ಶಿವಮೊಗ್ಗ:ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಕಂಡು ಬಂದಿದ್ದ ಮಂಗನ ಕಾಯಿಲೆ ಇದೀಗ ಉಡುಪಿ ಜಿಲ್ಲೆಗೂ ಹಬ್ಬತೊಡಗಿದೆ. ಹೊಸಂಗಡಿ, ಕಂಡ್ಲೂರಿನಲ್ಲಿ ಮಂಗನ ಶವ ಪತ್ತೆಯಾಗಿದ್ದು, ಮತ್ತೊಂದೆಡೆ ಉಜಿರೆಯಲ್ಲೂ ಮಂಗನ ಶವ ಪತ್ತೆಯಾಗಿದ್ದು, ಇದು ಕಾಳಗದಿಂದ ಸತ್ತಿರಬಹುದೆಂದು ವೈದ್ಯರು ತಿಳಿಸಿದ್ದಾರೆ.
ಮಂಗನ ಕಾಯಿಲೆ ಭೀತಿಗೆ ಮನೆ ಬಿಟ್ಟ ಗ್ರಾಮಸ್ಥರು:
ಸಾಗರದ ಅರಳಗೋಡು ಗ್ರಾಮದಲ್ಲಿ ಮಂಗನ ಕಾಯಿಲೆ ಭೀತಿಯಿಂದಾಗಿ ಗ್ರಾಮಸ್ಥರು ಮನೆ ಖಾಲಿ ಮಾಡಿ ಬೇರೆಡೆಗೆ ತೆರಳಿದ್ದಾರೆ. ಅಷ್ಟೇ ಅಲ್ಲ ಕಳೆದ ಒಂದು ವಾರದಿಂದ ಶಾಲೆಗೂ ವಿದ್ಯಾರ್ಥಿಗಳು ತೆರಳಿಲ್ಲ ಎಂದು ಮಾಧ್ಯಮದ ವರದಿ ತಿಳಿಸಿದೆ.
ಮಂಗನ ಕಾಯಿಲೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಭೀತಿಯಿಂದಾಗಿ ಪೋಷಕರು ಮಕ್ಕಳನ್ನು ಬೇರೆ ಊರಿಗೆ ಕಳುಹಿಸಿಕೊಟ್ಟಿರುವುದಾಗಿ ವರದಿ ವಿವರಿಸಿದೆ. ಮಂಗನ ಕಾಯಿಲೆ ಭೀತಿಯಿಂದಾಗಿ ಗ್ರಾಮಸ್ಥರು ಕೂಲಿ ಕೆಲಸಕ್ಕೂ ಹೋಗುತ್ತಿಲ್ಲ ಎಂದು ವರದಿ ಹೇಳಿದೆ.
ಈಗಾಗಲೇ ಮಂಗನ ಕಾಯಿಲೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಮಂಗನ ಕಾಯಿಲೆಗೆ ತುತ್ತಾದ 35 ಮಂದಿ ಶಿವಮೊಗ್ಗ ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಮಂಗನ ಕಾಯಿಲೆಗೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶ ನೀಡಿದ್ದಾರೆ.