Advertisement

Monsoon 2023: ಭಾರತಕ್ಕೆ ಮುಂಗಾರು ಪ್ರವೇಶ: ನಿರ್ಧಾರ ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ

04:12 PM Jun 10, 2023 | Team Udayavani |

ಭಾರತೀಯ ಹವಾಮಾನ ಇಲಾಖೆಯು ಗುರುವಾರ ದೇಶದ ಜನತೆಗೆ ಶುಭ ಸುದ್ದಿಯೊಂದನ್ನು ನೀಡಿ, ನೈಋತ್ಯ ಮಾರುತಗಳು ಕೇರಳ ಪ್ರವೇಶಿಸಿದ್ದು ದೇಶದಲ್ಲಿ ಮುಂಗಾರು ಆರಂಭಗೊಂಡಿದೆ ಎಂದು ಘೋಷಿಸಿದೆ. ಅರಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಪರಿಣಾಮ ಆರಂಭಿಕ 2-3 ದಿನಗಳ ಕಾಲ ನೈಋತ್ಯ ಮಾರುತಗಳ ಚಲನೆ ಕೊಂಚ ನಿಧಾನಗತಿಯಲ್ಲಿರಲಿದ್ದು ಕ್ರಮೇಣ ತೀವ್ರತೆಯನ್ನು ಕಂಡುಕೊಳ್ಳಲಿದೆ ಎಂದು ತಿಳಿಸಿದೆ. ಹಾಗಾದರೆ ಮುಂಗಾರು ಎಂದರೇನು, ಭಾರತಕ್ಕೆ ಮುಂಗಾರು ಹೇಗೆ ಪ್ರವೇಶಿಸುತ್ತದೆ, ಮುಂಗಾರು ಆಗಮನದ ಘೋಷಣೆ ಹೇಗೆ?… ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

Advertisement

ಮುಂಗಾರು ಎಂದರೇನು?
ಅರೇಬಿಕ್‌ ಪದವಾದ “ಮೌಸಿಮ್‌’ನಿಂದ ಮಾನ್ಸೂನ್‌ ಎಂಬ ಪದ ಹುಟ್ಟಿಕೊಂಡಿದೆ.ಹಿಂದಿ ಪದವಾದ “ಮೌಸಮ್‌’ಗೂ ಮೌಸಿಮ್‌ ಪದವೇ ಮೂಲ. ಅರೇಬಿಕ್‌ನಲ್ಲಿ ಮೌಸಿಮ್‌ ಎಂದರೆ ಋತು ಎಂದರ್ಥ. ಆದರೆ ಸಾಮಾನ್ಯವಾಗಿ ಮಾನ್ಸೂನ್‌ ಪದವನ್ನು ಭಾರೀ ಮಳೆಯ ಸಂದರ್ಭದಲ್ಲಿ ಬಳಸಲಾಗುತ್ತದೆ. ಆದರೆ ವಿಜ್ಞಾನಿಗಳು ಮಾನ್ಸೂನ್‌ಗೆ ತಮ್ಮದೇ ಆದ ವ್ಯಾಖ್ಯಾನವನ್ನು ನೀಡಿದ್ದಾರೆ. ಹವಾಮಾನದಲ್ಲಾಗುವ ಬದಲಾವಣೆಯ ಪರಿಣಾಮ ಗಾಳಿಯ ದಿಕ್ಕು ಪರಿವರ್ತನೆಗೊಂಡು ಮಳೆ ಸುರಿಯುವುದೇ ಮಾನ್ಸೂನ್‌ ಎಂಬುದು ಅವರ ವೈಜ್ಞಾನಿಕ ವಿಶ್ಲೇಷಣೆ.

