ಗುರುಪುರ: ಈ ಬಾರಿ ಮುಂಗಾರು ಮಳೆ ವಿಳಂಬಗೊಂಡ ಕಾರಣ ರೈತರು ನೇಜಿ ನೆಡುವ ಬದಲು ನೇರ ಬಿತ್ತನೆಯಲ್ಲಿ ತೊಡಗಿದ್ದಾರೆ. ಕಳೆದ ಬಾರಿ ಜೂನ್ ತಿಂಗಳ ಆರಂಭದಲ್ಲಿ ನೇಜಿ ನೆಟ್ಟು ನಾಟಿ ಮಾಡಲಾಗಿತ್ತು. ಆದರೆ ಈ ಬಾರಿ ಮಳೆಯಾಗದ ಕಾರಣ ಗದ್ದೆಗಳಲ್ಲಿ ನೀರು ನಿಲ್ಲದಿರುವುದರಿಂದ ನೇಜಿ ಹಾಕುವ ಬದಲು ಗದ್ದೆಗಳನ್ನು ಉಳುಮೆ ಮಾಡಿ ನೇರ ಬಿತ್ತನೆಯಲ್ಲಿ ತೊಡಗಿದ್ದಾರೆ.
ಈ ಹಿನ್ನೆಲೆಯಲ್ಲಿ ಈ ವರ್ಷ ಕೊಯ್ಲು ಕಾರ್ಯ ಒಂದು ತಿಂಗಳು ತಡವಾಗಲಿದ್ದು, ಸುಗ್ಗಿ ಮಾಡುವ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ.
ಜೂನ್ ತಿಂಗಳ ಮೊದಲ ವಾರದಲ್ಲಿ ಮಳೆಯಾದರೆ ಡಾಪೋಗ್ ವಿಧಾನದ ಮೂಲಕ ಅಥವಾ ಗದ್ದೆಯಲ್ಲೇ ಮಡಿಗಳನ್ನು ತಯಾರಿಸಿ ಭತ್ತದ ಸಸಿಗಳನ್ನು ಬೆಳೆಸಿ ಬಳಿಕ ಗದ್ದೆಯನ್ನು ಉಳುಮೆಗೈದು ನಾಟಿ ಹಾಕಲಾಗುತ್ತಿತ್ತು. ಆದರೆ ನೀರಿನ ಸಮಸ್ಯೆಯ ಕಾರಣ ಈ ಬಾರಿ ನೇರ ಬಿತ್ತನೆ ಮಾಡಲಾಗಿದೆ. ಆದರೂ ಕೆಲವು ರೈತರು ಡಾಪೋಗ್ ವಿಧಾನದ ಮೂಲಕ ಅಂಗಳದಲ್ಲಿಯೇ ಸಸಿಮಡಿಗಳನ್ನು ತಯಾರಿಸಿ ನಾಟಿ ಕಾರ್ಯ ಮುಗಿಸಿದ್ದಾರೆ.
