Advertisement

ಹಣ, ಟೆನಿಸ್‌, ವಿಂಬಲ್ಡನ್‌…ಸಾಧನೆ!

11:57 AM Jul 15, 2017 | |

 2017ರ ವಿಂಬಲ್ಡನ್‌ ಕೂಡ ಕೊನೆಯ ಘಟ್ಟದಲ್ಲಿದೆ. ಪ್ರತಿಭೆ, ತಾಳಿಕೆಯ ಸಂಪನ್ಮೂಲ ಇರುವವರು ಚಾಂಪಿಯನ್‌ಗಳೂ ಆಗುತ್ತಾರೆ. ಅವರಿಗೆ ಡಾಲರ್‌ ಲೆಕ್ಕದಲ್ಲಿ ಕೋಟಿ ಕೋಟಿ ರೂ. ಹರಿದುಬರುತ್ತದೆ. ತೀರಾ ಸಹಜವಾಗಿ ನಾವು ಭಾರತೀಯರು ಅಚ್ಚರಿಯಿಂದ ಕಣ್ಣರಳಿಸುತ್ತೇವೆ. ಆದರೆ ಈ ಟೆನಿಸ್‌ ಅಥವಾ ಒಂದು ವೃತ್ತಿಪರ ಆಟದ ಒಳಮಗ್ಗುಲುಗಳನ್ನು ನಿರುಕಿಸುವಾಗ ಹತ್ತು ಹಲವು ಬಿಡಿ ಬಿಡಿ ಚಿತ್ರಗಳು ಹಾಗೇ ಕಣ್ಣ ಮುಂದೆ ಹಾದು ಹೋಗುತ್ತದೆ. ಅಂತಹವುಗಳ ಕೊಲಾಜ್‌ ಕೂಡ ಒಂದಷ್ಟು ಅಸಲಿಯತ್ತಾದ ಜೀವನವನ್ನು ತೋರಿಸಬಹುದೇ?

Advertisement

ವೃತ್ತಿಪರ ಟೆನಿಸ್‌ನಲ್ಲಿ ಭಾರತೀಯರು ಕೂಡ ರ್ಯಾಕೆಟ್‌ ಝಳಪಿಸುತ್ತಿದ್ದಾರೆ. ವೈಯುಕ್ತಿಕ ಸರ್ಕ್ನೂಟ್‌ ಸಾಧನೆಗಳ ಬಗ್ಗೆ ಮಾತೇ ಆಡದೆ ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕುವುದು ಕೇವಲ ಲಿಯಾಂಡರ್‌ ಪೇಸ್‌, ಮಹೇಶ್‌ ಭೂಪತಿ ಹಾಗೂ ಸಾನಿಯಾ ಮಿರ್ಜಾ ದಾಖಲೆಗಳು. 

ಕುತೂಹಲಿಗಳಿಗಾಗಿ ಮಾಹಿತಿ ಒದಗಿಸುವುದಾದರೆ, ಪೇಸ್‌ 8 ಡಬಲ್ಸ್‌ ಹಾಗೂ 10 ಮಿಶ್ರ ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌, ಮಹೇಶ್‌ ಬತ್ತಳಿಕೆಯಲ್ಲಿ 6 ಡಬಲ್ಸ್‌ ಹಾಗೂ 8 ಮಿಶ್ರ, ಸಾನಿಯಾ 7 ಮಿಶ್ರ, 4 ಡಬಲ್ಸ್‌ ಗ್ರ್ಯಾನ್‌ಸ್ಲಾಮ್‌ಗಳಿವೆ. ರೋಹನ್‌ ಬೋಪಣ್ಣ ಮೊನ್ನೆ ಮೊನ್ನೆ ಫ್ರೆಂಚ್‌ ಮಿಶ್ರ ಡಬಲ್ಸ್‌ ಗೆದ್ದಿದ್ದಾರೆ. ಜೂನಿಯರ್‌ ವಿಭಾಗದಲ್ಲೂ ರಾಮನಾಥನ್‌ ಕೃಷ್ಣನ್‌, ರಮೇಶ್‌ಕೃಷ್ಣನ್‌, ಪೇಸ್‌, ಯೂಕಿ ಬಾಂಬ್ರಿ ಹೆಸರುಗಳನ್ನು ಕಾಣುತ್ತೇವೆ. ಸಿಂಗಲ್ಸ್‌ ವಿಭಾಗದ ಪ್ರಧಾನ ಸುತ್ತುಗಳಲ್ಲಿ ಬಿಡಿ, ಗ್ರ್ಯಾನ್‌ಸ್ಲಾಮ್‌ ಅರ್ಹತಾ ಸುತ್ತುಗಳೂ ಸುಸ್ತೇ!