ಭಾರತದ ದೃಷ್ಟಿಯಿಂದ ಮಾನ್ಸೂನ್‌ನ್ನು ವಿಶ್ಲೇಷಿಸುವುದಾದರೆ ಭಾರತದ ನೈಋತ್ಯ ದಿಕ್ಕಿನಿಂದ ಹಿಂದೂ ಮಹಾ ಸಾಗರ ಮತ್ತು ಅರಬಿ ಸಮುದ್ರದಲ್ಲಿ ಬೀಸುವ ಗಾಳಿಯಾಗಿದೆ. ಈ ಗಾಳಿಯು ತಂಪಿನ ವಾತಾವರಣದಿಂದ ಉಷ್ಣತೆ ಹೆಚ್ಚಿರುವ ಪ್ರದೇಶದತ್ತ ಚಲಿಸುತ್ತದೆ. ಇದೇ ವೇಳೆ ಈ ಗಾಳಿಯು ತನ್ನೊಂದಿಗೆ ಮೋಡಗಳನ್ನು ಸೆಳೆದು ಭಾರತ, ಪಾಕಿಸ್ಥಾನ, ಅಫ್ಘಾನಿಸ್ಥಾನ ದೇಶಗಳಲ್ಲಿ ಮಳೆಯನ್ನು ಸುರಿಸುತ್ತವೆ. ಸಾಮಾನ್ಯವಾಗಿ ಈ ನೈಋತ್ಯ ಮಾರುತಗಳು ಭಾರತದಲ್ಲಿ ಜೂನ್‌-ಸೆಪ್ಟಂಬರ್‌ ಅವಧಿಯಲ್ಲಿ ಮಳೆಯನ್ನು ಸುರಿಸುತ್ತವೆ.

ಭಾರತಕ್ಕೆ ಮುಂಗಾರು ಆಗಮನ ಹೇಗೆ?
ಭಾರತದಲ್ಲಿ ಗಾಳಿಯು ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳಿಂದ ಬೀಸುತ್ತದೆ. ನೈಋತ್ಯ ಮಾರುತಗಳು ಕೇರಳದ ಕರಾವಳಿಯ ಮೂಲಕ ಪ್ರವೇಶಿಸುತ್ತವೆ. ಮುಂಗಾರು ಸಮಯದಲ್ಲಿ ಅರಬಿ ಸಮುದ್ರದಲ್ಲಿ ಬೀಸುವ ನೈಋತ್ಯ ಮಾರುತಗಳು ಕೇರಳ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಳೆಯನ್ನು ಸುರಿಸುತ್ತವೆ. ಬಂಗಾಲ ಕೊಲ್ಲಿಯಲ್ಲಿ ಬೀಸುವ ಗಾಳಿಯು ಆಗ್ನೇಯ ಮಾರುತಗಳಾಗಿದ್ದು ತಮಿಳುನಾಡು, ಒಡಿಶಾ ಮತ್ತು ಈಶಾನ್ಯ ಪ್ರದೇಶಗಳು ಮತ್ತ ಬಾಂಗ್ಲಾದೇಶದಲ್ಲಿಯೂ ಮಳೆಗೆ ಕಾರಣವಾಗುತ್ತದೆ.

Advertisement

ಸಮುದ್ರದಲ್ಲಿ ಬೀಸುವ ಗಾಳಿ ಮಳೆ ಸುರಿಸು ವುದು ಹೇಗೆ?
ಸೂರ್ಯನಿಂದಾಗಿ ಭೂಮಿಗೆ ಹೆಚ್ಚಿನ ತಾಪಮಾನ ಲಭಿಸುತ್ತದೆ. ಆದರೆ ಸೂರ್ಯನ ಕಿರಣಗಳು ಎಲ್ಲ ಕಡೆ ಒಂದೇ ತೆರನಾಗಿ ಬೀಳದೇ ಇರುವುದರಿಂದ ತಾಪಮಾನದಲ್ಲೂ ಏರಿಳಿತಗಳು ಕಂಡುಬರುತ್ತವೆ. ಸೂರ್ಯನ ಕಿರಣಗಳಿಂದಾಗಿ ಭೂಮಿಯು ಸಮುದ್ರದ ನೀರಿಗಿಂತ ವೇಗವಾಗಿ ಬಿಸಿಯಾಗುತ್ತದೆ. ಜೂನ್‌ ತಿಂಗಳಲ್ಲಿ ಸೂರ್ಯನ ಕಿರಣಗಳು ಭೂಮಿಯ ಉತ್ತರ ಭಾಗದ ಮೇಲೆ ಬೀಳುವುದರಿಂದ ಸೂರ್ಯ ಹೆಚ್ಚು ಪ್ರಖ ರತೆಯಿಂದ ಪ್ರಜ್ವಲಿಸುವ ಜತೆಯಲ್ಲಿ ಭೂಮಿಯ ಉಷ್ಣತೆ ಹೆಚ್ಚಲು ಕಾರಣವಾಗುತ್ತದೆ.

