Advertisement

ಮಂಗನ ಕಾಯಿಲೆ: ಕಾರ್ಕಳದಲ್ಲಿಂದು ವಿಶೇಷ ಗ್ರಾಮಸಭೆ

12:30 AM Jan 18, 2019 | Team Udayavani |

ಉಡುಪಿ: ಮಂಗನ ಕಾಯಿಲೆ ಕುರಿತು ಜನಜಾಗೃತಿ ಮೂಡಿಸಲು ಜ. 18ರಂದು ಕಾರ್ಕಳ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲು ಗುರುವಾರ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. 

Advertisement

ಜ. 9ರಿಂದ ಇದುವರೆಗೆ ತಾಲೂಕಿನ ಹಿರ್ಗಾನ, ಹೆಬ್ರಿ, ಕಾರ್ಕಳ ಪುರಸಭೆ, ಮಾಳ, ಈದುವಿನಲ್ಲಿ ತಲಾ 1, ಕುಕ್ಕುಂದೂರಿನಲ್ಲಿ 2 ಮಂಗಗಳು ಸತ್ತ ವರದಿಯಾಗಿದ್ದು, ಹಿರ್ಗಾನ ಮಂಗನ ಶವಪರೀಕ್ಷೆ ಪಾಸಿಟಿವ್‌, ಕುಕ್ಕುಂದೂರಿನ ಮಂಗನ ಶವಪರೀಕ್ಷೆ ನೆಗೆಟಿವ್‌ ವರದಿ ಬಂದಿವೆ. 

ಗುರುವಾರ ಕೊರಗ ಸಮುದಾಯವರಿಗೆ ಮಾಹಿತಿ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ತಿಳಿಸಲಾಯಿತು. ಎಲ್ಲ ಗ್ರಾಮ ಮಟ್ಟದಲ್ಲಿ, ಶಾಲೆ ಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಹಶೀಲ್ದಾರ್‌ ತಿಳಿಸಿದರು. ಕಾರ್ಕಳ ತಾ.ಪಂ. ಇಒ, ಪಶುಸಂಗೋಪನ ಇಲಾಖೆ ಸ. ನಿರ್ದೇಶಕರು, ಕಾರ್ಕಳ ವಲಯ ಅರಣ್ಯಾಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. 

ಪಡುಅಲೆವೂರು: ಮಂಗನ ಶವ ಪತ್ತೆ
ಉಡುಪಿ ನಗರ ಹೊರವಲಯದ ಪಡು ಅಲೆವೂರು ಗುಡ್ಡ ಪ್ರದೇಶದಲ್ಲಿ ಸತ್ತು ಬಿದ್ದಿರುವ ಮಂಗ ಗುರುವಾರ ಪತ್ತೆಯಾಗಿದೆ.
ಕಾರ್ಕಳ ಕೆರ್ವಾಶೆ ಮತ್ತು ಸಾಣೂರಿನಲ್ಲಿ ತಲಾ 1, ನಿಟ್ಟೆ ಭಾಗದಲ್ಲಿಯೂ 2 ಮಂಗಗಳ ಶವ ಪತ್ತೆಯಾಗಿದೆ. ಪಡು ಅಲೆವೂರು, ಸಾಣೂರು ಮತ್ತು ಕೆರ್ವಾಶೆಯ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂಗಾಂಗ ಮಾದರಿಯನ್ನು ಕಳುಹಿಸ ಲಾಗಿದೆ. ಸ್ಥಳಕ್ಕೆ ವೈದ್ಯಾಧಿಕಾರಿಗಳು ಭೇಟಿ ನೀಡಿ ದ್ದಾರೆ. ಜಿಲ್ಲೆಯಲ್ಲಿ ಶಂಕಿತ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೆಎಂಸಿಯಲ್ಲಿ 27 ಮಂದಿಗೆ ಚಿಕಿತ್ಸೆ
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಇದು ವರೆಗೆ 92 ಮಂದಿ ಶಂಕಿತ ಮಂಗನ ಕಾಯಿಲೆ ರೋಗ ಚಿಕಿತ್ಸೆಗಾಗಿ ದಾಖಲಾಗಿದ್ದು, 51 ಮಂದಿಗೆ ದೃಢಪಟ್ಟಿದೆ. 10 ಮಂದಿ ವರದಿ ಬರಲು ಬಾಕಿ ಇದೆ. 65 ಮಂದಿ ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ. 27 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಸಾಗರ ಮತ್ತು ಆಸುಪಾಸಿನವರು ಎಂದು ಆಸ್ಪತ್ರೆ ತಿಳಿಸಿದೆ. 

Advertisement

ಶಿರೂರು: ಎಚ್ಚೆತ್ತ ಇಲಾಖೆ 
ಬೈಂದೂರು:
ಶಿರೂರಿನಲ್ಲಿ ಮಂಗಗಳು ಸಾವನ್ನಪ್ಪಿರುವುದು ಮಂಗನ ಕಾಯಿಲೆಯಿಂದ ಎನ್ನುವುದು ಪರೀಕ್ಷಾ ವರದಿ ಯಿಂದ ದೃಢಪಟ್ಟಿದೆ. ಉಡುಪಿ ಜಿಲ್ಲೆಯ ನೋಡಲ್‌ ಅಧಿಕಾರಿ ಗಳ ಮಾಹಿತಿ ಪ್ರಕಾರ ಒಟ್ಟು 12 ಮಂಗಗಳ ಪರೀಕ್ಷೆ ವರದಿ ಪುಣೆಯ ಲ್ಯಾಬ್‌ನಿಂದ ಬಂದಿದ್ದು, 8ರಲ್ಲಿ ಕಾಯಿಲೆ ಖಚಿತವಾಗಿದೆ. 

