Advertisement

Monkey Disease: ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮುನ್ನೆಚ್ಚರಿಕೆ

11:09 PM Feb 25, 2024 | Team Udayavani |

ಉಡುಪಿ: ಮಂಗನ ಕಾಯಿಲೆ (ಕೆಎಫ್ಡಿ)ಗೆ ಸಂಬಂಧಿಸಿದಂತೆ ಜಿಲ್ಲೆಯಾದ್ಯಂತ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಮಂಗನ ಕಾಯಿಲೆಯ ಒಂದು ಪ್ರಕರಣ ದೃಢಪಟ್ಟಿದ್ದು, ಶನಿವಾರ ಇನ್ನೆರಡು ಮಾದರಿಗಳು ಆರೋಗ್ಯ ಇಲಾಖೆಯ ಕೈಸೇರಿವೆ. ಇದರ ವರದಿ ಸೋಮವಾರ ಅಥವಾ ಮಂಗಳವಾರ ಬರುವ ಸಾಧ್ಯತೆಗಳಿವೆ.

Advertisement

ವಂಡ್ಸೆಯಲ್ಲಿ ಪ್ರಕರಣ ದೃಢಪಟ್ಟಿದ್ದು, ಬಾಧಿತ ವ್ಯಕ್ತಿಯಲ್ಲಿ ಚೇತರಿಕೆ ಕಂಡುಬಂದಿದೆ. ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾ ಗಲಿದ್ದಾರೆ. ರೋಗಲಕ್ಷಣ ಕಾಣಿಸಿಕೊಂಡ ಇನ್ನೆರಡು ಪ್ರಕರಣಗಳು ಕುಂದಾಪುರ ನಗರ ಹಾಗೂ ಅಜೆಕಾರು ವ್ಯಾಪ್ತಿಯದ್ದಾಗಿದೆ. ಈ ವ್ಯಾಪ್ತಿಯ ಎಲ್ಲ ಮನೆಗಳಲ್ಲಿಯೂ ಆರೋಗ್ಯಾ ಧಿಕಾರಿಗಳ ನೇತೃತ್ವದ ತಂಡದಿಂದ ತಪಾಸಣೆ ಕಾರ್ಯವನ್ನು ಚುರುಕುಗೊಳಿಸಲಾಗಿದೆ.

ಮುನ್ನೆಚ್ಚರಿಕೆಗಳು
ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಹಾಗೂ ಕಾಣಿಸಿಕೊಂಡ ಪ್ರಕರಣಗಳು ಗ್ರಾಮೀಣ ಭಾಗದ್ದು. ಕಾಡಿಗೆ ಹೋಗುವವರು ಸುರಕ್ಷೆಗಾಗಿ ಮೈತುಂಬಾ ಬಟ್ಟೆ ಧರಿಸುವುದು ಉತ್ತಮ. ಕಾಡು, ತೋಟಗಳಿಗೆ ಕೆಲಸಕ್ಕೆ ಹೋಗುವವರು ಡಿಇಪಿಎ ಉಣ್ಣಿ ವಿಕರ್ಷಕ ತೈಲ ಲೇಪಿಸಿಕೊಳ್ಳಬೇಕು. ಕೆಲಸ ಮುಗಿಸಿ ಬಂದ ಬಳಿಕ ಬಿಸಿನೀರ ಸ್ನಾನ ಮಾಡಿ ಧರಿಸಿದ ಬಟ್ಟೆಗಳನ್ನು ಬಿಸಿನೀರಿನಲ್ಲಿ ನೆನೆಸಿ ಸೋಪು ಬಳಸಿ ಒಗೆಯಬೇಕು. ಕಾಡಿನಿಂದ ಮನೆಗೆ ಉಣ್ಣಿಗಳು ಬರದಂತೆ ತಡೆಗಟ್ಟಲು ಸುರಕ್ಷಾ ಕ್ರಮ ತೆಗೆದುಕೊಳ್ಳಬೇಕು. ದನಕರುಗಳ ಮೈಯಿಂದ ಉಣ್ಣಿಗಳನ್ನು ತೆಗೆದು ಉಣ್ಣಿ ನಿವಾರಕ ತೈಲವನ್ನು ಲೇಪಿಸಬೇಕು. ಉಣ್ಣಿ ನಿವಾರಕ ಔಷಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಸಬೇಕು. ಮಂಗಗಳು ಸತ್ತಿರುವುದು ಕಂಡುಬಂದರೆ ಗ್ರಾ.ಪಂ., ಆರೋಗ್ಯ ಇಲಾಖೆಗೆ ಮಾಹಿತಿ ನೀಡುವುದು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತರಗೆಲೆ ರಾಶಿ ಹಾಕದಿರಿ
ಒಣಗಿದ ಎಲೆಗಳು ಸೋಂಕಿತ ಉಣ್ಣೆಗಳನ್ನು ಹೊಂದಿರಬಹುದಾದ್ದರಿಂದ ಕಾಡಿನಿಂದ ಒಣಗಿದ ಎಲೆಗಳನ್ನು ತಂದು ಮನೆ ಅಥವಾ ಮನೆಯ ಸುತ್ತಮುತ್ತ ರಾಶಿ ಹಾಕಬಾರದು. ಕೈಗವಸು ಧರಿಸದೆ ಸತ್ತ ಪ್ರಾಣಿಗಳನ್ನು ಮುಟ್ಟಬಾರದು.

