Advertisement

ರಾಜ್ಯಕ್ಕೆ ವಿಸ್ತರಣೆಗೊಂಡ ನೈಸರ್ಗಿಕ ವಾನರ ವನ ಯೋಜನೆ

10:23 PM Apr 22, 2021 | Team Udayavani |

ಕಾರ್ಕಳ: ಕಾಡು ನಾಶಗೊಂಡು ಕಪಿಗಳ ನೆಲೆ ನಾಶವಾಗುತ್ತಿದೆ. ನೈಸರ್ಗಿಕ ಆಹಾರ ಅವುಗಳಿಗೆ ಸಿಗುತ್ತಿಲ್ಲ. ಪ್ರವಾಸಿಗರು ನೀಡುವ ಕೃತಕ  ಆಹಾರ ಜೀರ್ಣವಾಗದೆ  ಕಪಿಗಳು  ಒದ್ದಾಡುವ ಸ್ಥಿತಿಯಿದೆ. ಕಾಡುಗಳಲ್ಲಿ   ಆಹಾರ ಸಿಗದೆ ನಾಡಿನ ಕೃಷಿ ಭೂಮಿಗಳತ್ತ ಧಾವಿಸುತ್ತಿವೆ. ಇವೆಲ್ಲವನ್ನು  ಗಮನಿಸಿದ  ಕಾರ್ಕಳ ಜಾಗೃತಿ ಫೌಂಡೇಶನ್‌ ಹೆಸರಿನ ಸಂಸ್ಥೆ ವಾನರ ವನ ಎನ್ನುವ  ಸ್ಪರ್ಧೆ ಹಾಗೂ ಅಭಿಯಾನವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಂಡಿದೆ.  ಕಪಿಗಳಿಗೆ  ನೈಸರ್ಗಿಕ ಹಣ್ಣಿನ ತೋಟದ ವಾತಾವರಣ ಸೃಷ್ಟಿಸಿ, ಆಹಾರ ಒದಗಿಸುವ ವನ ನಿರ್ಮಾಣವೇ  ಸ್ಪರ್ಧೆಯ ಹಿಂದಿನ ಉದ್ದೇಶ. ವಿವಿಧ ಸರಕಾರಿ, ಅರೆಸರಕಾರಿ ಸಂಘಸಂಸ್ಥೆಗಳ ನೆರವಿನೊಂದಿಗೆ ಅಭಿಯಾನ, ಸ್ಪರ್ಧೆ ನಡೆಯಲಿದೆ.

Advertisement

ಯಾರೆಲ್ಲ  ಭಾಗವಹಿಸಬಹುದು? :

ಧಾರ್ಮಿಕ ಸಂಘ ಸಂಸ್ಥೆಗಳು, ನೋಂದಾಯಿತ ಸಂಸ್ಥೆಗಳು,  ಶಿಕ್ಷಣ ಸಂಸ್ಥೆಗಳು, ಸರಕಾರಿ, ಅರೆ ಸರಕಾರಿ, ಸ್ವಸಹಾಯ ಸಂಸ್ಥೆ,  ಸ್ತ್ರೀಶಕ್ತಿ ಗುಂಪು, ಮಹಿಳಾ ಸಂಘಟನೆ, ಗ್ರಾಮೀಣ ಅಭಿವೃದ್ಧಿ, ಪಂಚಾಯತ್‌ ಸಂಸ್ಥೆಗಳು ಭಾಗವಹಿಸಬಹುದು.