ಈಗಿನ ಎಟಿಪಿ ರ್‍ಯಾಂಕಿಂಗ್‌ ಪ್ರಕಾರ ಭಾರತದ ಅಗ್ರ ಸಿಂಗಲ್ಸ್‌ ಆಟಗಾರ ರಾಮ್‌ಕುಮಾರ್‌ ರಾಮನಾಥನ್‌ 184ನೇ ಶ್ರೇಯಾಂಕದಲ್ಲಿದ್ದರೆ, ಮಹಿಳಾ ವಿಭಾಗದ ಅಂಕಿತಾ ರೈನಾ ಡಬ್ಲ್ಯುಟಿಎ ರ್‍ಯಾಂಕಿಂಗ್‌ನಲ್ಲಿ 274ರಲ್ಲಿರುವುದೇ ಉಚ್ಚ ಸಾಧನೆ. 124 ಆಟಗಾರರಿಗೆ ಅವಕಾಶ ಕಲ್ಪಿಸುವ ಗ್ರ್ಯಾನ್‌ಸ್ಲಾಮ್‌ ಸಿಂಗಲ್ಸ್‌ನಲ್ಲಿ ಮೊದಲ 80-90 ಆಟಗಾರರಿಗಷ್ಟೇ ನೇರ ಪ್ರವೇಶ ಲಭ್ಯವಾಗುತ್ತದೆ. ಆದರೆ ಇದಕ್ಕಾಗಿ ನಾವು ಭಾರತೀಯ ಆಟಗಾರರನ್ನೋ, ವ್ಯವಸ್ಥೆಯನ್ನೋ ದೂಷಿಸುವ ಮುನ್ನ ಒಂದಷ್ಟು ವಾಸ್ತವಗಳನ್ನು ಮನವರಿಕೆ ಮಾಡಿಕೊಳ್ಳಬೇಕು.

ಇಂಗ್ಲೆಂಡ್‌ನ‌ಲ್ಲೂ ಬರಗಾಲ!
 ನಾವು ಬಿಡಿ, ಖುದ್ದು ವಿಂಬಲ್ಡನ್‌ ಟೂರ್ನಿಯನ್ನು ಸಂಘಟಿಸುವ ಇಂಗ್ಲೆಂಡ್‌ನ‌ ಜನತೆ ಭರಪೂರ ಗ್ರ್ಯಾನ್‌ಸ್ಲಾಮ್‌ ಬರವನ್ನು ಅನುಭವಿಸಿದ್ದಾರೆ. ಆ್ಯಂಡಿ ಮರ್ರೆ ನಾಲ್ಕು ವರ್ಷಗಳ ಹಿಂದೆ ತಮ್ಮ ಮೊದಲ ವಿಂಬಲ್ಡನ್‌ ಗೆಲ್ಲುವ ಮೂಲಕ ಶತಮಾನಗಳ ಬ್ರಿಟಿಷ್‌ ಬರಕ್ಕೆ ವಿದಾಯ ಹಾಡಿದರು. ಆದರೆ 33 ವರ್ಷಗಳಿಂದ ಇದೇ ಇಂಗ್ಲೆಂಡಿಗರು ಮಹಿಳಾ ವಿಭಾಗದ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಕೂಡ ತಮ್ಮ ದೇಶದ ಆಟಗಾರ್ತಿಯೊಬ್ಬಳನ್ನು ಕಾಣದೆ ನಿರಾಶೆ ಅನುಭವಿಸುತ್ತಿದ್ದಾರೆ. ಈ ಬಾರಿ 6ನೇ ಶ್ರೇಯಾಂಕದ ಜೋ ಕೊಂಟಾ ಕೊನೆಪಕ್ಷ ಆ ಸಂಕಟಕ್ಕೆ ಇದನ್ನು ಬರೆಯುವ ವೇಳೆಗೆ ಮುಲಾಮು ಹಚ್ಚಿದ್ದರು.

