Advertisement

ನನೆಗುದಿಗೆ ಬಿದ್ದ ಮಂಕಿ ಪಾರ್ಕ್‌ ಯೋಜನೆ

07:24 PM Oct 21, 2020 | mahesh |

ಕುಂದಾಪುರ: ಮಂಗಗಳ ಹಾವಳಿ ತಡೆಗೆ ಮಲೆನಾಡಿನ ತಪ್ಪಲಿನಲ್ಲಿ ಮಂಕಿ ಪಾರ್ಕ್‌ ಸ್ಥಾಪಿಸುವ ಸರಕಾರದ ಯೋಜನೆ ನನೆಗುದಿಗೆ ಬಿದ್ದಿದೆ.

Advertisement

ಯೋಜನೆ
ಶರಾವತಿ ಕಣಿವೆಯ ತಲಕಳಲೆ ಜಲಾಶಯದ 2 ನಡುಗುಡ್ಡೆಗಳಲ್ಲಿ “ಮಂಕಿ ಪಾರ್ಕ್‌’ ಸ್ಥಾಪಿಸಲು ರಾಜ್ಯ ಸರಕಾರ ಹಸಿರು ನಿಶಾನೆ ತೋರಿಸಿ, ಬಜೆಟ್‌ನಲ್ಲೂ “ಮಂಕಿ ಪಾರ್ಕ್‌’ಗಾಗಿ 6.25 ಕೋ.ರೂ. ಮೀಸಲಿಟ್ಟಿತ್ತು. ಇದಕ್ಕೂ ಮುನ್ನ ಹೊಸನಗರ ತಾಲೂಕು ನಿಟ್ಟೂರು ನಾಗೋಡಿಯ 400 ಎಕರೆ ಅರಣ್ಯದಲ್ಲಿ “ಮಂಕಿ ಪಾರ್ಕ್‌’ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಆದರೆ ವಿರೋಧ ಬಂತು. ಅಂತೆಯೇ ಕುಂದಾಪುರ ಅರಣ್ಯ ವ್ಯಾಪ್ತಿಯಲ್ಲೂ ಮಂಕಿ ಪಾರ್ಕ್‌ ಸ್ಥಾಪನೆ ಕುರಿತು ಸಭೆಗಳು, ಸಮಾಲೋಚನೆ ನಡೆದಿತ್ತು. ಆದರೆ ಪ್ರಸ್ತಾವವೇ ಬಿದ್ದು ಹೋಗಿದೆ.

ಮಂಗಗಳ ಉಪಟಳ
ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಕಮಲಶಿಲೆ, ಮಚ್ಚಟ್ಟು, ಅಮಾಸೆಬೈಲು, ಸಿದ್ದಾಪುರ, ಉಳ್ಳೂರು – 74, ಕುಳಂಜೆ, ಶಂಕರನಾರಾಯಣ ಮುಂತಾದ ಭಾಗಗಳಲ್ಲಿ ಮಂಗಗಳ ಉಪಟಳ ಹೆಚ್ಚಾಗಿದ್ದು ರೈತರು ರೋಸಿ ಹೋಗಿದ್ದಾರೆ.

ಆಹಾರಕ್ಕಾಗಿ
ಇತ್ತೀಚೆಗೆ ಕಾಡು ನಾಶ, ಒತ್ತುವರಿ, ಹಣ್ಣು ಹಂಪಲು ಮರಗಳ ನಾಶದಿಂದ ತಮ್ಮ ಆಹಾರ ಶೋಧವನ್ನು ನಾಡಿಗೆ ಬದಲಾಯಿಸಿವೆ. ಮಂಗಗಳಿಗೆ ರೈತರ ಭತ್ತದ ಗದ್ದೆ, ತರಕಾರಿ ತೋಟ, ಕೊನೆಗೆ ತೆಂಗಿನ ಮರವೇ ಆಹಾರದ ಮೂಲಗಳಾಗಿವೆ. ಗುಂಪು ಗುಂಪಾಗಿ ಬರುವ ಮಂಗಗಳು ತೆಂಗಿನ ಮರವೇರಿ ಅದರಲ್ಲಿರುವ ಬಲಿತ ಎಳನೀರನ್ನು ಕುಡಿದು ಫಸಲನ್ನು ಸಂಪೂರ್ಣ ಖಾಲಿ ಮಾಡಿ, ಬೆಳೆದ ರೈತರಿಗೆ ಮನೆ ಖರ್ಚಿಗೂ ತೆಂಗಿನಕಾಯಿ ಸಿಗದಂತೆ ಮಾಡುತ್ತಿವೆ. ಎಂಟØತ್ತು ಕಾಯಿ ಉಳಿದರೆ ಕೂಲಿ ಕೊಡಲು ಕಷ್ಟ, ಬಿಟ್ಟರೆ ಬಿದ್ದ ಕಾಯಿ ರಾತ್ರಿ ಹೊತ್ತು ಕಾಡುಹಂದಿ, ಮುಳ್ಳು ಹಂದಿಗಳ ಪಾಲಿಗೆ.