ಉಡುಪಿ ಜಿಲ್ಲೆಯ ವಿವಿಧೆಡೆ ತಪಾಸಣೆ
ಬೈಂದೂರು ತಾಲೂಕಿನ ವಂಡ್ಸೆಯನ್ನು ಕೇಂದ್ರವಾಗಿರಿಸಿಕೊಂಡು ಆರೋಗ್ಯ ಇಲಾಖೆ ತಪಾಸಣೆ ನಡೆಸುತ್ತಿದೆ. ರೋಗ ಲಕ್ಷಣ ಕಂಡುಬಂದವರ ಮನೆ ಪರಿಸರ, ಅಕ್ಕಪಕ್ಕದಲ್ಲಿ ತಪಾಸಣೆ ಕೈಗೊಳ್ಳಲಾಗಿದೆ. ಈ ಹಿಂದೆ ಮುನಿಯಾಲಿನಲ್ಲಿ ಎರಡು ಮಂಗಗಳು ಮೃತಪಟ್ಟಿದ್ದರೂ ಅದರ ವರದಿ ನೆಗೆಟಿವ್‌ ಬಂದ ಕಾರಣ ಯಾವುದೇ ಸಮಸ್ಯೆ ಉಂಟಾಗಲಿಲ್ಲ. ಆದರೂ ಗ್ರಾಮೀಣ ಭಾಗವನ್ನು ಕೇಂದ್ರೀಕರಿಸಿಕೊಂಡು ಜಿಲ್ಲೆಯಲ್ಲಿ ತಪಾಸಣೆ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

Advertisement

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಪಾಸಿಟಿವ್‌ ಕಂಡುಬಂದಿರುವ ಮಹಿಳೆ ಈಗಾಗಲೇ ಗುಣಮುಖರಾಗಿದ್ದಾರೆ. ಇನ್ನೆರಡು ಪ್ರಕರಣಗಳ ವರದಿ ಇನ್ನಷ್ಟೇ ಬರಬೇಕಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧೆಡೆ ಆರೋಗ್ಯ ಇಲಾಖೆಯ ಸಿಬಂದಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಗಳು ಸತ್ತಿರುವುದು ಕಂಡುಬಂದರೆ ಕೂಡಲೇ ಸ್ಥಳಿಯಾಡಳಿತ ಅಥವಾ ಆರೋಗ್ಯ ಇಲಾಖೆಯ ಗಮನಕ್ಕೆ ತಂದರೆ ಉತ್ತಮ.
-ಡಾ| ಪಿ.ಐ. ಗಡಾದ್‌, ಜಿಲ್ಲಾ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next