Advertisement

ಹಣ ಬಲ, ಸೌಲಭ್ಯಗಳ ಅನುಕೂಲವಿರುವ ದೇಶದಲ್ಲಿಯೇ ಇಂತಹ ಪಡಿಪಾಟಲು ಇರುವಾಗ ಭಾರತದಲ್ಲಿ ನಾವು ಈವರೆಗೆ ಒಬ್ಬ ಸಾನಿಯಾ ಮಿರ್ಜಾರನ್ನು ಮಾತ್ರ ಕಂಡಿರುವುದು ಹೀನಾಯವೇನಲ್ಲ. ಅಷ್ಟಕ್ಕೂ ಸಾನಿಯಾ ಈವರೆಗೆ ಮಾಡಿರುವ ಸಾಧನೆಗೆ ನಾವು ಹೆಚ್ಚಿನ ಗೌರವ ಸಲ್ಲಿಸಬೇಕು. ಅದಕ್ಕೂ ಮುಖ್ಯವಾಗಿ, ಓರ್ವ ಆಟಗಾರನಿಂದ ವೃತ್ತಿಪರ ಟೆನಿಸ್‌ ಕೇಳುವ ತೆರಿಗೆಗಳು ಶೇ.28ರ ಜಿಎಸ್‌ಟಿಗಿಂತ ದುಬಾರಿ!

  ಪ್ರತಿಭೆಗೆ ಹಣವೇ ಮಾರ್ಗದರ್ಶಕ!
 ಇಂದು ವಿಂಬಲ್ಡನ್‌ ಮೊದಲ ಸುತ್ತಿನ ಪರಾಜಿತರಿಗೆ 35 ಸಾವಿರ ಡಾಲರ್‌ ಕೊಡುತ್ತಾರೆ. ಈ ಮೊತ್ತ ಕೈಗೆಟುಕಲು ಪ್ರದಾನ ಸುತ್ತು ತಲುಪಬೇಕು. ಡಾರ್ಟ್‌ ಕಳೆದ ವರ್ಷ ಅರ್ಹತಾ ಸುತ್ತಿನ ಕೊನೆಯ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ 13-11ರಿಂದ ಸೋಲನ್ನು ಅನುಭವಿಸಿದ್ದರು. ಈ ವರ್ಷವೂ ಇದೇ ದುರಂತ, ಫೈನಲ್‌ ಕ್ವಾಲಿಫೈಯರ್‌ನಲ್ಲಿ 9-7ರ ಹಿನ್ನಡೆ. ಹಣದ ಸಂಕಷ್ಟ ನೀಗಲು ಮಹಿಳಾ ಡಬಲ್ಸ್‌, ಮಿಶ್ರ ಡಬಲ್ಸ್‌ ಸ್ಪರ್ಧೆ ಕೂಡ ಒಳ್ಳೆಯ ಫ‌ಲಿತಾಂಶ ಕೊಡದೆ ಒಟ್ಟಾರೆ ಟೂರ್ನಿಯಿಂದಲೇ ಹೊರಬೀಳುವಂತಾಗಿದೆ.

ಎಂತಹ ಪ್ರತಿಭೆಯೂ ಚಾಲೆಂಜರ್‌ ಟೂರ್ನಿಯಿಂದಲೇ ಕೆರಿಯರ್‌ ಆರಂಭಿಸಬೇಕು. ಹ್ಯಾರಿಟ್‌ ಡಾರ್ಟ್‌ ಹೇಳಿಬಿಡುತ್ತಾರೆ, ಚಾಲೆಂಜರ್‌ನಲ್ಲಿ ಬಹುಮಾನದ ಮೊತ್ತ ಕ್ಷುಲ್ಲಕ. ಟೆನಿಸ್‌ನಲ್ಲಿ ಹೋಂ ಪಿಚ್‌ ತರಹದ ಅನುಕೂಲಗಳೂ ಇಲ್ಲ. ಪ್ರತಿಭೆಗೆ ಹೊಳಪು ಕೊಡಲು ಒಂದು ಮಟ್ಟದ ಕೋಚ್‌ ಬೇಕೇ ಬೇಕು. ಈ ಹಿನ್ನೆಲೆಯಲ್ಲಿಯೇ ನಾವು ಅಂಕಿತಾ ಹಿಂದಿರುವ 413ನೇ ರ್‍ಯಾಂಕಿಂಗ್‌ನ ಕರ್ಮಾನ್‌ ಕೌರ್‌ ತಂಡಿ, 530ರ ರಿಯಾ ಬಾಟಿಯ, 578ರಲ್ಲಿನ ದೃತಿ ತಾತಾಚಾರ್‌ ವೇಣುಗೋಪಾಲ್‌, 712ರ ಜೀಲಾ ದೇಸಾಯಿ ಸಾನಿಯಾ ಮಿರ್ಜಾರ ಸಾಧನೆಯ ಮೆಟ್ಟಿಲುಗಳನ್ನು ಹತ್ತಲು ಇರುವ ದೂರವನ್ನು ಅಂದಾಜಿಸಬೇಕು. 