ಅರಣ್ಯ ಇಲಾಖೆ ನಕಾರ
ಬೆಳೆ ನಾಶವಾದರೆ ಅರ್ಜಿ ಕೊಡಿ ಪರಿಹಾರ ಕೊಡುತ್ತೇವೆ ಎನ್ನುವ ಅರಣ್ಯ ಇಲಾಖೆ, ತೆಂಗಿನ ಕಾಯಿಗಳನ್ನು ಮಂಗಗಳು ತಿಂದರೆ ಇದು ವಾಣಿಜ್ಯ ಬೆಳೆ, ಇದಕ್ಕೆ ನಮ್ಮ ಇಲಾಖೆಯಿಂದ ಪರಿಹಾರ ಇಲ್ಲವೆಂಬ ಉತ್ತರ ನೀಡುತ್ತದೆ.

Advertisement

ಎಲ್ಲಿ ಹೋಗಿದೆ ಸಂತಾನ ಶಕ್ತಿ ಹರಣ ಚಿಕಿತ್ಸೆ, ಮಂಕಿ ಪಾರ್ಕ್‌
ಹಲವು ವರ್ಷಗಳಿಂದ ಸರಕಾರವು ಮಂಗಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ಮಾಡಿ ಅವುಗಳ ಸಂಖ್ಯೆ ಕಡಿಮೆ ಮಾಡುವುದಾಗಿ, ಎಲ್ಲ ಮಂಗಗಳಿಗೂ ಮಂಕಿ ಪಾರ್ಕ್‌ ಮಾಡಿ ಅಲ್ಲೇ ಅವುಗಳಿಗೆ ಆಹಾರವನ್ನು ಕೊಡುತ್ತೇವೆಂಬ ರಾಜಕಾರಣಿಗಳ ಭರವಸೆ ಮಾತಲ್ಲೇ ಉಳಿದಿದೆ.

ಹೆದರದ ಮಂಗ
ಬಲಿಷ್ಠ ಮಂಗಗಳು ಮನುಷ್ಯರಿಗೆ ಹೆದರುವುದಿಲ್ಲ. ಸಾಕಷ್ಟು ಬಾರಿ ಹಿಡಿದು ಅಲ್ಲಲ್ಲಿ ಬಿಟ್ಟ ಮಂಗಗಳು ಮನುಷ್ಯರನ್ನು ನೋಡಿದ ತತ್‌ಕ್ಷಣ ರೋಷ ತಾಳುತ್ತಿವೆ. ಮಹಿಳೆಯರು, ಮಕ್ಕಳು ಮರದ ಕೆಳಗೆ ಹೋದರೆ ಕುಡಿದ ಬೊಂಡವನ್ನು ಮೈ ಮೇಲೆ ಎಸೆಯುತ್ತವೆ. ರೈತನ ಒಂಟಿ ನಾಯಿ ಸಿಕ್ಕಿದರೆ ಎಲ್ಲ ಮಂಗಗಳು ಒಟ್ಟಾಗಿ ದಾಂಧಲೆ ಎಬ್ಬಿಸಿ ಗಾಯ ಮಾಡುತ್ತವೆ. ಮನೆಯ ಹಂಚು ಕಿತ್ತು ಮನೆಯೊಳಗಡೆ ಬಂದು ದಾಂಧಲೆ ಎಬ್ಬಿಸುತ್ತವೆ.

