Advertisement

ಹಣ ವರ್ಗಾವಣೆ: ನಿಲುವು ಸ್ಪಷ್ಟನೆಗೆ ಕಾಲಾವಕಾಶ

06:05 AM Sep 27, 2018 | Team Udayavani |

ಬೆಂಗಳೂರು: ಮುಜರಾಯಿ ಇಲಾಖೆಗೆ ಸೇರಿದ ರಾಜ್ಯದ 81 ದೇವಾಲಯಗಳಿಂದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು 12.35 ಕೋಟಿ ಹಣ ವರ್ಗಾವಣೆ ಮಾಡುವ ಕುರಿತ ಆದೇಶದ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಹೈಕೋರ್ಟ್‌ ಬುಧವಾರ ರಾಜ್ಯ ಸರ್ಕಾರಕ್ಕೆ ಒಂದು ದಿನದ ಕಾಲಾವಕಾಶ ನೀಡಿತು.

Advertisement

ಮುಜರಾಯಿ ದೇವಾಲಯದ ಹುಂಡಿ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ವರ್ಗಾಯಿಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಕಲ್ಯಾಣನಗರದ ಹೇಮಾ ನಾಯ್ಡು ಮತ್ತು ಸಾರಕ್ಕಿಯ ಡಾ. ವಿ.ಆರ್‌.ಸಂಪತ್‌ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ. ದಿನೇಶ್‌ ಮಹೇಶ್ವರಿ ಹಾಗೂ ನ್ಯಾ.ಎಸ್‌.ಜಿ. ಪಂಡಿತ್‌ ಅವರಿದ್ದ ವಿಭಾಗೀಯ ನ್ಯಾಯ ಪೀಠ, ಸರ್ಕಾರಕ್ಕೆ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಶುಕ್ರವಾರ ಮುಂದೂಡಿತು.

ಬುಧವಾರ ವಿಚಾರಣೆ ಆರಂಭವಾಗುತ್ತಿದ್ದಂತೆಯೇ ದೇವಾಲಯಗಳ ಹುಂಡಿ ಹಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವುದು ಕಡ್ಡಾಯವೇನಲ್ಲ. ದೇಗುಲಗಳೇ ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದರಿಂದ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎ.ಎಸ್‌. ಪೊನ್ನಣ್ಣ ಹೇಳದರು.

ಇದಕ್ಕೆ ಒಪ್ಪದ ಮುಖ್ಯ ನಾಯಮೂರ್ತಿಗಳು ಹಿನ್ನೆಲೆ ಬೇಕಾಗಿಲ್ಲ, ಸರ್ಕಾರದ ಆದೇಶ ಸಮರ್ಥಿಸಿಕೊಳ್ಳುತ್ತೀರಾ ಎಂದಾದರೆ, ಆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ಒಂದು ವಾರ ಕಾಲಾವಕಾಶ ಕೋರಿದರು. ಒಂದು ದಿನದಲ್ಲಿ ನಿಲುವು ಸ್ಪಷ್ಟಪಡಿಸಲು ಸೂಚಿಸಿತು.
ಹಲವು ದೇವಾಲಯಗಳು ಸಿಎಂ ಪರಿಹಾರ ನಿಧಿಗೆ ದೇಣಿಗೆ ನೀಡಲು ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದವು. ಈ ಬಗ್ಗೆ ಚರ್ಚೆ ನಡೆದು ಕಾರ್ಯತಂತ್ರ ರೂಪಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶ ಹೊರಡಿಸಿದ ಎರಡೇ ದಿನಗಳಲ್ಲಿ ಎಲ್ಲ ದೇವಾಲಯಗಳು ನಿಧಿಗೆ ದೇಣಿಗೆ ಹಣ ವರ್ಗಾಯಿಸಿವೆ ಎಂದು ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ವಿವರಿಸಿದರು.

Advertisement

ದೇಣಿಗೆ ನೀಡುವುದು ಸ್ವಯಂಪ್ರೇರಿತ ಎನ್ನುವುದಾದರೆ ಸರ್ಕಾರಿ ಆದೇಶ ಹೊರಡಿಸಿದ್ದು ಯಾಕೆ? ಆದರಲ್ಲಿ ಕಡ್ಡಾಯ ಎಂದು ಉಲ್ಲೇಖೀಸಿದ್ದು ಹೇಗೆ? ಇಂತಹ ಆದೇಶಗಳ ಕಾನೂನು ಪರಿಣಾಮಗಳ ಬಗ್ಗೆ ಯೋಚಿಸಿದ್ದೀರಾ? ಎಂದು ನ್ಯಾಯಪೀಠ ತೀಕ್ಷ್ಣವಾಗಿ ಪ್ರತಿಕ್ರಿಯಿಸಿತು. ರಾಜ್ಯದ ಪ್ರವಾಹ ಪೀಡಿತ ಸಂತ್ರಸ್ತರಿಗಾಗಿ ಮುಜರಾಯಿ ಇಲಾಖೆ ಅಧೀನದಲ್ಲಿರುವ 81ಅಧಿಸೂಚಿತ ದೇವಾಲಯಗಳಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ವರ್ಗಾಯಿಸುವಂತೆ ಹೊರಡಿಸಿರುವ ಆದೇಶ ಕಾನೂನು ಬಾಹಿರ ಎಂದು ವಕೀಲರು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next