ನವದೆಹಲಿ: ದಾರಿ ಮಧ್ಯದಲ್ಲಿ ಕಂತೆಗಟ್ಟಲೆ ನೋಟುಗಳು ಬಿದ್ದಿದ್ದರೆ ಏನಾಗಬಹುದು? ಕೆಲವರು ಸಿಕ್ಕಿದ್ದೆ ಚಾನ್ಸ್ ಎಂದುಕೊಂಡು ನೋಟುಗಳನ್ನು ಬಾಚಿಕೊಳ್ಳಬಹುದು. ಇಂಥದ್ದೇ ಒಂದು ಘಟನೆ ಚಿಲಿ ದೇಶದಲ್ಲಿ ನಡೆದಿದೆ.
ಚಿಲಿಯ ಪುಡಾಹುಯೆಲ್‌ನಲ್ಲಿರುವ ಕ್ಯಾಸಿನೊವೊಂದಕ್ಕೆ ಸಂಜೆ 7:45 ರ ಹೊತ್ತಿಗೆ ಅಪರಿಚಿತರು ನುಗ್ಗಿ, ಬಂದೂಕು ತೋರಿಸಿ ಜೂಜಿನ ಹಣವನ್ನು ಕಿತ್ತುಕೊಳ್ಳಲು ಯತ್ನಿಸಿದ್ದಾರೆ. ದರೋಡೆಕೋರರ ತಂಡ ಅಲ್ಲಿದ್ದ ಸಿಬ್ಬಂದಿಗಳನ್ನು ಹೆದರಿಸಿ ಜನರ ಮುಂದೆಯೇ ಹಣವನ್ನು ಕಿತ್ತುಕೊಂಡು ಓಡಿದ್ದಾರೆ ಎಂದು ವರದಿ ತಿಳಿಸಿದೆ.
ಕಳ್ಳತನವಾಗುತ್ತಿದ್ದಂತೆ ಮಾಹಿತಿ ಪಡೆದ ಪೊಲೀಸರು ಕಳ್ಳರ ಕಾರನ್ನು ಬೆನ್ನಟ್ಟಿದ್ದಾರೆ. ಹಣದ ಬ್ಯಾಗ್ ಹಿಡಿದುಕೊಂಡು ವೇಗವಾಗಿ ಕಾರಿನಲ್ಲಿ ಹೋದ ದರೋಡೆಕೋರರು ಪೊಲೀಸರ ಗಮನ ಬೇರೆಡೆ ಸೆಳೆಯಲು ಹಣದ ಬ್ಯಾಗನ್ನು ವಾಹನದಿಂದ ಹೊರ ಎಸೆಯಲು ಯತ್ನಿಸಿದ್ದಾರೆ. ಹಣದ ಬ್ಯಾಗ್ ಹೊರ ಎಸೆಯುವ ಭರದಲ್ಲಿ ಹಣ ರಸ್ತೆ ಮಧ್ಯಯೇ ಬಿದ್ದಿದೆ. ಕಂತೆ – ಕಂತೆ ಹಣದ ರಾಶಿ ನೋಡಿ ಜನರು ಬೆಚ್ಚಿ ಬಿದ್ದಿದ್ದಾರೆ.
ಇದನ್ನೂ ಓದಿ: ಆ್ಯಪಲ್ ವಾಚ್ ನಿಂದ 12 ವರ್ಷದ ಬಾಲಕಿಗೆ ಕ್ಯಾನ್ಸರ್ ಇದೆಯೆಂದು ತಿಳಿಯಿತು..!
ಘಟನೆ ಸಂಬಂಧ ಪೊಲೀಸರು ಆರು ಜನರನ್ನು ಬಂಧಿಸಿದ್ದಾರೆ. ಎಲ್ಲರೂ ವಿದೇಶಿ ಪ್ರಜೆಗಳಾಗಿದ್ದು, ಇದರಲ್ಲಿ ಇಬ್ಬರು ಕಾನೂನುಬಾಹಿರವಾಗಿ ದೇಶದಲ್ಲಿ ನೆಲೆಸಿದ್ದರು ಎಂದು ವರದಿ ತಿಳಿಸಿದೆ.
ಕ್ಯಾಸಿನೋ ಹಾಗೂ ದಾರಿಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಪೊಲೀಸರು ಸಾಧ್ಯವಾದಷ್ಟು ಹಣವನ್ನು ವಶಪಡಿಸಿಕೊಂಡಿದ್ದಾರೆ. ಕೆಲ ಅದೃಷ್ಟವಂತರಿಗೆ ಹಣ ಸಿಕ್ಕಿದೆ ಎಂದು ವರದಿ ತಿಳಿಸಿದೆ.