Advertisement
ಏನಿದು ಮಂಗೂಸ್ ಬ್ಯಾಟ್ಇದು ಹೊಸ ರೂಪದ ಕ್ರಿಕೆಟ್ ಬ್ಯಾಟ್. ಸಾಮಾನ್ಯ ಬ್ಯಾಟ್ ಗಿಂತ ಬ್ಯಾಟಿನ ಹಿಡಿ ( ಹ್ಯಾಂಡಲ್) ಉದ್ದವಾಗಿರುತ್ತದೆ. ಬ್ಯಾಟಿನ ಬ್ಲೇಡ್ ಸಣ್ಣದಾಗಿರುತ್ತದೆ. ಮಂಗೂಸ್ ಬ್ಯಾಟಿನ ಹಿಡಿಕೆ ಮಾಮೂಲಿ ಕ್ರಿಕೆಟ್ ಬ್ಯಾಟಿಗಿಂತ 43% ಉದ್ದವಾಗಿರುತ್ತದೆ. 33% ನಷ್ಟು ಸಣ್ಣ ಬ್ಲೇಡ್ ಹೊಂದಿರುವುದು ಈ ಮಂಗೂಸ್ ಬ್ಯಾಟಿನ ವಿಶೇಷತೆ. ಉದ್ದ ಹ್ಯಾಂಡಲ್ ಹೊಂದಿರುವುದರಿಂದ ಸಾಮಾನ್ಯ ಬ್ಯಾಟಿಗಿಂತ ಆಟಗಾರನ ಹೊಡೆತಕ್ಕೆ 20% ರಷ್ಟು ಜಾಸ್ತಿ ಶಕ್ತಿಯನ್ನು ಇದು ಕೊಡುತ್ತದೆ. ಇದರೊಂದಿಗೆ ಬ್ಯಾಟ್ಸ್ ಮನ್ ಬ್ಯಾಟ್ ಬೀಸುವ ವೇಗ ಕೂಡಾ ಶೇಕಡಾ 15ರಷ್ಟು ಹೆಚ್ಚುತ್ತದೆ.
ಕ್ರಿಕೆಟ್ ವಿಶ್ಲೇಷಕರು ಸಾಮಾನ್ಯವಾಗಿ ಕ್ರಿಕೆಟ್ ಬ್ಯಾಟಿನಲ್ಲಿ ‘ಸ್ವೀಟ್ ಸ್ಪಾಟ್’ ಅನ್ನು ಗುರುತಿಸುತ್ತಾರೆ. ಅಂದರೆ ಬ್ಯಾಟಿನ ಮಧ್ಯ ಭಾಗಕ್ಕೆ ಚೆಂಡು ಬಿದ್ದಾಗ ಚೆಂಡು ಹೆಚ್ಚಿನ ವೇಗ ಪಡೆಯುತ್ತದೆ. ಆಟಗಾರ ತಾನೆಣಿಸಿದಲ್ಲಿ ಚೆಂಡನ್ನು ಹೊಡೆಯಲು ಸಾಧ್ಯವಾಗುತ್ತದೆ. ಆದರೆ ಈ ಮಂಗೂಸ್ ಬ್ಯಾಟ್ ನ ಬ್ಲೇಡ್ ಸಣ್ಣದಾಗಿರುವುದರಿಂದ ಇದರಲ್ಲಿ ಯಾವುದೇ ವಿಶೇಷ ‘ಸ್ವೀಟ್ ಸ್ಪಾಟ್’ ಅನ್ನು ಗುರುತಿಸುವುದು ಕಷ್ಟ. 2010ರ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾಥ್ಯೂ ಹೇಡನ್ ‘ಮಂಗೂಸ್’ ಎಂಬ ಹೊಸ ಮಾದರಿಯ ಬ್ಯಾಟ್ ಅನ್ನು ಐಪಿಎಲ್ ಗೆ ಪರಿಚಯಿಸಿದರು. ಮಾಮೂಲಿ ಬ್ಯಾಟ್ ಗಿಂತ ಸಣ್ಣ ಗಾತ್ರದ ಮಂಗೂಸ್ ಬ್ಯಾಟ್ ಅನ್ನು ಹಿಡಿದು ಹೇಡನ್ ಕ್ರೀಸ್ ಗೆ ಬಂದಾಗ ಈ ದಾಂಡಿಗ ಈ ಸಣ್ಣ ಬ್ಯಾಟ್ ನಲ್ಲಿ ಏನು ಮಾಡುತ್ತಾರಪ್ಪ ಎಂದುಕೊಂಡವರೇ ಹೆಚ್ಚು. ಆದರೆ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಡೆದಿದ್ದ ಈ ಪಂದ್ಯದಲ್ಲಿ ಹೇಡನ್ ಚುಟುಕು ಬ್ಯಾಟ್ ನಿಂದ ದೊಡ್ಡ ದೊಡ್ಡ ಸಿಕ್ಸರ್ ಗಳ ಸುರಿಮಳೆಗೈದರು. ಕೇವಲ 43 ಎಸೆತ ಎದುರಿಸಿ ಹೇಡನ್ ಸಿಡಿಸಿದ್ದು ಬರೋಬ್ಬರಿ 93 ರನ್. ಏಳು ಸಿಕ್ಸರ್ ಗಳು ಮಂಗೂಸ್ ಬ್ಯಾಟಿನಿಂದ ಸಿಡಿದಿತ್ತು.