ಎಲ್ಲೆಲ್ಲಿ   ಹಣ್ಣಿನ  ಗಿಡ ನಾಟಿ :

ರಸ್ತೆ ವಿಸ್ತರಣೆ ಜಾಗ, ಸರಕಾರಿ ಭೂಮಿ, ಇತರೆ ಉದ್ದೇಶಗಳಿಗೆ ಭೂಸ್ವಾಧೀನಗೊಳಿಸಿದ ಜಾಗಗಳನ್ನು  ಆಯ್ಕೆ ಮಾಡಿಕೊಳ್ಳುವಂತಿಲ್ಲ.  ಗಿಡಗಳನ್ನು ಧಾರ್ಮಿಕ ಕ್ಷೇತ್ರಗಳ ವಠಾರ, ರಸ್ತೆಯ ಇಕ್ಕೆಲ, ಸರಕಾರಿ ಶಾಲೆ, ಕಾಲೇಜು, ಇಂತಹ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬೇಕು.  ನೀರು, ನೆರಳು, ಗೊಬ್ಬರ ಇತ್ಯಾದಿ ಪೋಷಣೆ  ಆಯಾ ಸಂಸ್ಥೆಗಳೇ ನಿರ್ವಹಿಸಬೇಕು.

Advertisement

ಯತಿಗಳ  ಆಶೀರ್ವಾದದಿಂದ ಆಯೋಜನೆ  :

ಪೇಜಾವರ ಮಠಾಧೀಶರು ಮತ್ತು ಅಯೋಧ್ಯೆಯ ಶ್ರೀ ರಾಮಜನ್ಮ ಭೂಮಿ ಟ್ರಸ್ಟ್‌ನ ವಿಶ್ವಸ್ತರಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಹಾಗೂ  ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ರಾದ ಸುಗುಣೇಂದ್ರ  ತೀರ್ಥ ಶ್ರೀಪಾದರು, ಆಶೀರ್ವಾದದೊಂದಿಗೆ  ವಾನರ ವನ ಕಾರ್ಯ ಕ್ರಮ ನಡೆಯುತ್ತಿದೆ.

ಇಡೀ  ಜೀವ ಸಂಕುಲ ಸಂಕಷ್ಟದಲ್ಲಿದೆ  :

ಕೋವಿಡ್ ಸೋಂಕು  ಮಾನವರಿಗಷ್ಟೇ  ಅಲ್ಲ  ಜೀವಿ ಸಂಕುಲದ ಮೇಲೆಯೂ  ಪರಿಣಾಮ ಬೀರಿದೆ.   ಇಡೀ  ಜೀವ  ಸಂಕುಲ  ಸಂಕಷ್ಟಕ್ಕೆ ಸಿಲುಕಿದೆ.  ಮೂಕ ಜೀವಿಗಳ  ಕಡೆಗೆ ಮಾನವೀಯತೆ ತೋರಬೇಕಿದೆ. ಇದೇ ಹೊತ್ತಲ್ಲಿ  ಜಾಗೃತಿ ಸೇವಾ ಸಂಸ್ಥೆಯ ವಿನೂತನ ಪ್ರಯೋಗ  ವಾನರ ವನ ಜೀವವೈವಿಧ್ಯದ ನೆಲೆ ಮತ್ತು ಪ್ರಕೃತಿ  ಪೂಜೆಯ ತಾಣವಾಗಿ ಮನ ಸೆಳೆಯುವ ಸಾಧ್ಯತೆ ಇದೆ.

ಸ್ಪರ್ಧೆ ಹೀಗಿದೆ :