ಕಾಯಿಲೆ ದೃಢವಾಗುತ್ತಿದ್ದಂತೆ ಆರೋಗ್ಯ ಇಲಾಖೆ ಜಾಗೃತಗೊಂಡಿದೆ. ಗ್ರಾ.ಪಂ. ಮಟ್ಟದಲ್ಲಿ ತುರ್ತು ಸಭೆ ನಡೆಸಿದೆ. ಸಾರ್ವಜನಿಕರಿಗೆ ಸೂಕ್ತ ಮಾಹಿತಿ, ಶಿಕ್ಷಣ ಒದಗಿಸಲು ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿದೆ. ಔಷಧ ಪೂರೈಸಲಾಗಿದೆ. 

ಕುಂದಾಪುರ: 2 ಮಂಗಗಳ ಶವ ಪತ್ತೆ
ಕುಂದಾಪುರ:
ತಾಲೂಕಿನ ಕಂಡೂÉರು, ಕಾವ್ರಾಡಿಗಳಲ್ಲಿ ಗುರುವಾರ ಮಂಗನ ಶವ ಪತ್ತೆಯಾಗಿದೆ. ಇವು ಸಂಪೂರ್ಣ ಕೊಳೆತಿದ್ದು, ಅಲ್ಲೇ ಸುಡಲಾಗಿದೆ. ಎಲ್ಲಿಯೂ ಜ್ವರ ಪ್ರಕರಣ ಕಂಡುಬಂದಿಲ್ಲ. ಜಾಗೃತಿ, ಮಾಹಿತಿ ನೀಡುವಿಕೆ ಜತೆಗೆ ಸರ್ವೆ ನಡೆಯುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ| ನಾಗಭೂಷಣ ಉಡುಪ ಸ್ಪಷ್ಟಪಡಿಸಿದ್ದಾರೆ.

ಕಡಬದಲ್ಲೂ ಭೀತಿ
ಕಡಬ:
ತಾಲೂಕಿನ ಕುಟ್ರಾಪ್ಪಾಡಿ ಹಾಗೂ ಹಳೆನೇರೆಂಕಿ ಗ್ರಾಮಗಳ 2 ಕಡೆ ಮಂಗಗಳ ಶವ ಪತ್ತೆಯಾಗಿದ್ದು, ಭೀತಿಗೆ ಕಾರಣವಾಗಿದೆ. 

ಈ ಹಿಂದೆ ಮಂಗನ ಕಾಯಿಲೆ ಕಂಡುಬಂದಿದ್ದ ಹಳೇ ನೇರಂಕಿಯ ಶಿವಾರು ಮಲೆ ಪರಿಸರದಲ್ಲಿ ಮತ್ತೆ ಕೋತಿಗಳ ಶವಗಳು ಸಿಕ್ಕಿದ್ದು, ಆತಂಕ ಹೆಚ್ಚಿಸಿದೆ. ಕೆಲವು ದಿನಗಳ ಹಿಂದೆ ಕುಟ್ರಾಪ್ಪಾಡಿ ಗ್ರಾಮದ ಉಳಿಪ್ಪು ಅರಣ್ಯ ಪ್ರದೇಶದಲ್ಲಿ ಮಂಗನ ಅಸ್ಥಿಪಂಜರ ಪತ್ತೆ ಯಾಗಿತ್ತು. ಶವದ ಭಾಗಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲು ಸಾಧ್ಯವಾಗಿರಲಿಲ್ಲ.

ಕರಪತ್ರ ಹಂಚಿಕೆ
ಹಳೆನೇರೆಂಕಿಯಲ್ಲಿ ಪತ್ತೆಯಾದ ಮಂಗದ ಶವದ ಮರಣೋತ್ತರ ಪರೀಕ್ಷೆ ನಡೆಸಿ ಶವದ ಕೆಲವು ಭಾಗಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ಪರಿಸರದಲ್ಲಿ ಕೀಟನಾಶಕ ಸಿಂಪಡಿಸಲಾಗಿದೆ. ಪ್ರಯೋಗಾಲಯದ ವರದಿ ಕೈಸೇರಿದ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಲಿದೆ. ಹಳೆನೇರೆಂಕಿ, ಅಳದಂಗಡಿ, ನಾರಾವಿ, ಕೊಲ್ಲಮೊಗರು, ಶಿರಾಡಿ ಸಹಿತ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜನವಸತಿ ಪ್ರದೇಶಗಳಲ್ಲಿ ಮಂಗನ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಕರಪತ್ರಗಳನ್ನು ಹಂಚಲಾಗಿದೆ. ಮಂಗ ಮೃತಪಟ್ಟಿದಲ್ಲಿ ಕೂಡಲೇ ಸ್ಥಳೀಯ ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಡಿಎಚ್‌ಒ ಡಾ| ರಾಮಕೃಷ್ಣ ರಾವ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next