇ 31ಕ್ಕೆ ವಾಯುಭಾರ ಕುಸಿತ ಉಂಟಾಗಿ ಜೂನ್ ಮೊದಲ ವಾರದಲ್ಲೇ ರಾಜ್ಯ ಕರಾವಳಿ ಭಾಗಕ್ಕೆ ಮುಂಗಾರು ಮಾರುತ ಅಪ್ಪಳಿಸುವ ಮುನ್ಸೂಚನೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 1ರಂದು ಕೇರಳ ಕರಾವಳಿ ತೀರಕ್ಕೆ ಮುಂಗಾರು ಅಪ್ಪಳಿಸುವ ನಿರೀಕ್ಷೆಯಿದ್ದು ಬಳಿಕ ಕರಾವಳಿ ತೀರ ಪ್ರವೇಶಿಸುವ ಮೂಲಕ ಈ ಋತುವಿನ ಮಳೆಗಾಲ ಪ್ರಾರಂಭವಾಗಲಿದೆ.
ಈ ಬಾರಿ ಮುಂಗಾರು ವಾಡಿಕೆಯಂತೆ ಉತ್ತಮ ಪ್ರಮಾಣದಲ್ಲಿ ಮಳೆ ಸುರಿಸಬಹುದು. ಆ ಪ್ರಕಾರ, ಕರಾವಳಿ ಭಾಗದಲ್ಲಿ ಮುಂಗಾರು ಋತುವಿನಲ್ಲಿ ಒಟ್ಟು 3019 ಮಿ.ಮೀ.ನಷ್ಟು ವಾಡಿಕೆ ಮಳೆಯಾಗಬೇಕು. ಕರಾವಳಿಯಲ್ಲಿ ಕಳೆದ ಎರಡು ವರ್ಷವೂ ಮುಂಗಾರು ಉತ್ತಮವಾಗಿತ್ತು.
ಹವಾಮಾನ ಇಲಾಖೆಯ ವಾಡಿಕೆಯಂತೆ ಮೇ 31ಕ್ಕೆ ಪೂರ್ವ ಮುಂಗಾರು ಋತು ಕೊನೆಗೊಳ್ಳಲಿದ್ದು, ಈ ವರ್ಷ ಮುಂಗಾರು ಪೂರ್ವ ಮಳೆಯು ವಾಡಿಕೆಯ ಗುರಿ ತಲುಪುವುದು ಅನುಮಾನ. ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ, ಕಳೆದ ವರ್ಷ ಅತೀ ಕಡಿಮೆ ಅಂದರೆ ಶೇ.74ರಷ್ಟು ಮಳೆ ಪ್ರಮಾಣ ದಾಖಲಾಗಿತ್ತು.
ಕರಾವಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ಮಾರ್ಚ್ 1ರಿಂದ ಮೇ 29ರವರೆಗಿನ ಅಂಕಿ-ಅಂಶದಂತೆ ದ.ಕ. ಜಿಲ್ಲೆಯಲ್ಲಿ 210 ಮಿ.ಮೀ. ವಾಡಿಕೆ ಮಳೆ ನಿರೀಕ್ಷಿಸಲಾಗಿದ್ದು, ಒಟ್ಟು 216 ಮಿ.ಮೀ. ಮಳೆಯಾಗಿದ್ದು ಶೇ.3ರಷ್ಟು ಹೆಚ್ಚು ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 178 ಮಿ.ಮೀ. ವಾಡಿಕೆ ಮಳೆಯಾಗಬೇಕಿದ್ದು, 158 ಮಿ.ಮೀ. ಮಳೆಯಾಗಿದ್ದು ಶೇ.11ರಷ್ಟು ಮಳೆ ಕಡಿಮೆಯಾಗಿದೆ.
ಮುಂಗಾರು ನಿರೀಕ್ಷೆ
ಅರಬಿ ಸಮುದ್ರದಲ್ಲಿ ಸದ್ಯ ನಿಮ್ನ ಒತ್ತಡ ನಿರ್ಮಾಣವಾಗಿದ್ದು, ಮೇ 31ರ ವೇಳೆಗೆ ಮತ್ತಷ್ಟು ಪ್ರಬಲಗೊಳ್ಳುವ ಸಾಧ್ಯತೆ ಇದೆ. ಜೂನ್ 1ಕ್ಕೆ ಕೇರಳ ಕರಾವಳಿಗೆ ಮುಂಗಾರು ಅಪ್ಪಳಿಸಿ ಜೂನ್ 2 ಅಥವಾ 3ರಂದು ರಾಜ್ಯ ಕರಾವಳಿ ತೀರಕ್ಕೆ ಪ್ರವೇಶಿಸುವ ನಿರೀಕ್ಷೆ ಇದೆ.
– ಶ್ರೀನಿವಾಸ ರೆಡ್ಡಿ,
ಕೆಎಸ್‌ಎನ್‌ಡಿಎಂಸಿ ನಿರ್ದೇಶಕ