ದೀರ್ಘಾವಧಿ ಫ‌ಲ ಕೊಡುವ 15 ಹಣ್ಣಿನ ಗಿಡಗಳನ್ನು ನೆಡಬೇಕು.  ಗಿಡಗಳನ್ನು  ಸ್ವತಃ ಇಲ್ಲವೆ  ಸಾಮಾಜಿಕ  ಅರಣ್ಯದಿಂದ ಪಡೆಯುವುದು. 2021 ಜೂನ್‌ 1ರಿಂದ ಜುಲೈ  15 ರವರೆಗೆ  ಗಿಡಗಳನ್ನು ನೆಟ್ಟು  ಛಾಯಾಚಿತ್ರಗಳನ್ನು ಆಯೋಜಕರಿಗೆ ಕಳುಹಿಸಿಕೊಡಬೇಕು. 2021 ಸೆಪ್ಟಂಬರ್‌ 15ರಿಂದ 30ರ ಒಳಗೆ ಹಣ್ಣಿನ  ಗಿಡಗಳ ಬೆಳವಣಿಗೆಯ ಫೋಟೋ ಕಳುಹಿಸುವುದು. 2021 ಡಿ. 15ರಿಂದ 30ರ ಒಳಗೆ 2ನೇ ಬಾರಿ ಗಿಡಗಳ ಬೆಳವಣಿಗೆಯ ಫೋಟೋ ಕಳುಹಿಸುವುದು. ಸಂಘಟನೆ, ಸದಸ್ಯರ ಹೆಸರನ್ನು  ಅದರಲ್ಲಿ  ನಮೂದಿಸುವುದು.  ಪರಿಸರದ 10 ನಾಗರಿಕರನ್ನು ಸೇರಿಸಿ ತಂಡಕ್ಕೊಂದು ಹೆಸರಿಟ್ಟು  ಕೂಡ ಭಾಗಿಯಾಗಬಹುದು. 2022 ಜ. 26ರಂದು ವಿಜೇತರಿಗೆ  ಬಹುಮಾನ ವಿತರಣೆ ನಡೆಯುವುದು.  ಆಯೋಜಕರು ವಿಜೇತರ ಆಯ್ಕೆ  ನಡೆಸುವರು. ವಿಜೇತರಾದ ಒಂದು ತಂಡಕ್ಕೆ 55 ಸಾವಿರ  ಬಹುಮಾನವಿದೆ. ಪ್ರತಿಯೊಂದು ಜಿಲ್ಲೆಗೂ ಒಂದು ಸಮಧಾನಕರ ಬಹುಮಾನವಿದೆ. ಭಾಗವಹಿಸಿದ ಎಲ್ಲ ಸಂಘ ಸಂಸ್ಥೆಗಳಿಗೆ ಗಣ್ಯರ ಸಹಿಯಿರುವ  ಮಾನ್ಯತೆ  ಸರ್ಟಿಫಿಕೆಟ್‌  ನೀಡಲಾಗುತ್ತದೆ.

ಕಾಡುಗಳಲ್ಲಿ  ಹಣ್ಣಿನ ಮರಗಳು ನಶಿಸುತ್ತಿವೆ.  ವಾನರಗಳಿಗೆ  ಆಹಾರ ಸಿಗುತ್ತಿಲ್ಲ. ಕೃತಕ ಆಹಾರಕ್ಕೆ  ಕಪಿಗಳ ದೇಹ ಒಗ್ಗುತ್ತಿಲ್ಲ. ಇದೆಲ್ಲವನ್ನು ಅರಿತು  ಹಣ್ಣಿನ ಗಿಡಗಳನ್ನು  ನೆಡುವ ಪ್ರಯತ್ನ ನಡೆಸುತ್ತಿದ್ದೇವೆ. ರಾಜ್ಯಕ್ಕೆ ವಿಸ್ತರಿಸಿ ನಡೆಸಲಾಗುತ್ತಿದೆ. ಮುಂದೆಲ್ಲ ನಾಗಬನಗಳಿದ್ದು ಅವುಗಳ ಸಮೀಪವೇ ಮಂಗಗಳು ಹೆಚ್ಚು ಸೇರುತ್ತಿದ್ದವು. ಅಂತಹ ನಾಗಬನಗಳ ಸಮೀಪವೂ ವನ ನಿರ್ಮಿಸಲು ಯೋಗ್ಯವಾಗಿವೆ. -ಆನಂದರಾಯ ನಾಯಕ್‌, ಅಧ್ಯಕ್ಷ  ಜಾಗೃತಿ  ಫೌಂಡೇಶನ್‌  ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next