ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ಯಾರಧ್ದೋ ಕಂಪೆನಿ ಹೆಸರಲ್ಲಿ ಆರೋಪಿಗಳು ನಕಲಿ ಖಾತೆ ತೆರೆದು ದೊಡ್ಡ ಮೊತ್ತದ ಹಣ ವರ್ಗಾವಣೆ ಮಾಡಿರುವ ಸಂಗತಿ ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಯಲ್ಲಿ ಬಯಲಾಗಿದೆ.
ಈ ಸಂಬಂಧ ಕಂಪೆನಿಯ ಅಸಲಿ ಮಾಲಕರು ಬೆಂಗಳೂರಿನ 2 ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವ 4 ಪ್ರಕರಣಗಳ ತನಿಖೆಯ ಜವಾಬ್ದಾರಿಯನ್ನೂ ಎಸ್‌ಐಟಿಗೆ ವಹಿಸಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣವು ಬಗೆದಷ್ಟು ಆಳಕ್ಕೆ ಹೋಗುತ್ತಿದೆ.
ಬಂಧಿತ ಆರೋಪಿಗಳು ಯಾರದ್ದೋ ಕಂಪೆನಿ ಹೆಸರಲ್ಲಿ ಖಾತೆ ತೆರೆದು ನಿಗಮಕ್ಕೆ ಸೇರಿದ ದೊಡ್ಡ ಮೊತ್ತವನ್ನು ವರ್ಗಾವಣೆ ಮಾಡಿರುವುದು ಎಸ್‌ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಎಸ್‌ಐಟಿ ಅಧಿಕಾರಿಗಳು ಆ ಖಾತೆಯ ಅಸಲಿ ಕಂಪೆನಿ ಮಾಲಕರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗಿದೆ.
ಆರೋಪಿಗಳು ಅಸಲಿ ಕಂಪೆನಿಗಳ ಮಾಲಕರ ಗಮನಕ್ಕೆ ಬಾರದಂತೆ ಅದೇ ಕಂಪೆನಿ ಹೆಸರಲ್ಲಿ ನಕಲಿ ಖಾತೆ ತೆರೆದು ಕೋಟ್ಯಂತರ ರೂ. ವರ್ಗಾವಣೆ ನಡೆಸಿರುವುದು ಗೊತ್ತಾಗಿದೆ. ಅಸಲಿ ಮಾಲಕರಿಗೆ ತಮ್ಮ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆರೆದಿರುವ ಸಂಗತಿಯೇ ಗೊತ್ತಿರಲಿಲ್ಲ. ಎಸ್‌ಐಟಿ ಅಧಿಕಾರಿಗಳು ನಡೆದ ಸಂಗತಿಗಳನ್ನು ವಿವರಿಸಿದಾಗ ಅಸಲಿ ಮಾಲಕರು ಬೆಚ್ಚಿಬಿದ್ದಿದ್ದಾರೆ.
20 ಕೋಟಿಗೂ
ಅಧಿಕ ವರ್ಗಾವಣೆ ?
ಒಂದು ಮೂಲಗಳ ಪ್ರಕಾರ, ಆರೋಪಿಗಳು ತೆರೆದಿದ್ದ ನಕಲಿ ಖಾತೆಗಳಿಗೆ ವಾಲ್ಮೀಕಿ ನಿಗಮದ ಅಧಿಕೃತ ಖಾತೆಯಿಂದ 20 ಕೋಟಿಗೂ ಅಧಿಕ ದುಡ್ಡು ವರ್ಗಾವಣೆಯಾಗಿದೆ. ಅನಂತರ ಆ ಖಾತೆಗಳಿಂದ ಆರೋಪಿಗಳು ದುಡ್ಡನ್ನು ಡ್ರಾ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಗರಣದ ತನಿಖೆ ಚುರುಕುಗೊಳಿಸಿ ರುವ ಎಸ್‌ಐಟಿ ಅಧಿಕಾರಿಗಳು ಇದು ವರೆಗೆ ಒಟ್ಟು 11 ಆರೋಪಿಗಳನ್ನು ಬಂಧಿಸಿ, 14.35 ಕೋಟಿ ರೂ. ಜಪ್ತಿ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.