Advertisement

ಶಿವಮೊಗ್ಗದಲ್ಲಿ ಮಂಕಿ ಪಾರ್ಕ್‌

10:02 AM Nov 07, 2019 | mahesh |

ಬೆಂಗಳೂರು: ಶಿವಮೊಗ್ಗ ಸಹಿತ ಮಲೆನಾಡು ಭಾಗದಲ್ಲಿ ಬೆಳೆಗಳಿಗೆ ವಿಪರೀತ ಉಪಟಳ ನೀಡುತ್ತಿರುವ ಮಂಗಗಳಿಗೆ ಪ್ರತ್ಯೇಕವಾದ “ಪಾರ್ಕ್‌’ ನಿರ್ಮಿಸಲು ರಾಜ್ಯ ಸರಕಾರ ಉದ್ದೇಶಿಸಿದೆ. ಈ ಕೂಡಲೇ 100 ಎಕರೆ ಜಾಗದಲ್ಲಿ ಪ್ರಾಯೋಗಿಕವಾಗಿ ಮಂಗಗಳ ಪಾರ್ಕ್‌ ಮಾಡಿ, ಯಶಸ್ವಿಯಾದರೆ ಬೇರೆಡೆಯೂ ಮಾಡಬಹುದು ಎಂದು ಸಿಎಂ ಯಡಿಯೂರಪ್ಪ ಸೂಚಿಸಿದ್ದಾರೆ. ಮಂಕಿ ಪಾರ್ಕ್‌ ನಿರ್ಮಾಣ ಸಂಬಂಧ ಸಿಎಂ ಅಧ್ಯಕ್ಷತೆ ಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಂಗಗಳ ಕಾಟದ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ. ಮಂಗಗಳ ಕಾಟವನ್ನು ಅನುಭವಿಸುತ್ತಿರುವ ಈ ಭಾಗದ ಜನರ ಬಹುದಿನಗಳ ಬೇಡಿಕೆಯೂ ಇದಾಗಿದೆ.

Advertisement

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸೇರಿ ಮಲೆನಾಡು ಭಾಗದಲ್ಲಿ ತೋಟ ಗಳಿಗೆ ಮಂಗಗಳು ನುಗ್ಗಿ ಬೆಳೆಗೆ ಹಾನಿ ಮಾಡುತ್ತಿವೆ. ಇದರಿಂದ ರೈತರು ತೋಟಗಳಿಗೆ ಹೋಗಲು ಭಯಪಡುವಂಥ ವಾತಾವರಣ ನಿರ್ಮಾಣವಾಗಿದೆ ಎಂದರು. ಜತೆಗೆ ಮಂಗ ಗಳಿಂದ ರೈತರ ಬೆಳೆಗಳನ್ನು ಸಂರಕ್ಷಿಸುವ ಸಲುವಾಗಿ ಮಂಗಗಳ ಪಾರ್ಕ್‌ ನಿರ್ಮಿಸುವುದು ಅಗತ್ಯ. ಇದಕ್ಕಾಗಿ ಶರಾವತಿ ಹಿನ್ನೀರು ಭಾಗದ ಜಮೀನು ಕಾಯ್ದಿರಿಸಬೇಕು. ಮಂಗಗಳ ಪಾರ್ಕ್‌ನಲ್ಲಿ ಅವುಗಳಿಗೆ ಬೇಕಾದ ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂಬ ಸಲಹೆಯನ್ನೂ ನೀಡಿದರು.

ಈ ಸಂಬಂಧ ಉತ್ತರಿಸಿದ ಸಿಎಂ, ಅರಣ್ಯ ಅಧಿಕಾರಿಗಳ ನಿರ್ಲಕ್ಷದಿಂದ ಮಂಗಗಳು ನಾಡಿನತ್ತ ಬರುವಂತಾಗಿದೆ. ಕಾಡಿನಲ್ಲೇ ಹಣ್ಣಿನ ಗಿಡಗಳನ್ನು ಬೆಳೆಸಿದರೆ ಇಂತಹ ಸಮಸ್ಯೆ ಇರುತ್ತಿರಲಿಲ್ಲ. ಇನ್ಮುಂದೆ ಕಾಡಿನಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಲು ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ಮಂಕಿ ಪಾರ್ಕ್‌ ಬಗ್ಗೆ ಸ್ಪಷ್ಟ ರೂಪುರೇಷೆಗಳನ್ನು ತಯಾರಿಸಿ ಯಾವ ರೀತಿ ಇರಬೇಕು ಎಂಬುದು ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಂಕಿ ಪಾರ್ಕ್‌ ಎಂದರೇನು?
ಮಂಗಗಳನ್ನು ಒಂದು ಕಡೆ ಕಲೆ ಹಾಕುವ ಪ್ರಯತ್ನವೇ ಈ ಪಾರ್ಕ್‌. ವಿಪರೀತ ಮಂಗಗಳ ಕಾಟ ಇರುವ ಹಿಮಾಚಲ ಪ್ರದೇಶದಲ್ಲಿ ಇಂಥ ದ್ದೊಂದು ಪ್ರಯೋಗ ಮಾಡಲಾಗಿದೆ. ಜನವಸತಿ ಪ್ರದೇಶದಿಂದ ಸಾಕಷ್ಟು ದೂರ ಇರುವ ನೂರಾರು ಎಕರೆ ಜಾಗದಲ್ಲಿ ಮಂಗಗಳು ತಿನ್ನುವ ಹಣ್ಣಿನ ಗಿಡಗಳನ್ನು ಬೆಳೆಸಿ ಅಲ್ಲಿ ಮಂಗಗಳನ್ನು ಮುಕ್ತವಾಗಿ ಬಿಡಲಾಗುತ್ತದೆ. ಇದರಿಂದ ಕೋತಿಗಳು ಜನವಸತಿ ಪ್ರದೇಶಕ್ಕೆ ಬಾರದಂತೆ ತಡೆಯುವುದು ಇದರ ಉದ್ದೇಶ.

Advertisement

Udayavani is now on Telegram. Click here to join our channel and stay updated with the latest news.

Next