Advertisement

ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ : ಅಶ್ವಿ‌ನಿ

12:50 AM Jan 24, 2019 | Harsha Rao |

ಕಟಪಾಡಿ: ಮಂಗನ ಕಾಯಿಲೆ ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ. ಇದುವರೆಗಿನ ಪ್ರಕರಣಗಳಲ್ಲಿ ಹೆಂಗಸರೇ ಈ ರೋಗಕ್ಕೆ ತುತ್ತಾಗಿರುವುದು ಜಾಸ್ತಿ ಕಂಡು ಬಂದಿರುತ್ತದೆ ಎಂದು ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಅಶ್ವಿ‌ನಿ ಹೇಳಿದರು.

Advertisement

ಅವರು ಕುರ್ಕಾಲು ಗ್ರಾಮ ಪಂಚಾಯತ್‌ನಲ್ಲಿ  ಮಂಗನ ಕಾಯಿಲೆಯ ಬಗ್ಗೆ ಮಾಹಿತಿಯ ವಿಶೇಷ ಗ್ರಾಮಸಭೆಯನ್ನು ಉದ್ದೇಶಿಸಿ ಮಾಹಿತಿ ನೀಡುತ್ತಾ ಮಾತನಾಡಿದರು.

ವೈರಸ್‌ನಿಂದ ಹರಡುವ ಕಾಯಿಲೆ ಇದಾಗಿದ್ದು, ಲಕ್ಷಣ ಆಧರಿಸಿ ಚಿಕಿತ್ಸೆ ಸಾಧ್ಯತೆ ಇದೆ. ಪಶ್ಚಿಮ ಘಟ್ಟದ ಸಾಲಿನಲ್ಲಿ  ಕಂಡು ಬರುವ ಸಾಧ್ಯತೆ ಹೆಚ್ಚಾಗಿದ್ದು, ಈ ವೈರಾಣು ಮಂಗ ಮತ್ತು ಮನುಷ್ಯನ ಮೇಲೆ ಮಾತ್ರ ದಾಳಿ ಮಾಡುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚು ಇದ್ದ ಪಕ್ಷದಲ್ಲಿ ಇದು ಬಾಧಿಸುವುದಿಲ್ಲ ಎಂದರು.

ಲಕ್ಷಣಗಳು
ಸುಮಾರು 2 ವಾರಗಳಿಗೂ ಮಿಕ್ಕಿದ ಕಾಲ ಜ್ವರ ಬರುವುದು, ವಿಪರೀತವಾಗಿ ತಲೆ, ಸೊಂಟ, ಕೈಕಾಲು ನೋವು ಜೊತೆಗೆ ನಿಶ್ಯಕ್ತಿ, ಕಣ್ಣು ಕೆಂಪಗಾಗುವುದು. ಮೂಗು, ಗಂಟಲು ಭಾಗದಲ್ಲಿ ರಕ್ತ ಸ್ರಾವವಾಗಬಹುದು ಎಂಬ ಮಾಹಿತಿ ನೀಡಿದರು.

ಮುಂಜಾಗ್ರತಾ ಕ್ರಮ
ಯಾವುದೇ ಪ್ರದೇಶದಲ್ಲಿ ಮಂಗ ಸತ್ತಿರುವವುದು ಕಂಡೊಡನೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರ, ಅರಣ್ಯ ಇಲಾಖೆ, ಗ್ರಾಮ ಪಂಚಾಯತ್‌ ಗಳಿಗೆ ಮಾಹಿತಿ ನೀಡಿರಿ. ಮಂಗ ಸತ್ತ ಕಾಡಿನಲ್ಲಿ ಸಂಚರಿಸುವಾಗ ಮೈ ತುಂಬಾ ಬಟ್ಟೆ ಧರಿಸಿ ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಿಸುವ ಡಿ.ಎಂ.ಪಿ. ತೈಲ ಅಥವಾ ಬೇವಿನ ಎಣ್ಣೆಯನ್ನು ಲೇಪಿಸಿಕೊಂಡು ಹೋಗಬಹುದು. ಕಾಡಿನಿಂದ ಬಂದ ಅನಂತರ ಬಿಸಿ ನೀರಿನಿಂದ ಸ್ನಾನ ಮಾಡಬೇಕು. ಬಟ್ಟೆಗಳನ್ನು ಒಗೆಯಬೇಕು. ರೋಗ ಬಾಧಿಸುವ ಮುನ್ನ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು  ತೆಗೆದುಕೊಳ್ಳುವುದು ಸೂಕ್ತ ಎಂದರು.

Advertisement

ಅಧ್ಯಕ್ಷತೆ ವಹಿಸಿದ್ದ  ಕುರ್ಕಾಲು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶೋಭಾ  ಮಾತನಾಡಿ, ಮಾಹಿತಿಗಳ ಸದು ಪಯೋಗಪಡಿಸಿಕೊಳ್ಳಿರಿ. ಕಾಯಿಲೆಗಳಿಗೆ ಬಾಧಿತರಾಗುವ ಮುನ್ನವೇ ಎಚ್ಚೆತ್ತು ಮುಂಜಾಗ್ರತಾ ಕ್ರಮವನ್ನು ಅನುಸರಿಸುವಂತೆ ಕರೆ ನೀಡಿದರು.

ಈ ಸಂದರ್ಭ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಂಯೋಜಕ ಸುಧೀಂದ್ರ, ತಾಲೂಕು ಸಂಯೋಜಕ ಮಧುಸೂದನ್‌, ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರದ ಸಂಯೋಜಕ ಗಣೇಶ್‌, ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತೆ ವಿಭಾಗದ ಸಂತೋಷ್‌ ಕುಮಾರ್‌ ವೇದಿಕೆಯಲ್ಲಿದ್ದರು.

ಅಂಗನವಾಡಿ, ಆಶಾ ಕಾರ್ಯಕರ್ತೆ ಯರು, ಗ್ರಾ.ಪಂ. ಸಿಬಂದಿ, ಗ್ರಾಮ ಲೆಕ್ಕಿಗ, ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಒ ಚಂದ್ರಕಲಾ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next