ಆದರೆ ಸಮುದ್ರ ಮಾತ್ರ ಭೂಮಿ ಗಿಂತ ಹೆಚ್ಚು ತಂಪಾಗಿರುತ್ತದೆ. ಇದರ ಪರಿಣಾಮವಾಗಿ ಸಮುದ್ರದ ಮೇಲೈಯ ವಾತಾವರಣವು ಬದಲಾ ವಣೆಗೊಳ್ಳಲಾರಂಭಿಸತ್ತದೆ. ಗಾಳಿಯು ಹೆಚ್ಚಿನ ಬಿಸಿಯಿಂದ ಕೂಡಿದ್ದಲ್ಲಿ ಒತ್ತಡ ಕಡಿಮೆಯಾಗಿರುತ್ತದೆ. ಇನ್ನು ಗಾಳಿ ತಂಪಾಗಿದ್ದಲ್ಲಿ ಒತ್ತಡವು ಅಧಿಕವಾಗಿರುತ್ತದೆ. ಇದೇ ಕಾರಣದಿಂದಾಗಿ ಕಡಿಮೆ ಒತ್ತಡದಿಂದ ಕೂಡಿದ ಜಾಗದತ್ತ ಹೆಚ್ಚಿನ ಒತ್ತಡದಿಂದ ಕೂಡಿದ ಸಮುದ್ರದಿಂದ ಗಾಳಿಯು ಚಲಿಸಲಾರಂಭಿಸುತ್ತದೆ. ಈ ಗಾಳಿಯು ತನ್ನ ಜತೆಯಲ್ಲಿ ಮೋಡಗಳನ್ನೂ ಹೊತ್ತುಕೊಂಡು ಬರುವುದರಿಂದ ಮಳೆ ಸುರಿಯುತ್ತದೆ.

ಮುಂಗಾರು ಘೋಷಣೆ ಹೇಗೆ?
ಕೇರಳದ 8, ಲಕ್ಷದ್ವೀಪ ಹಾಗೂ ಕರ್ನಾಟಕದ ಮುಂಗಾರು ಘೋಷಣ ಕೇಂದ್ರಗಳಲ್ಲಿ ಸತತ 2 ದಿನಗಳ ಕಾಲ ಕನಿಷ್ಠ 2.5 ಮಿ.ಮೀ. ಮಳೆಯ ಪ್ರಮಾಣ ದಾಖಲಾದಾಗ ದೇಶದಲ್ಲಿ ಮುಂಗಾರಿನ ಆಗಮನವಾಗಿದೆ ಎಂದು ಹವಾಮಾನ ಇಲಾಖೆ ಘೋಷಿಸುತ್ತದೆ.