ಪುರುಷರ ವಿಭಾಗದಲ್ಲೂ ಯೂಕಿ ಬಾಂಬ್ರಿ(222), ಪ್ರಜ್ಞೆàಶ್‌ ಗುಣೇಶ್ವರನ್‌(259), ಶ್ರೀರಾಮ್‌ ಬಾಲಾಜಿ(291), ಸುಮಿತ್‌ ನಗಾಲ್‌(342) ಮುಂದೆ ಅಕ್ಷರಶಃ ಮೌಂಟ್‌ ಎವರೆಸ್ಟ್‌ ಇದೆ ಎಂಬುದು ಸಂಶಯಾತೀತ. ಗ್ರ್ಯಾನ್‌ಸ್ಲಾಮ್‌ಗಳ ಅರ್ಹತಾ ಸುತ್ತಿನಲ್ಲಿ ಆಡುತ್ತಿರುವಾಗ ಭಾರತೀಯರ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸುವಾಗ ಈ ಅಂಶಗಳು ತಿಳಿದಿದ್ದರೆ ಕ್ಷೇಮ. ಏನಂತೀರಾ?

ಹ್ಯಾರಿಟ್‌ ಡಾರ್ಟ್‌ ಕ್ಯಾರಿಯರ್‌ ಕಥೆ

ಇದೇ ಬ್ರಿಟನ್‌ನ 279ನೇ ಶ್ರೇಯಾಂಕದ 20ರ ಹರೆಯದ ಹ್ಯಾರಿಟ್‌ ಡಾರ್ಟ್‌ರ ಕ್ಯಾರಿಯರ್‌ ಕಥೆ ವೃತ್ತಿಪರ ಟೆನಿಸ್‌ನ ಹೋರಾಟಗಳನ್ನು ಬಹಿರಂಗಪಡಿಸುತ್ತದೆ. ತೀರಾ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಡಾರ್ಟ್‌ ಒಂದೊಂದು ಡಾಲರ್‌ಗೂ ಪರದಾಡಿ ಕ್ಯಾರಿಯರ್‌ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿರುವವರು. ಸೌಂದರ್ಯದ ಮಾನದಂಡದಲ್ಲಿ ಅವರಿಗೆ ಗ್ಲಾಮರ್‌ ಅಂಕಗಳು ಸಿಗುತ್ತವೆ. ಅದನ್ನು ಊರ್ಜಿತಗೊಳಿಸಲಾದರೂ ಸರ್ಕ್ನೂಟ್‌ನಲ್ಲಿ ಫ‌ಲಿತಾಂಶಗಳನ್ನು ಕಂಡುಕೊಳ್ಳಬೇಕು.

