ಬೆಂಗಳೂರು: ಶಿವಮೊಗ್ಗದ ಸಾಗರ ಸೇರಿದಂತೆ ಕೆಲವೆಡೆ ಮಂಗನ ಕಾಯಿಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಹರಡದಂತೆ ಹಲವು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದಾಗಿ ಆರೋಗ್ಯ ಇಲಾಖೆ ತಿಳಿಸಿದ್ದು, ಮಳೆಗಾಲ ಆರಂಭವಾಗುವವರೆಗೆ ಗ್ರಾಮಸ್ಥರು ಕಾಡಿನಿಂದ ದರಗು ತರದಿರುವುದು ಒಳಿತು ಎಂದು ಹೇಳಿದೆ.
ಮಂಗನ ಕಾಯಿಲೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೃತಪಟ್ಟ ಮಂಗಗಳ ಶವ ಪರೀಕ್ಷೆ ನಡೆಸಲಾಗುತ್ತಿದೆ. ಹಾಗೆಯೇ “ಉಣುಗು’ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದ್ದು, ಫಲಿತಾಂಶ ಧನಾತ್ಮಕವಾಗಿ ಕಂಡುಬಂದರೆ ಆ ಸ್ಥಳದ ಸುತ್ತಮುತ್ತಲಿನ ಪ್ರದೇಶದಲ್ಲಿ ನೆಲೆಸಿದವರಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಒತ್ತು ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕ ಡಾ.ಪ್ರಭಾಕರ್ ಹೇಳಿದರು.
ಈವರೆಗೆ ಐದು ಸಾವು ಸಂಭವಿಸಿದ್ದು, ಕಳೆದ 2- 3 ದಿನಗಳಿಂದ ಯಾವುದೇ ಸಾವು ಸಂಭವಿಸಿಲ್ಲ. ಜ್ವರಪೀಡಿತರ ಸಂಖ್ಯೆಯೂ ಇಳಿಮುಖವಾಗುತ್ತಿದೆ. ವ್ಯಾಪಕವಾಗಿ ಹರಡದಂತೆ ನಿಯಂತ್ರಿಸಲು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೆಲವೆಡೆ ಮಂಗಗಳು ಮೃತಪಟ್ಟಿರುವ ಬಗ್ಗೆ ವರದಿಯಾಗಿದ್ದು, ಅವುಗಳ ಶವ ಪರೀಕ್ಷೆ ನಡೆಸಿ ಕೆಎಫ್ಡಿಯಿಂದ ಮೃತಪಟ್ಟಿವೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸಾಗರದ ಆಯ್ದ ಹಳ್ಳಿಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಮಳೆಗಾಲ ಆರಂಭವಾಗುವವರೆಗೆ ಕಾಡಿನಿಂದ “ದರಗು’ ತರದಿರುವುದನ್ನು ನಿಲ್ಲಿಸುವುದು ಒಳಿತು ಎಂದು ಆರೋಗ್ಯ ಇಲಾಖೆಯ ಶಿವಮೊಗ್ಗ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎಸ್.ಶಂಕರಪ್ಪ ಹೇಳಿದರು.
ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ ಈವರೆಗೆ 7000ಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕಲಾಗಿದೆ. ಶನಿವಾರದೊಳಗೆ ಇನ್ನೂ 8000 ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಜತೆಗೆ ಜಾಗೃತಿ ಕಾರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಹಾಗೆಯೇ ಆರೋಗ್ಯ ಸಹಾಯವಾಣಿಯಲ್ಲೂ ಮಂಗನ ಕಾಯಿಲೆ ಬಗ್ಗೆ ಮಾಹಿತಿ ನೀಡುವ ಸೇವೆ ಆರಂಭವಾಗಿದೆ.
ಅರಳಗೋಡಿಗೆ ಆರು ತಂಡಗಳನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆ ವೈದ್ಯರ ಸೇವೆ ಕಲ್ಪಿಸಲಾಗಿದ್ದು, ಎರಡು ಆ್ಯಂಬುಲೆನ್ಸ್‌ಗಳನ್ನು ಸ್ಥಳದಲ್ಲೇ ಇರಿಸಲಾಗಿದೆ ಎಂದು ತಿಳಿಸಿದರು.