Related Articles
ಈ ಬ್ಯಾಟ್ ಉಪಯೋಗಿಸಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದರೂ ಸ್ವತಃ ಹೇಡನ್ ಮತ್ತೆ ಮಂಗೂಸ್ ಬ್ಯಾಟ್ ಉಪಯೋಗಿಸಿರಲಿಲ್ಲ. ಕಾರಣ ಹೇಡನ್ ಮಾಡಿಕೊಂಡಿದ್ದ ಒಂದು ಒಪ್ಪಂದ. ಆ ಒಂದು ಐಪಿಎಲ್ ನಲ್ಲಿ ಮಂಗೂಸ್ ಬ್ಯಾಟ್ ಉಪಯೋಗಿಸಲು ಹೇಡನ್ ಗೆ ಬ್ಯಾಟ್ ತಯಾರಿಕಾ ಸಂಸ್ಥೆ ಲಕ್ಷಾಂತರ ರೂಪಾಯಿ ಕೊಟ್ಟಿತ್ತು. ಮಂಗೂಸ್ ಬ್ಯಾಟನ್ನು ಪ್ರಚಾರ ಮಾಡುವುದು ಅವರ ಉದ್ದೇಶವಾಗಿತ್ತು.
Advertisement
ಆದರೆ ಮ್ಯಾಥ್ಯೂ ಹೇಡನ್ ಗಿಂತ ಮೊದಲೇ ಮಂಗೂಸ್ ಬ್ಯಾಟನ್ನು ವಿಶ್ಚ ಕ್ರಿಕೆಟ್ ಗೆ ಪರಿಚಯಿಸಿದವರು ಇಂಗ್ಲೆಂಡ್ ನ ಸ್ಟುವರ್ಟ್ ಲಾ. 2009ರಲ್ಲಿ ಮೇಯಲ್ಲಿ ಇಂಗ್ಲಿಷ್ ಟಿ ಟ್ವೆಂಟಿ ಲೀಗ್ ನಲ್ಲಿ ಡರ್ಬಿಶೈರ್ ಪರ ಸ್ಟುವರ್ಟ್ ಮೊದಲ ಸಲ ಮಂಗೂಸ್ ಬ್ಯಾಟ್ ನಲ್ಲಿ ಆಡಿದ್ದರು.
ಮಂಗೂಸ್ ಬ್ಯಾಟ್ ನಿಷೇಧ ?ಇಂತಹ ಸುದ್ದಿಯೊಂದು ಕ್ರಿಕೆಟ್ ಅಭಿಮಾನಿಗಳ ವಲಯದಲ್ಲಿ ಹರಿದಾಡಿತ್ತು. ಐಸಿಸಿ ಈ ಬ್ಯಾಟನ್ನು ಕ್ರಿಕೆಟ್ ನಿಂದ ನಿಷೇಧ ಮಾಡಿದೆ ಎಂದು ವದಂತಿ ಇತ್ತು. ಅದಕ್ಕೆ ಕಾರಣ ಹೇಡನ್ ನಂತರ ಈ ಚುಟುಕು ಬ್ಯಾಟನ್ನು ಬಳಸಲು ಯಾರೂ ಮನಸು ಮಾಡಲಿಲ್ಲ. ಆದರೆ ಐಸಿಸಿ ಆಗಲಿ, ಬಿಸಿಸಿಐ ಆಗಲಿ ಇದುವರೆಗೆ ಈ ಬ್ಯಾಟನ್ನು ನಿಷೇಧ ಮಾಡಿಲ್ಲ.
ಆದರೆ ಮಂಗೂಸ್ ಬ್ಯಾಟಿನ ಬಳಕೆ ನಿಲ್ಲಲು ಮೂಲ ಕಾರಣ ಮಂಗೂಸ್ ನ ಸಣ್ಣ ಬ್ಲೇಡ್. ಬ್ಲೇಡ್ ನಲ್ಲಿ ಹೆಚ್ಚು ಜಾಗವಿರದ ಕಾರಣ ಚೆಂಡು ಈ ಬ್ಯಾಟ್ ನ ಅಂಚಿಗೆ ತಾಗಿ ಕೀಪರ್ ಅಥವಾ ಸ್ಲಿಪ್ ಫೀಲ್ಡರ್ ಗೆ ಕ್ಯಾಚ್ ಹೋಗುವ ಅವಕಾಶ ಜಾಸ್ತಿ. ಹಾಗಾಗಿ ಇದು ಕೇವಲ ಹೊಡಿಬಡಿ ಆಟಕ್ಕೆ ಮಾತ್ರ ಸೂಕ್ತ. ರಕ್ಷಣಾತ್ಮಕ ಆಟಕ್ಕೆ ಈ ಬ್ಯಾಟ್ ಬಳಸಿದರೆ ಬೇಗನೇ ಔಟ್ ಆಗುವುದು ಖಚಿತ. ಕೀರ್ತನ್ ಶೆಟ್ಟಿ ಬೋಳ