ಮಳೆ ತಡವಾಗಿ ಆರಂಭವಾದರೆ ಗ್ರಾಮೀಣ ರೈತರು ನೇರ ಬಿತ್ತನೆ ಮಾಡುತ್ತಾರೆ. ಆದರೆ ಈ ರೀತಿ ಮಾಡಿದರೆ ನೆರೆ ಹಾವಳಿ ಉಂಟಾದರೆ ಬಿತ್ತನೆ ಬೀಜ ನೀರಲ್ಲಿ ಕೊಚ್ಚಿ ಕೊಂಡು ಹೋಗುವ ಸಾಧ್ಯತೆ ಇದೆ. ಸಸಿಗಳು ಹುಳಗಳಿಗೆ ಆಹಾರವಾಗುವ ಸಾಧ್ಯತೆಯೂ ಇದೆ. ನೀರಿನ ಮಟ್ಟ ಹೆಚ್ಚು-ಕಮ್ಮಿಯಾದರೆ ಸಮಸ್ಯೆಯಾಗುತ್ತದೆ. ಅಲ್ಲದೆ ಸಸಿಗಳು ಆರೋಗ್ಯ ಪೂರ್ಣವಾಗಿರದೆ ಬೆಳೆಯೂ ಸಾಕಷ್ಟು ಸಿಗುವುದಿಲ್ಲ. ಆದರೆ ನೀರಿನ ಪ್ರಮಾಣ ಸಮಪ್ರಮಾಣದಲ್ಲಿ ದೊರಕಿ ಸಾಕಷ್ಟು ಗೊಬ್ಬರ ಹಾಕಿದರೆ ಇದರಿಂದಲೂ ಹೆಚ್ಚು ಇಳುವರಿ ಪಡೆಯಲು ಸಾಧ್ಯವಿದೆ. ಆದರೆ ಸಮಸ್ಯೆ ಹೆಚ್ಚಾಗಿರುವುದರಿಂದ ಈ ವಿಧಾನ ವನ್ನು ರೈತರು ಅನುಸರಿಸುವುದಿಲ್ಲ. ಆದರೆ ಈ ಬಾರಿ ಮಳೆ ವಿಳಂಬದಿಂದಾಗಿ ಅನಿವಾರ್ಯವಾಗಿ ಈ ವಿಧಾನ ಅನುಸರಿಸಬೇಕಾಗುತ್ತದೆ.
ಮಳೆ ವಿಳಂಬದಿಂದಾಗಿ ಬಿತ್ತನೆ
ಈ ಬಾರಿ ಮಳೆ ಒಂದು ತಿಂಗಳು ವಿಳಂಬಗೊಂಡಿದ್ದು, ಆರಂಭದಲ್ಲಿ ನೀರಿನ ಕೊರತೆಯಿಂದಾಗಿ ನೇಜಿ ಹಾಕುವ ಬದಲು ನೇರವಾಗಿ ಗದ್ದೆಗಳನ್ನು ಉಳುಮೆ ಮಾಡಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿ ಆರಂಭದಲ್ಲಿಯೇ ಮಳೆ ಸಾಕಷ್ಟಿದ್ದುರಿಂದ ಸಸಿಮಡಿಗಳನ್ನು ತಯಾರಿಸಿ ನೇಜಿ ನೆಡಲಾಗಿತ್ತು.
- ಈಶ್ವರ ಬಂಗೇರ ಮಳಲಿ ರೈತ
ಹಲವು ಗದ್ದೆಗಳು ಹಡೀಲು
ಮಳೆ ವಿಳಂಬ ಗೊಂಡಿರುವುದರಿಂದ ಅನೇಕ ಬೈಲು ಗದ್ದೆಗಳನ್ನು ಹಡೀಲು ಬಿಡಲಾಗಿದೆ. ಮಳಲಿ, ಗುರುಪುರ, ಕಂದಾವರ, ಕುಪ್ಪೆಪದವು ಪ್ರದೇಶದಲ್ಲಿ ಗದ್ದೆಗಳನ್ನು ಹಡೀಲು ಬಿಡಲಾಗಿದೆ. ಇದರಿಂದ ಮುಂದಿನ ವರ್ಷ ಕುಚಲಕ್ಕಿಗಳಿಗೆ ದರ ಏರುವ ಸಾಧ್ಯತೆಯೂ ಇದೆ. ಈ ಬಾರಿ ಎಣೆಲ್(ಮೊದಲ ಬೆಳೆ) ತಡವಾಗಿರುವುದರಿಂದ ಸುಗ್ಗಿ(ಎರಡನೇ ಬೆಳೆ) ಮಾಡಲು ಸಾಧ್ಯವಾಗುವುದು ಅನುಮಾನವಾಗಿದೆ. ಪಟ್ಲ ಭಾಗಗಳಲ್ಲಿ ಕೊಳಕೆ(ಮೂರನೇ ಬೆಳೆ) ಮಾಡಲಾಗುತ್ತಿದೆ.