~ ಮುಂಗಾರು ಮೇಲ್ವಿಚಾರಣ ಅಥವಾ ನಿಗಾ ಕೇಂದ್ರಗಳಾದ ಮಿನಿ ಕಾಯ್‌, ಅಮಿನಿ, ತಿರುವನಂತಪುರ, ಪುನಲೂರು, ಕೊಲ್ಲಂ, ಆಲಪ್ಪುಳ, ಕೊಟ್ಟಾಯಂ, ಕೊಚ್ಚಿ, ತೃಶೂರ್‌, ಕೋಯಿಕ್ಕೋಡ್‌, ತಲಶೆರಿ, ಕಣ್ಣೂರು, ಕೂಡ್ಲು ಹಾಗೂ ಮಂಗಳೂರು ಈ 14 ಕೇಂದ್ರಗಳ ಪೈಕಿ ಶೇ. 60ರಷ್ಟು ಕೇಂದ್ರಗಳಲ್ಲಿ ಮೇ 10ರ ಅನಂತರ ಸತತ ಎರಡು ದಿನಗಳ ಕಾಲ ಕನಿಷ್ಠ 2.5 ಮಿ.ಮೀ. ಮಳೆಯಾಗಬೇಕು.
~ ಗಾಳಿಯ ಚಲನೆಯು ದಕ್ಷಿಣದಿಂದ ಪಶ್ಚಿಮದತ್ತ ಇರಬೇಕು.
~ ಹೊರಸೂಸಲ್ಪಡುವ ದೀರ್ಘ‌ ವಿಕಿರಣ (ಒಎಲ್‌ಆರ್‌) ಕಡಿಮೆಯಿರ ಬೇಕು. ಒಎಲ್‌ಆರ್‌ ಎಂದರೆ ವಾತಾವರಣದಿಂದ ಆಗಸದತ್ತ ಹೊರ ಸೂಸಲ್ಪಡುವ ಒಟ್ಟಾರೆ ವಿಕಿರಣ ಅಥವಾ ಮೋಡಗಳ ಸಾಂದ್ರತೆ ಪ್ರಮಾಣ.

ಮುಂಗಾರು ಮಾರುತಗಳಿಂದ ಎಲ್ಲೆಲ್ಲಿ ಮಳೆ?
ವಿಶ್ವದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.60ರಷ್ಟು ಜನರು ವಾಸಿಸುವ ಪ್ರದೇಶಗಳಲ್ಲಿ ಮುಂಗಾರು ಮಾರುತಗಳು ಮಳೆ ಸುರಿಸುತ್ತವೆ. ಅಮೆರಿಕ, ಆಸ್ಟ್ರೇಲಿಯಾ, ಆಫ್ರಿಕಾ ಖಂಡಗಳನ್ನು ಇದು ಒಳಗೊಂಡಿದೆ. ಭಾರತವನ್ನು ಪ್ರವೇಶಿಸುವ ಮುಂಗಾರು ಮಾರುತಗಳು ಭಾರತ ಮಾತ್ರವಲ್ಲದೇ ಅಫ್ಘಾನಿಸ್ಥಾನ, ಪಾಕಿಸ್ಥಾನ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲೂ ಮಳೆ ಸುರಿಸುತ್ತವೆ.

ಮಳೆಯನ್ನು ಹೇಗೆ ಅಳೆಯಲಾಗುತ್ತದೆ?
1662ರಲ್ಲಿ ಬ್ರಿಟನ್‌ನಲ್ಲಿ ಕ್ರಿಸ್ಟೋಪರ್‌ ವ್ರೆನ್‌ ಎಂಬವರು ರೆನ್‌ ಗಾಗ್‌ ಎಂಬ ಸಾಧನವನ್ನು ಕಂಡುಹಿಡಿದಿದ್ದರು. ಚೊಂಬಿನ ತೆರ ನಾದ ಪಾತ್ರೆ(ಬೀಕರ್‌) ಅಥವಾ ಟ್ಯೂಬ್‌ನ ಆಕಾರದಲ್ಲಿರುವ ಈ ಸಾಧನಕ್ಕೆ ರೀಡಿಂಗ್‌ ಸ್ಕೇಲ್‌ ಅನ್ನು ಅಳವಡಿಸಲಾಗಿರುತ್ತದೆ. ಈ ಬೀಕರ್‌ನಲ್ಲಿ ಮಳೆ ನೀರನ್ನು ಸಂಗ್ರಹಿಸಿ ಶೇಖರಿಸಲಾಗುತ್ತದೆ. ಶೇಖರಣೆಯಾಗಿರುವ ನೀರಿನ ಅಳತೆಯ ಆಧಾರದ ಮೇಲೆ ಆ ಪ್ರದೇಶದ ಸುತ್ತಮುತ್ತ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಅಂದಾಜಿಸಲಾಗುತ್ತದೆ. ಇದೀಗ ಅತ್ಯಾಧುನಿಕ ತೆರನಾದ ಮಳೆ ಯನ್ನು ಅಳೆಯುವ ಸಾಧನಗಳು ಲಭ್ಯವಿದೆಯಾದರೂ ಬಹು ತೇಕವು ಇದೇ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.

