Advertisement

ಮಂಗನ ಕಾಯಿಲೆ: ಕಾರ್ಕಳದಲ್ಲಿ ಒಟ್ಟು 2 ಪ್ರಕರಣ  

12:30 AM Feb 15, 2019 | |

ವಿಶೇಷ ವರದಿ ಕಾರ್ಕಳ: ಇತ್ತೀಚೆಗೆ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಸದ್ದು ಮಾಡಿದ ಮಂಗನ ಕಾಯಿಲೆ ಭೀತಿ (ಕೆಎಫ್ಡಿ) ಜನರ ನೆಮ್ಮದಿಯನ್ನೇ ಕೆಡಿಸಿದೆ. ಉಣ್ಣೆ (ಉಣುಗು)ಗಳಿಂದ ಈ ಕಾಯಿಲೆ ಹರಡುತ್ತಿದ್ದರೂ ಮಂಗಗಳು ಸತ್ತ ಸುದ್ದಿ ಕೇಳಿ ಜನ ಮತ್ತಷ್ಟು ಆತಂಕಕ್ಕೀಡಾಗುತ್ತಾರೆ.

Advertisement

ಜ. 10ರ ಬಳಿಕ ಇಲ್ಲಿವರೆಗೆ ಕಾರ್ಕಳ ತಾಲೂಕು ಒಂದರಲ್ಲೇ ಒಟ್ಟು 52 ಮಂಗಗಳು ಮೃತಪಟ್ಟಿವೆ. ವಯೋಸಹಜವಾಗಿ ಮಂಗ ಗಳು ಸಾಯುತ್ತಿದ್ದರೂ, ಕಾಯಿಲೆಯ ಗುಮ್ಮದಿಂದ ಜನರು ಭಯಭೀತ ಗೊಂಡಿದ್ದಾರೆ. ಕೆಲವೊಂದು ಮಂಗಗಳು ವಾಹನ ಅಪಘಾತ, ವಿದ್ಯುತ್‌ ಶಾಕ್‌ನಿಂದಲೂ ಮೃತಪಟ್ಟಿವೆ.ಸತ್ತ 52 ಮಂಗಗಳ ಪೈಕಿ 2 ಮಂಗಗಳ ಸ್ಯಾಂಪಲ್‌ನಲ್ಲಿ  ಸೋಂಕು ದೃಢಪಟ್ಟಿದೆ. ಬಹುತೇಕ ಮಂಗಗಳು ಕೊಳೆತು ಮರಣೋತ್ತರ ಪರೀಕ್ಷೆ  ನಡೆಸಲಾಗದ ಕಾರಣ 52ರಲ್ಲಿ  19 ಮಂಗಗಳ ಮರಣೋತ್ತರ ಪರೀಕ್ಷೆ ಮಾತ್ರ ನಡೆಸಲಾಗಿದೆ. ಸ್ಯಾಂಪಲ್‌ ಅನ್ನು ಶಿವಮೊಗ್ಗ ವಿಡಿಎಲ್‌ (Virus Diagnostic Laboratory) ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಅವುಗಳಲ್ಲಿ 11 ನೆಗೆಟಿವ್‌, 2 ಪಾಸಿಟಿವ್‌ ಆಗಿ ಕಂಡುಬಂದಿದೆ. 6 ಮಂಗಗಳ ವರದಿ ಇನ್ನಷ್ಟೇ ಬರಬೇಕಿದೆ. ಹಿರ್ಗಾನದ ಚಿಕ್ಕಲ್‌ಬೆಟ್ಟು ಹಾಗೂ ಅಯ್ಯಪ್ಪನಗರದ ಪಿಲಿಚೆಂಡಿಯಲ್ಲಿ ಪತ್ತೆಯಾದ ಮಂಗಗಳ ಸ್ಯಾಂಪಲ್‌ ನಲ್ಲಿ ಸೋಂಕು ದೃಢಪಟ್ಟಿದೆ.

ಅನವಶ್ಯವಾಗಿ ಕಾಡಿಗೆ ಹೋಗಬಾರದು. ತಮ್ಮ ಜಾನುವಾರು ಕಾಡಿಗೆ ಹೋಗದಂತೆ ಸಾಧ್ಯವಾದಷ್ಟು ತಡೆಗಟ್ಟಬೇಕು. ಕಾಡಿಗೆ ಹೋಗಲೇಬೇಕಾದ ಸಂದರ್ಭ ಮೈತುಂಬಾ ಬಟ್ಟೆ ಧರಿಸಿ, ಶೂ ಧರಿಸಿ ತೆರಳಬೇಕು. ಆರೋಗ್ಯ ಇಲಾಖೆಯಿಂದ ಉಚಿತವಾಗಿ ವಿತರಿಸುವ ಡಿ.ಎಂ.ಪಿ. ತೈಲ ಲೇಪಿಸಿ ಕಾಡಿಗೆ ತೆರಳಬೇಕು. ಕಾಡಿನಿಂದ ಬಂದ ಅನಂತರ ಬಿಸಿನೀರಿನಿಂದ ಸೋಪು ಹಚ್ಚಿ ಸ್ನಾನ ಮಾಡಿ,  ಬಟ್ಟೆಗಳನ್ನು ಬಿಸಿನೀರಿನಲ್ಲಿ  ತೊಳೆಯಬೇಕು. ಜ್ವರ, ವಿಪರೀತ ತಲೆನೋವು, ಕೈಕಾಲು- ಸೊಂಟನೋವು, ನಿಶ್ಶಕ್ತಿ ಕಂಡು ಬಂದಲ್ಲಿ ತತ್‌ಕ್ಷಣವೇ ತಪಾಸಣೆಗಾಗಿ ವೈದ್ಯರ ಬಳಿ ತೆರಳಿ ಸಲಹೆ ಪಡೆಯುವುದು ಮತ್ತು  ಸತ್ತ ಮಂಗ ಕಂಡುಬಂದಲ್ಲಿ ಸಮೀಪದ ಆರೋಗ್ಯ ಕೇಂದ್ರ, ಅರಣ್ಯ ಇಲಾಖೆ ಅಥವಾ ಪಶುವೈದ್ಯರ ಗಮನಕ್ಕೆ ತರುವಂತೆ ಜಾಗೃತಿ ಮೂಡಿಸಲಾಗುತ್ತಿದೆ.  

ಭಯ ಬೇಡ
ಮಂಗನ ಕಾಯಿಲೆ ಕುರಿತು ಭಯ ಬೇಡ. ಆದರೆ ಅಗತ್ಯ ಮುನ್ನೆಚರಿಕೆ  ಕ್ರಮಗಳನ್ನು ವಹಿಸುವುದು ಉತ್ತಮ.
– ಡಾ| ಕೃಷ್ಣಾನಂದ
ತಾಲೂಕು ಆರೋಗ್ಯ ಅಧಿಕಾರಿ, ಕಾರ್ಕಳ

Advertisement

Udayavani is now on Telegram. Click here to join our channel and stay updated with the latest news.

Next