Advertisement
ರೈತರು ನೇಜಿ ಹಾಕಲು ಪಾತಿಗಳನ್ನು ನಿರ್ಮಿಸಿ ಭತ್ತದ ಬೀಜ ನಾಟಿಗೆ ಮುಂದಾಗಿದ್ದಾರೆ. ಈ ಭತ್ತದ ಬೀಜವನ್ನು ಮೊಳಕೆ ಯೊಡೆಸಿದ ಅನಂತರ ಪಾತಿಗಳಲ್ಲಿ ಹಾಕುವ ಪ್ರಕ್ರಿಯೆ ಮುಂದಕ್ಕೆ ನಡೆಯುತ್ತದೆ.
ಭತ್ತದ ಬೀಜವನ್ನು ಗೋಣಿಯಲ್ಲಿ ತುಂಬಿಸಿ ಬಿಗಿಯಾಗಿ ಕಟ್ಟಿ ತಣ್ಣೀರಿನಲ್ಲಿ ನೆನೆಸುತ್ತಾರೆ. ಅದಕ್ಕೆ ಸ್ವಲ್ಪ ಪ್ರಮಾಣದ ಶಾಖ ನೀಡುವ ಹಿನ್ನೆಲೆಯಲ್ಲಿ ಬುಟ್ಟಿಯಲ್ಲಿ ತುಂಬಿಸಲಾಗುತ್ತದೆ. ಬುಟ್ಟಿಯಲ್ಲಿ ತುಂಬಿ ಸುವ ಮೊದಲು ಬುಟ್ಟಿಗೆ ಇಟ್ಟೋವು ಅಥವಾ ಈಟಿನ ಮರದ ಎಲೆಗಳನ್ನು ಹಾಕುತ್ತಾರೆ. ಈ ಎಲೆಗಳು ಭತ್ತದ ಬೀಜವನ್ನು ಬೆಚ್ಚಗೆ ಇರಿಸುತ್ತವೆ. ಅನಂತರ ಭತ್ತದ ಬೀಜ ತುಂಬಿಸಿ ಅದರ ಮೇಲೆ ಗೋಣಿ ಹಾಕಿ ಶಾಖ ಬರುವಂತೆ ಭಾರವಾದ ಕಲ್ಲು ಅಥವಾ ವಸ್ತುಗಳನ್ನು ಇಡು ತ್ತಾರೆ. ದಿನ ಬಿಟ್ಟು ಬುಟ್ಟಿ ತೆರೆದರೆ ಭತ್ತದ ಬೀಜಗಳು ಮೊಳಕೆ ಒಡೆದಿರುತ್ತವೆ. ಈ ಬೀಜವನ್ನು ಅಂಗಳ ಅಥವಾ ಭತ್ತದ ಗದ್ದೆಯ ಒಂದು ಬದಿಯಲ್ಲಿ ಪಾತಿ ನಿರ್ಮಿಸಿ ಅದರಲ್ಲಿ ಭತ್ತದ ಬೀಜ ಹಾಕಲಾಗುತ್ತದೆ. ಪಾತಿ ನಿರ್ಮಾಣ ಅನಂತರ ಮಣ್ಣು, ಸುಡುಮಣ್ಣು ಹಾಗೂ ಮರಳನ್ನು ಹರಡಿ ಭತ್ತದ ಬೀಜಗಳನ್ನು ಹಾಕುತ್ತಾರೆ. ಮೂರು ದಿನಗಳಲ್ಲಿ ಭತ್ತದ ನೇಜಿ ಮೊಳಕೆ ಬರುತ್ತದೆ. 12ರಿಂದ 15 ದಿನಗಳೊಳಗಾಗಿ ನೇಜಿಯನ್ನು ಭತ್ತದ ಗದ್ದೆಯಲ್ಲಿ ನಾಟಿ ಮಾಡುತ್ತಾರೆ. ಪಾತಿಗಳಲ್ಲಿ ಬೀಜ ಹಾಕಿದ ಅನಂತರ ಭತ್ತದ ಗದ್ದೆಗಳನ್ನು ಹದ ಮಾಡುವ ಪ್ರಕ್ರಿಯೆ ನಡೆಯುತ್ತದೆ. ಹಿಂದೆ ಪಾತಿಗಳಲ್ಲಿ ನೇಜಿ ತಯಾರು ಮಾಡುವ ಬದಲು ಭತ್ತದ ಗದ್ದೆಗಳಲ್ಲಿ ನೇಜಿ ಹಾಕುವ ಕ್ರಮ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿತ್ತು. ನೇಜಿ ಬೆಳೆದು ಕನಿಷ್ಠ 25ರಿಂದ 30 ದಿನಗಳ ಅನಂತರ ನೇಜಿ ನಾಟಿ ಕಾರ್ಯ ಮಾಡಲಾಗುತ್ತಿತ್ತು. ನೇಜಿ ನಾಟಿಯೂ ಹತ್ತಿರವಾಗಿ ನಡೆಸಲಾಗುತ್ತಿತ್ತು. ಆದರೆ ಈಗ ಪಾತಿಗಳಲ್ಲಿ ತಯಾರು ಮಾಡುವ ನೇಜಿಯನ್ನು ಒಂದು ಅಡಿಯಷ್ಟು ದೂರವಾಗಿ ಹಾಗೂ ಸಾಲುನಾಟಿ ಮಾಡುವ ಕ್ರಮ ನಡೆಯುತ್ತಿದೆ. ಜೂನ್ ತಿಂಗಳಲ್ಲಿ ಸಾಮಾನ್ಯವಾಗಿ ರೈತರು ನೇಜಿ ನಾಟಿ ಮಾಡು ತ್ತಾರೆ. ಮುಂದಿನ ಸೆಪ್ಟಂಬರ್ ತಿಂಗಳಲ್ಲಿ ಏಣೇಲು ಬೆಳೆ ಕೊಯ್ಲಿಗೆ ಬರುತ್ತದೆ ಎನ್ನುತ್ತಾರೆ ಪ್ರಗತಿಪರ ಕೃಷಿಕ ಮೇಘ.