ಹವಾಮಾನ ಮತ್ತು ಮಳೆ
ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಯು ಮುಂಗಾರಿನ ಮೇಲೂ ಪರಿಣಾಮ ಬೀರುತ್ತಿದೆ. ಇನ್ನಿತರ ಕಾರಣಗಳೂ ನೈಋತ್ಯ ಮಾರುತಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಭಾರತದಲ್ಲಿ ಜೂನ್‌ನಿಂದ ಸೆಪ್ಟಂಬರ್‌ ಅವಧಿಯಲ್ಲಿ ಸುರಿಯುವ ಮಳೆಯ ಪ್ರಮಾಣದಲ್ಲಿ ಶೇ. 6ರಷ್ಟು ಇಳಿಕೆಯಾಗಿದೆ. ಪಶ್ಚಿಮ ಘಟ್ಟ ಹಾಗೂ ಗಂಗಾ ನದಿಯ ತೀರಗಳಲ್ಲಿ ಮಳೆಯ ಕೊರತೆ ಹೆಚ್ಚಾಗಿದೆ.

ಮುಂಗಾರು ಆಗಮನದ ತಪ್ಪು ಮಾಹಿತಿಯ ಪರಿಣಾಮ?
ದೇಶದಲ್ಲಿ ಶೇ.70-80ರಷ್ಟು ರೈತರು ಕೃಷಿಗಾಗಿ ಮಳೆಯ ಮೇಲೆ ಅವಲಂಬಿತರಾಗಿದ್ದಾರೆ. ಮಳೆಯ ಮುನ್ಸೂಚನೆಯ ಮಾಹಿತಿಯು ಒಂದು ವೇಳೆ ತಪ್ಪಾದಲ್ಲಿ ಕೃಷಿಕರು ಗೊಂದಲಕ್ಕೀಡಾಗುತ್ತಾರೆ. ಅಲ್ಲದೆ ಇದರಿಂದ ಕೃಷಿಕರು ನಷ್ಟವನ್ನು ಅನುಭವಿಸುತ್ತಾರೆ.

ಹವಾಮಾನ ಮಾಹಿತಿ
ಭಾರತೀಯ ಹವಾಮಾನ ಇಲಾಖೆಯ ಅಧಿಕೃತ ವೆಬ್‌ಸೈಟ್‌ https://mausam.imd.gov.in. ನಿಂದ ಮಳೆ ಅಥವಾ ಹವಾಮಾನ ಕುರಿತಾಗಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಮೇಘದೂತ್‌, ದಾಮಿನಿ, ಉಮಂಗ್‌ ಮತ್ತು ರೈನ್‌ ಅಲಾರಾಂ ಆ್ಯಪ್‌ನಿಂದಲೂ ಹವಾಮಾನ ಮಾಹಿತಿ ಲಭ್ಯ. ಅಷ್ಟು ಮಾತ್ರವಲ್ಲದೆ ಭಾರತೀಯ ಹವಾಮಾನ ಇಲಾಖೆಯು ರೈತರ ಮೊಬೈಲ್‌ಗೆ ಮುನ್ನೆಚ್ಚರಿಕೆಯ ಎಸ್‌ಎಂಎಸ್‌ ಅನ್ನೂ ರವಾನಿಸುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next