Advertisement

ಮಾಸಾಂತ್ಯ ಮುಂಗಾರು? ಜೂನ್ 3ರೊಳಗೆ ರಾಜ್ಯದ ಕರಾವಳಿಗೆ

03:45 AM May 11, 2017 | |

ಬೆಂಗಳೂರು:  ಈ ವರ್ಷದ ನೈರುತ್ಯ ಮುಂಗಾರು ಮಾರುತಗಳು ಮೇ 15ರಂದು ಅಂಡಮಾನ್‌ ನಿಕೋಬಾರ್‌ ತಲುಪುವ ಸಾಧ್ಯತೆ ಇದ್ದು, ಮೇ ಅಂತ್ಯಕ್ಕೆ ರಾಜ್ಯ ಪ್ರವೇಶಿಸುವ  ನಿರೀಕ್ಷೆಯಿದೆ.

Advertisement

ಸಾಮಾನ್ಯವಾಗಿ ಜೂನ್‌ ಮೊದಲ ವಾರದಲ್ಲಿ ಮುಂಗಾರು ಮಾರುತಗಳು ರಾಜ್ಯ ಕರಾವಳಿಯನ್ನು ಪ್ರವೇಶಿಸುತ್ತವೆ. ಆದರೆ, ಈ ಬಾರಿ ಒಂದೆರಡು ದಿನ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆ ಇದ್ದು, ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

“15ಕ್ಕೆ ನೈರುತ್ಯ ಮಾರುತಗಳು ಅಂಡಮಾನ್‌-ನಿಕೋಬಾರ್‌ಗೆ ಆಗಮಿಸುವ ಲಕ್ಷಣಗಳಿವೆ. ಇದಾದ 12 ದಿನಗಳ ನಂತರ ಅಂದರೆ ಮೇ 27ಕ್ಕೆ ಶ್ರೀಲಂಕದಲ್ಲಿ ಹಾದು ಕೇರಳ ಪ್ರವೇಶಿಸಲಿವೆ. ಕೇರಳಕ್ಕೆ ಆಗಮಿಸಿದ ನಂತರದ 48 ಗಂಟೆಗಳಲ್ಲಿ ರಾಜ್ಯ ಕರಾವಳಿಗೆ ಬರಲಿದ್ದು, ಅದರಂತೆ ಮೇ 31ಕ್ಕೆ ಮುಂಗಾರು ಮಳೆ ಶುರುವಾಗುವ ಸಾಧ್ಯತೆ ಇದೆ. ಆದರೆ, ಇದೆಲ್ಲವೂ ಗಾಳಿಯ ದಿಕ್ಕು ಮತ್ತು ವೇಗವನ್ನು ಅವಲಂಬಿಸಿದೆ’ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಸಾಮಾನ್ಯವಾಗಿ ಅಮಿನಿ, ತಿರುವನಂತಪುರಂ, ಪುನಾಲುರ, ಕೊಲ್ಲಂ, ಅಲ್ಲಪುಝ, ಕೊಟ್ಟಾಯಂ, ಕೊಚ್ಚಿ, ಕಣ್ಣೂರು, ಕೂಡುಲು, ಮಂಗಳೂರು ಸೇರಿದಂತೆ 14 ಕೇಂದ್ರಗಳಲ್ಲಿ ಸತತ ಎರಡು-ಮೂರು ದಿನಗಳು 2.3 ಮಿ.ಮೀ. ಅಥವಾ ಅದಕ್ಕಿಂತ ಹೆಚ್ಚು ಮಳೆ ದಾಖಲಾಗಬೇಕು. ಇದಾದ ಮರುದಿನವೇ ಮುಂಗಾರು ಕೇರಳ ಪ್ರವೇಶಿಸಿದೆ ಎಂದು ಘೋಷಿಸಲಾಗುತ್ತದೆ. 

ಅಲ್ಲದೇ, ಒಂದು ನಿರ್ದಿಷ್ಟ ಭಾಗದಿಂದ ಉತ್ತರದ 10 ಡಿಗ್ರಿ ಹಾಗೂ ಪೂರ್ವದಲ್ಲಿ 55ರಿಂದ 80 ಡಿಗ್ರಿವರೆಗಿನ ಪ್ರದೇಶದಲ್ಲಿ ಗಾಳಿಯ ವೇಗ 600 ಎಚ್‌ಪಿಎ ಇರಬೇಕು. ಜತೆಗೆ 5-10 ಡಿಗ್ರಿ ಉತ್ತರ ಹಾಗೂ 70-80 ಡಿಗ್ರಿ ಪೂರ್ವದಲ್ಲಿ ಕ್ರಮವಾಗಿ 15-20 ಕೆಟಿಎಸ್‌ (ನಾಟಿಕಲ್‌ ಮೈಲ್ಸ್‌) ಇರಬೇಕು ಎಂದು ಹೇಳಲಾಗುತ್ತದೆ.

Advertisement

ವಾಡಿಕೆ ಮಳೆಯ ಜತೆಗೆ ಒಂದೆರಡು ದಿನ ಮುಂಚಿತವಾಗಿಯೇ ಮಳೆ ಮುನ್ಸೂಚನೆ ಸಹಜವಾಗಿ ಸತತ ಮೂರು ವರ್ಷಗಳ ಬರದಿಂದ ಕಂಗೆಟ್ಟ ರೈತರ ಮುಖದಲ್ಲಿ ಮಂದಹಾಸ ಮೂಡಿಸಲಿದೆ. 

ತಜ್ಞರ ಪ್ರಕಾರ ಜೂನ್‌ ಮತ್ತು ಜುಲೈನಲ್ಲಿ ವಾಡಿಕೆ ಮಳೆ ಆಗಲಿದ್ದು, ಆಗಸ್ಟ್‌ನಲ್ಲಿ ವಾಡಿಕೆಗಿಂತ ಕೊಂಚ ಕಡಿಮೆ ಮಳೆಯಾಗುವ ಲಕ್ಷಣಗಳೂ ಇವೆ. ಆದರೆ, ಒಟ್ಟಾರೆ ಸರಾಸರಿ ತೆಗೆದುಕೊಂಡಾಗ ವಾಡಿಕೆ ಮಳೆ ಆಗಲಿದೆ.

ರಾಜ್ಯದಲ್ಲಿ ಮುಂಗಾರು ಹಂಗಾಮಿಗೆ ಕರವಾಳಿ ಪ್ರದೇಶ- 3,083.5 ಮಿ.ಮೀ., ಉತ್ತರ ಒಳನಾಡು- 506 ಮಿ.ಮೀ.,  ದಕ್ಷಿಣ ಒಳನಾಡು- 659.9 ಮಿ.ಮೀ. ಸೇರಿದಂತೆ ಒಟ್ಟಾರೆ ರಾಜ್ಯಾದ್ಯಂತ- 832.3 ಮಿ.ಮೀ. ಮಳೆ ಬೀಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next