ವಿಧಾನಸಭೆ: ಮಲೆನಾಡು ಭಾಗದಲ್ಲಿ ವ್ಯಾಪಿಸಿರುವ ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿರುವ ಬಗ್ಗೆ ಆಡಳಿತ ಪಕ್ಷದ ಸದಸ್ಯರೇ ಆಕ್ರೋಶ ಹೊರಹಾಕಿ, ಆರೋಗ್ಯ ಇಲಾಖೆ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಶೂನ್ಯ ವೇಳೆಯಲ್ಲಿ ಮಂಗನ ಕಾಯಿಲೆಯಿಂದ ಸಾವು ಉಂಟಾಗಿರುವ ಬಗ್ಗೆ ಬಿಜೆಪಿಯ ಹರತಾಳು ಹಾಲಪ್ಪ ಪ್ರಸ್ತಾಪಿಸಿ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಸೂಕ್ತ ಚಿಕಿತ್ಸೆ ಕೊಡಿಸುತ್ತಿಲ್ಲ, ಅಧಿಕಾರಿಗಳು ಕೈಗೆ ಸಿಗುವುದಿಲ್ಲ. ಪರಿಸ್ಥಿತಿ ಗಂಭೀರ ವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದಕ್ಕೆ ದನಿಗೂಡಿಸಿದ ಬಿಜೆಪಿಯ ಅರಗ ಜ್ಞಾನೇಂದ್ರ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಪರಿಸ್ಥಿತಿಯ ಗಂಭೀರತೆಯೇ ಗೊತ್ತಿಲ್ಲ. ಅವರ ಕುಟುಂಬ ಸದಸ್ಯರಿಗೆ ಮಂಗನ ಕಾಯಿಲೆ ಬಂದು ಸಾವು ಸಂಭವಿಸಿದ್ದರೆ ಆಗ ಅದರ ನೋವು ಗೊತ್ತಾಗುತ್ತಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯ ಮತ್ತೂಬ್ಬ ಸದಸ್ಯ ಎಂ.ಪಿ.ಕುಮಾರಸ್ವಾಮಿ, ಕೊರೊನಾ ಎಂದಾಕ್ಷಣ ಎಷ್ಟೆಲ್ಲಾ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದೀರಿ, ಮಂಗನ ಕಾಯಿಲೆ ಬಗ್ಗೆ ಯಾಕೆ ನಿರ್ಲಕ್ಷ್ಯ ಎಂದು ತರಾಟೆಗೆ ತೆಗೆದುಕೊಂಡರು.
ಹರತಾಳು ಹಾಲಪ್ಪ ಮಾತು ಮುಂದುವರಿಸಿ ಹಿಂದಿನ ಸರ್ಕಾರದಲ್ಲಿ ಮಂಗನ ಕಾಯಿಲೆ ನಿಯಂತ್ರ ಣಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕಳುಹಿಸಿ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸ ಲಾಗುತ್ತಿದೆ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗದಲ್ಲಿ ಸಾವಿನ ಕೂಪವಾಗಿದೆ. ನಿನ್ನೆಯಷ್ಟೇ ಒಬ್ಬರು ಮೃತಪಟ್ಟಿದ್ದಾರೆ. ಆಸ್ಪತ್ರೆ ಯಿಂದ ಮರಣೋತ್ತರ ಪರೀಕ್ಷೆ ಸಹ ಸರಿಯಾಗಿ ಮಾಡದೆ ಲುಂಗಿಯನ್ನು ಮೈಮೇಲೆ ಹಾಕಿ ಕಳುಹಿಸಿ ದ್ದಾರೆ. ಅವರ ಕುಟುಂಬದ ಗೋಳು, ನೋವು ನೋಡಿದರೆ ನಾವು ಯಾಕಿದ್ದೇವೆ ಎನಿಸುತ್ತದೆ ಎಂದು ಹೇಳಿದರು.
