ಸಾಗರ: ತಾಲೂಕಿನಲ್ಲಿ ಮಂಗನ ಕಾಯಿಲೆ ವ್ಯಾಪಿಸುತ್ತಲೇ ಇದ್ದು, ಗುರುವಾರ ಅರಳಗೋಡಿನಲ್ಲಿ ಒಟ್ಟು 11 ಜ್ವರದ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ ಆರು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಅರಳಗೋಡಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಹಿತಿ ಪ್ರಕಾರ, ಈವರೆಗೆ ಇಲ್ಲಿಂದ 75 ಜನರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಸ್ತುತ ಈ ದಿನದ ಆರು ಪ್ರಕರಣಗಳು ಸೇರಿದಂತೆ ಒಟ್ಟು 28 ಜನ ಮಣಿಪಾಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅರಳಗೋಡಿನ 7 ಜನ ಕೆಎಫ್‌ಡಿಗೆ ತುತ್ತಾಗಿ ಮೃತಪಟ್ಟಿರುವುದು ದೃಢಪಟ್ಟಿದೆ. ಗುರುವಾರ ಕೂಡ ಮಂಗಗಳ ಸಾವಿನ ಮಾಹಿತಿ ಲಭ್ಯವಾಗಿದ್ದು, ಹಿರೇನೆಲ್ಲೂರು ಹಾಗೂ ಬ್ಯಾಕೋಡು ಸಮೀಪದ ಮೂರುಕೈ ಎಂಬಲ್ಲಿ ತಲಾ ಒಂದು ಮಂಗ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಪರೀಕ್ಷಾ ವರದಿ ಪಾಸಿಟಿವ್
ಬೈಂದೂರಿನ ಶಿರೂರಿನಲ್ಲಿ ಮಂಗಗಳು ಮೃತಪಟ್ಟಿರುವುದು ಮಂಗನ ಕಾಯಿಲೆಯಿಂದ ಎನ್ನುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಉಡುಪಿ ಜಿಲ್ಲೆಯ ನೋಡಲ್ ಅಧಿಕಾರಿಗಳ ಮಾಹಿತಿ ಪ್ರಕಾರ ಒಟ್ಟು 12 ಮಂಗಗಳ ಪರೀಕ್ಷೆ ವರದಿ ಪುಣೆಯ ಪ್ರಯೋಗಾಲಯದಿಂದ ಬಂದಿದ್ದು, ಇವುಗಳಲ್ಲಿ
ಎಂಟರಲ್ಲಿ ಮಂಗನ ಕಾಯಿಲೆ ಖಚಿತವಾಗಿದೆ.