Related Articles
ಕೆಲವು ದಿನಗಳಿಂದ ಮುಂಗಾರು ಮಳೆಯ ನಿರೀಕ್ಷೆಯಲ್ಲಿರುವ ಭತ್ತದ ಬೇಸಾಯ ನಡೆಸುವ ರೈತರು ಬುಧವಾರ ಬೆಳಗ್ಗಿನಿಂದಲೇ ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ಭತ್ತದ ಕೆಲಸದತ್ತ ಮುಖ ಮಾಡಿದ್ದಾರೆ. ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿ ಒಟ್ಟು 650 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖಾಧಿಕಾರಿಗಳು.
Advertisement
ಬಂಟ್ವಾಳ: 5 ಸಾವಿರ ಹೆಕ್ಟೇರ್ ಭತ್ತದ ಕೃಷಿಬಂಟ್ವಾಳ ತಾಲೂಕಿನಲ್ಲೂ ಭತ್ತದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿದ್ದು, ಈಗಾಗಲೇ ನಾಟಿ ಕಾರ್ಯ ಪ್ರಾರಂಭಿಸಿದ್ದಾರೆ. ಇಲಾಖೆಯ ಮಾಹಿತಿ ಪ್ರಕಾರ ತಾಲೂಕಿನಲ್ಲಿ 5 ಸಾವಿರ ಹೆಕ್ಟೇರ್ ಭತ್ತದ ಕೃಷಿಯ ಗುರಿ ನಿಗದಿ ಪಡಿಸಲಾಗಿದ್ದು,ಗರಿಷ್ಠ ಪ್ರಮಾಣದಲ್ಲಿ ಕೃಷಿ ಕರು ಭತ್ತದ ಬೆಳೆಯನ್ನು ಬೆಳೆಯುತ್ತಾರೆ. ಕೃಷಿ ಇಲಾಖೆಯ ಮೂಲಕ ಭತ್ತದ ಬೀಜವನ್ನು ವಿತರಿಸುವ ಕಾರ್ಯವೂ ಭರದಿಂದ ಸಾಗಿದೆ. ಬೆಳ್ತಂಗಡಿ: 3,000 ಹೆಕ್ಟೇರ್ ಭತ್ತದ ಬೆಳೆ
ಬೆಳ್ತಂಗಡಿ ತಾಲೂಕಿನಲ್ಲಿ ಭತ್ತ ಬೆಳೆಗಾರರು ಮುಂಗಾರು ಪೂರ್ವದಲ್ಲೇ ಬಿತ್ತನೆ ಚಟುವಟಿಕೆ ಆರಂಭಿಸಿದ್ದಾರೆ. ಪ್ರಸಕ್ತ ತಾಲೂಕಿನಲ್ಲಿ ವೇಣೂರು, ಬೆಳ್ತಂಗಡಿ, ಕೊಕ್ಕಡ ಹೋಬಳಿಗಳಲ್ಲಿ 3,000 ಹೆಕ್ಟೇರ್ ಭತ್ತ ಬೆಳೆ ಗುರಿ ಹೊಂದಲಾಗಿದೆ. ಕಳೆದ ಬಾರಿ 2,500 ಬೆಳೆ ಗುರಿ ಹೊಂದಿದ್ದು ಈ ಬಾರಿ ಏರಿಕೆಯಾಗೊದೆ. ಪ್ರಸಕ್ತ ಕೃಷಿ ಇಲಾಖೆಯಿಂದ 70 ಕ್ವಿಂಟಾಲ್ ಬಿತ್ತನೆ ಬೀಜ ತರಿಸಲಾಗಿದ್ದು, ಬಹುತೇಕ ಕೃಷಿಕರು ಪ್ರಯೋಜನ ಪಡೆದಿದ್ದು. ಸಂಪೂರ್ಣ ಮಾರಾಟವಾಗಿದೆ. ಲಾಕ್‌ಡೌನ್‌ನಿಂದಾಗಿ ಈ ವರ್ಷ ಹಡೀಲು ಬಿದ್ದ ಗದ್ದೆಗಳಲ್ಲು ಕೃಷಿಕರು ಭತ್ತ ಬಿತ್ತನೆಗೆ ಮುಂದಾಗಿದ್ದಾರೆ. ಕೃಷಿ ಇಲಾಖೆಯಿಂದ ಯಾಂತ್ರಿಕ ಕೃಷಿ ಚಟುವಟಿಕೆ ನಡೆಸಲು ಸಬ್ಸಿಡಿ ನೀಡುತ್ತಿದ್ದು. ಪಾರಂಪರಿಕ ಕೃಷಿಕರು ಎತ್ತುಗಳನ್ನು ಬಳಸಿದರೆ, ಹೆಚ್ಚಿನ ಮಂದಿ ಟಿಲ್ಲರ್ ಬಳಸಿ ಉಳುಮೆ ಮಾಡುತ್ತಿರುವುದು ಕಂಡುಬಂದಿದೆ.