ಸರ್ಕಾರದ ಪರವಾಗಿ ಆರೋಗ್ಯ ಸಚಿವ ಶ್ರೀರಾಮುಲು ಉತ್ತರಿಸಿ, ಮಂಗನ ಕಾಯಿಲೆಗೆ ಇದುವರೆಗೂ 15 ಮಂದಿ ಮೃತಪಟ್ಟಿದ್ದು ಸರ್ಕಾರ ಕೆಲವೊಂದು ಕ್ರಮ ಕೈಗೊಂಡಿದೆ ಎಂದು ಹೇಳಿದರು. ಆಗ, ಮತ್ತೆ ಹರತಾಳು ಹಾಲಪ್ಪ ಎದ್ದುನಿಂತು, ತಪ್ಪು ಮಾಹಿತಿ ಕೊಡಬೇಡಿ. ಇದುವರೆಗೂ 23 ಮಂದಿ ಸತ್ತಿದ್ದಾರೆ. ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕಳೆದ ಸರ್ಕಾರದ ಅವಧಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಘೋಷಿಸಿದ ಪರಿಹಾರದ ಹಣ ಇನ್ನೂ 8 ಲಕ್ಷ ರೂ. ಪಾವತಿಯಾಗಿಲ್ಲ. ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಯಲ್ಲಿ ಸಿಗುವುದೇ ಇಲ್ಲ ಎಂದು ಆರೋಪಿಸಿದರು.
ಪ್ರಯೋಗಾಲಯ ಸ್ಥಾಪನೆಯಾಗಿಲ್ಲ: ಮಾಜಿ ಸಚಿವ ಯು.ಟಿ.ಖಾದರ್ ಮಾತನಾಡಿ, ಮಂಗನ ಕಾಯಿಲೆ ನಿಯಂತ್ರಣ ಆರೋಗ್ಯ ಮತ್ತು ಅರಣ್ಯ ಇಲಾಖೆ ಜತೆಗೂಡಿ ಮಾಡಬೇಕು ಎಂದು ಹೇಳಿದರು. ಮಾಜಿ ಸಚಿವ ಶಿವಾನಂದ ಪಾಟೀಲ್ ಅವರು, ಹಿಂದೆ ನಾವು ಪ್ರಯೋಗಾಲಯ ಸ್ಥಾಪನೆಗೆ ಹಣ ಬಿಡುಗಡೆ ಮಾಡಿದ್ದೆವು ಆದರೆ ಇದುವರೆಗೂ ಪ್ರಯೋಗಾಲಯ ಸ್ಥಾಪನೆಯಾಗಿಲ್ಲ. ಹೊಸ ಔಷಧ ಕಂಡು ಹಿಡಿಯಲು ಸೂಚಿಸಲಾಗಿತ್ತು. ಆ ಕೆಲಸವೂ ಆಗಿಲ್ಲ ಎಂದು ಹೇಳಿದರು. ಮಾಜಿ ಸಚಿವ ಕೃಷ್ಣ ಬೈರೇಗೌಡರು, ಸರ್ಕಾರ ಯಾವುದೇ ಇರಲಿ.
ಸಮಸ್ಯೆಗೆ ಪರಿಹಾರ ಕಲ್ಪಿಸುವುದು ಮುಖ್ಯ. ತಕ್ಷಣ ಸರ್ಕಾರ ಆ ಬಗ್ಗೆ ಗಮನಹರಿಸಲಿ ಎಂದು ಸಲಹೆ ನೀಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನನ್ನ ಮತ ಕ್ಷೇತ್ರದಲ್ಲೂ ಒಬ್ಬರ ಸಾವು ಸಂಭವಿಸಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು. ನಂತರ ಆರೋಗ್ಯ ಸಚಿವ ಶ್ರೀರಾಮುಲು ಅವರು, ಮುಖ್ಯಮಂತ್ರಿಯವರ ಜತೆ ಚರ್ಚಿಸಿ ಸರ್ಕಾರದ ಕಡೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ವಿಧಾನಸೌಧಕ್ಕೂ ತಟ್ಟಿದ ಕೊರೊನಾ ಆತಂಕ: ಕೊರೊನಾ ಆತಂಕ ವಿಧಾನಸೌಧಕ್ಕೂ ತಟ್ಟಿದ್ದು, ವಿಧಾನಸಭೆ ಕಲಾಪ ವೀಕ್ಷಿಸಲು ಬರುವ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮಾರ್ಚ್ 17 ರಿಂದ 20 ರವರೆಗೆ ಸ್ಪೀಕರ್ ಗ್ಯಾಲರಿ ಹಾಗೂ ಸಾರ್ವಜನಿಕರ ಗ್ಯಾಲರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸೋಮವಾರ ಸದನದಲ್ಲಿ ಈ ಕುರಿತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಕಟಣೆ ಹೊರಡಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಗ್ಯಾಲರಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಶಾಸಕರು ಹಾಗೂ ಸಚಿವರು ಸಹ ಗ್ಯಾಲರಿ ಪ್ರವೇಶ ಕೋರಿ ಮನವಿ ಸಲ್ಲಿಸಬಾರದು. ಪಾಸ್ ಸಹ ವಿತರಿಸಬಾರದು ಎಂದು ಹೇಳಿದರು.