 ಹೈ ಫೈ ಜೀವನದ ಗಂಧಗಾಳಿಗಳಿಲ್ಲದೆ ತಮ್ಮ ಮನೆಯಲ್ಲಿ ವಾಸಿಸುತ್ತಿರುವ ಡಾರ್ಟ್‌ ಬೆಳಿಗ್ಗೆ 8ರಿಂದ ಸಂಜೆ ಐದೂವರೆಯತನಕ ಅಭ್ಯಾಸ ನಡೆಸುತ್ತಾರೆ. ನವೆಂಬರ್‌, ಡಿಸೆಂಬರ್‌ ಬಿಟ್ಟರೆ ಉಳಿದೆಲ್ಲ ಸಮಯ ಇದೇ ದಿನಚರಿ. ರಾತ್ರಿ ಒಂಬತ್ತೂವರೆಗೆ ಹಾಸಿಗೆ, ಬೆಳಿಗ್ಗೆ ಆರೂವರೆಗೆ ಎದ್ದು ಪ್ರಾಕ್ಟೀಸ್‌ಗೆ ರೈಲ್‌ ಏರುವುದು. ಇಂಗ್ಲೆಂಡ್‌ನ‌ಂತ ದೇಶದಲ್ಲಿ ದೇಹದ ಬಿಸಿ ವೃದ್ಧಿಸಿಕೊಳ್ಳಲಾದರೂ ಆಲ್ಕೋಹಾಲ್‌ ಬೇಕು. ಡಾರ್ಟ್‌ 2017ರಲ್ಲಿ ಒಂದು ದಿನ ಸ್ನೇಹಿತನ ಹುಟ್ಟುಹಬ್ಬದ ದಿನ ಒಂದು ಗ್ಲಾಸ್‌ ವೈನ್‌ ಕುಡಿದಿದ್ದು ಬಿಟ್ಟರೆ ಆಲ್ಕೋಹಾಲ್‌ ವಜ್ಯì. 

 ಟೆನಿಸ್‌ನ ಉನ್ನತಿಗೆ ಕೋಚ್‌ ಅತ್ಯಗತ್ಯ. ಡಾರ್ಟ್‌ಗೆ ಆ ಸಾಮರ್ಥ್ಯ ಇಲ್ಲ, ಹಾಗಾಗಿ ಪೂರ್ಣಾವಧಿ ಕೋಚ್‌ ಪಡೆದಿಲ್ಲ. ಕ್ಯಾರಿಯರ್‌ನಲ್ಲಿ ಈವರೆಗೆ 77,200 ಡಾಲರ್‌ ಬಹುಮಾನದ ಮೊತ್ತ ಪಡೆದಿರುವ ಈಕೆ ಸದ್ಯ ಅಲ್ಲಿನ ಜೂನಿಯರ್‌ ಟೆನಿಸ್‌ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಾರೆ. ಅಲ್ಲಿನ ಕೋಚ್‌ ಅಲಾನ್‌ ಜೋನ್ಸ್‌ರಿಗೆ ತಿಂಗಳಿಗಿಷ್ಟು ಎಂದು ಕೊಟ್ಟು ಸಲಹೆ ಸೂಚನೆ ಪಡೆಯುತ್ತಾರೆ. 
 ಕ್ಯಾರಿಯರ್‌ನಲ್ಲಿ 77 ಸಾವಿರ ಡಾಲರ್‌ ಎಂದರೆ ನಾವು ಗುಣಾಕಾರ ಮಾಡಿ 49,65,15,660 ರೂ. ಎಂದು ಬಾಯಿ ಬಿಡಬಹುದು. 49.65 ಕೋಟಿ ರೂ. ಕಡಿಮೆ ಮೊತ್ತವೇ? ಡಾರ್ಟ್‌ ಈಗಲೂ ಎಕಾನಮಿ ಕ್ಲಾಸ್‌ ವಿಮಾನ ಹತ್ತುತ್ತಾರೆ. ಪಂಚತಾರಾ ಹೋಟೆಲ್‌ ಬದಲು ಟೂರ್ನಿಗಳನ್ನು ನಡೆಸುವ ಕ್ಲಬ್‌ಹೌಸ್‌ಗಳ ಹೋಂ ಸ್ಟೇಯಲ್ಲಿ ಕಳೆಯುತ್ತಾರೆ. ಟೆನಿಸ್‌ ಕೋರ್ಟ್‌ನಲ್ಲಿ ಒಂದೆಡೆ ರ್ಯಾಕೆಟ್‌ ಬೀಸುತ್ತಿರುವಾಗ ಸೋಲಿನ ವಿಚಾರ ಸುಳಿದರೆ ಮುಂದಿನ ಟೂರ್ನಿಯಾಗಿ ಎಲ್ಲಿ ಆಡುವುದು ಮತ್ತು ಅಲ್ಲಿಗೆ ತೆರಳಲು ಹಿಡಿಯಬೇಕಾದ ವಿಮಾನದ‌ ವೆಚ್ಚ ಅಡ್ಡಹಾಯುತ್ತಿರುತ್ತದೆ!

ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next