ಕೈ ಚೆಲ್ಲಿದ ರೈತ
ರೈತ ಗರ್ನಾಲು, ಕೋವಿ, ಏರ್‌ಗನ್‌, ಪಿವಿಸಿ ಪೈಪ್‌ಗ್ನ್‌, ರೆಡ್‌ ಎಕ್ಸ್‌ರೆಲೈಟ್‌ ಏನೇ ಹೊಸ ಪ್ರಯೋಗ ಮಾಡಿದರೂ ಮಂಗಗಳನ್ನು ಕಾಡಿಗೆ ಓಡಿಸಲಾಗುವುದಿಲ್ಲ.

ತೆಂಗಿನಕಾಯಿಗೂ ಪರಿಹಾರ ಕೊಡಿ
ಅರಣ್ಯ ಇಲಾಖೆಯವರು ಕೃಷಿ, ಭತ್ತದ ಪೈರು ಕಾಡುಪ್ರಾಣಿಗಳಿಂದ ನಾಶವಾದರೆ ಪರಿಹಾರ ಕೊಡುವಂತೆ, ಮಂಗಗಳು ಬೊಂಡಾ ಕೆಡವಿ ಹಾಳು ಮಾಡಿದರೂ ಪರಿಹಾರ ಕೊಡಬೇಕು. ಸರಕಾರ ತೆಂಗಿನ ಬೆಳೆಯನ್ನು ವಾಣಿಜ್ಯ ಬೆಳೆ ಎಂದು ಪರಿಗಣಿಸಬಾರದು. ಮುಂದೊಂದು ದಿನ ಕರಾವಳಿ ಭಾಗದ ರೈತ ತೆಂಗಿನ ಕಾಯಿಗಳನ್ನು ಹೊರ ಜಿಲ್ಲೆಗಳಿಂದ ಆಮದು ಮಾಡಿಕೊಳ್ಳ ಬೇಕಾಗಬಹುದು.
– ಚಿಟ್ಟೆ ರಾಜಗೋಪಾಲ ಹೆಗ್ಡೆ, ಕಾರ್ಯ ನಿರ್ವಾಹಕ ಸದಸ್ಯ, ಗ್ರಾಮ ಅರಣ್ಯ ಸಮಿತಿ, ಉಳ್ಳೂರು – 74.

ಪರಿಹಾರ ನೀಡಲಾಗಿದೆ
ಕಳೆದ ವರ್ಷ 70 ರೈತರಿಗೆ 3 ಲಕ್ಷ ರೂ.ಗಳಷ್ಟು ಬೆಳೆಹಾನಿ ಪರಿಹಾರ ನೀಡಲಾಗಿದೆ. ತರಕಾರಿ, ಭತ್ತ ಮೊದಲಾದ 70 ವಿಧದ ಬೆಳೆಹಾನಿಗೆ ಪರಿಹಾರಕ್ಕೆ ಅವಕಾಶ ಇದ್ದು ಅಡಿಕೆ ಗಿಡ, ತೆಂಗಿನ ಗಿಡಕ್ಕೆ ಹಾನಿಯಾದರೆ ನೀಡಬಹುದು. ಎಳನೀರು, ತೆಂಗಿನಕಾಯಿಗೆ ಅವಕಾಶ ಇನ್ನೂ ದೊರೆತಿಲ್ಲ.
-ಪ್ರಭಾಕರ ಕುಲಾಲ್‌ ವಲಯ ಅರಣ್ಯಾಧಿಕಾರಿ, ಕುಂದಾಪುರ

ಪ್ರಸ್ತಾವ ಸದ್ಯಕ್ಕಿಲ್ಲ
ಬೆಳೆಹಾನಿಗೆ ವಲಯ ಅರಣ್ಯ ಇಲಾಖೆಯಲ್ಲೇ ಪರಿಹಾರ ವಿತರಿಸಲಾಗುತ್ತಿದೆ. ಸಾಮಾನ್ಯ ಹಾಗೂ ವನ್ಯಜೀವಿ ಎರಡೂ ವಿಭಾಗಗಳಲ್ಲಿ ನೀಡಲಾಗುತ್ತಿದೆ. ಮಂಕಿ ಪಾರ್ಕ್‌ ಪ್ರಸ್ತಾವ ಸದ್ಯಕ್ಕಿಲ್ಲ.
-ಭಗವಾನ್‌ದಾಸ್‌ ಎಸಿಎಫ್, ವನ್ಯಜೀವಿ ವಿಭಾಗ, ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next