ಮಹದೇವಪುರ: ಮಂಡೂರು ಸಮೀಪ ಸ್ಥಗಿತಗೊಂಡಿದ್ದ ತ್ಯಾಜ್ಯ ವಿಲೇವಾರಿ ಘಟಕ ಪ್ರದೇಶಕ್ಕೆ ಭರವಸೆಗಳ ಸಮಿತಿ ಅಧ್ಯಕ್ಷ ಹಾಗೂ ಸದಸ್ಯರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಭರವಸೆಗಳ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ಮಾತನಾಡಿ, ಮಂಡೂರು ಸಮೀಪ ತ್ಯಾಜ್ಯವಿಲೇವಾರಿ ಘಟಕ ಸ್ಥಗಿತಗೊಳ್ಳಲು ಕಾರಣವೇನು? ಅದರಲ್ಲಿ ಆರಂಭವಾಗಬೇಕಿದ್ದ ಗಾಯತ್ರಿ ಶ್ರೀನಿವಾಸ್ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗದಿರಲು ಕಾರಣ ಏನೆಂಬುದರ ಬಗ್ಗೆ ಪರಿಶೀಲಿಸಲಾಗಿದೆ ಎಂದರು.
ವರದಿ ಕೊಡುವುದಷ್ಟೇ ನಮ್ಮ ಕೆಲಸ: ತ್ಯಾಜ್ಯವಿಲೇವಾರಿ ಘಟಕದಲ್ಲಿ ವಿದ್ಯುತ್ ಉತ್ಪಾದಿಸಲು ಸರ್ಕಾರ ನೀಡಿದ ನೂರಾರು ಕೋಟಿ ರೂ. ಸಂಪೂರ್ಣ ಪೋಲಾಗಿರುವುದು ಕಂಡು ಬಂದಿದೆ. ಯಾರಿಂದ ತಪ್ಪು ನಡೆದಿದೆ ಎಂಬ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಲಿದ್ದೇವೆ.
ಹಲವು ವದಂತಿಗಳನ್ನು ನಂಬಿ ಮಂಡೂರು ಮತ್ತು ಸುತ್ತಲ ಗ್ರಾಮಸ್ಥರು ಡಂಪಿಂಗ್ ಯಾರ್ಡ್‌ಗೆ ಜಮಾಯಿಸಿ ಕಸ ಹಾಕಲು ಮಂಡೂರಿಗೆ ಭೇಟಿ ನೀಡಿರುವಂತೆ ಬಿಂಬಿಸಲಾಗುತ್ತಿದೆ. ಸಮಿತಿ ಕೇವಲ ವರದಿಯನ್ನಷ್ಟೇ ಸರ್ಕಾರಕ್ಕೆ ಒಪ್ಪಿಸುವುದು ನಮ್ಮ ಕೆಲಸ, ಕಸ ಹಾಕವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ತಿಳಿಸಿದರು.
ಪರಿಶೀಲನೆ: ವಿಧಾನ ಸಭೆಯಲ್ಲಿ ಮಂಡೂರು ತ್ಯಾಜ್ಯ ಸ್ಥಗಿತಗೊಳ್ಳಲು ಕಾರಣ, ಗಾಯಿತ್ರಿ ಶ್ರೀನಿವಾಸ್ ಸಂಸ್ಥೆಗೆ ನೀಡಿದ ಹಣ ಏನಾಯ್ತು ಎಂಬ ಚರ್ಚೆ ಎದ್ದಿದ್ದು, ಭರವಸೆಗಳ ಸಮಿತಿ ಸದಸ್ಯರು ಈ ಕುರಿತು ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಿದ್ದು ಅದರಂತೆ ಸ್ಥಳಕ್ಕೆ ಭೇಟಿ ನೀಡಿ ಘಟಕವನ್ನು ಮತ್ತು ಕಸ ಸುರಿದಿದ್ದ ಪ್ರದೇಶವನ್ನು ಪರಿಶೀಲಿಸಲಾಗಿದೆ ಎಂದು ಹೇಳಿದರು.
ಸಮಿತಿ ಸದಸ್ಯ ಟಿ.ಶರವಣ ಮಾತನಾಡಿ, ಮಂಡೂರಿಗೆ ಸಮಿತಿ ಭೇಟಿ ಹಿನ್ನೆಲೆ ಹಲವು ಗುಮಾನಿಗಳೆದ್ದಿವೆ. ಕಸ ಹಾಕಿಸಲು ನೀಡಿದ ಭೇಟಿ ಇದಲ್ಲ, ಇಲ್ಲಿ ಕಸ ಹಾಕೋ ಪ್ರಶ್ನೆಯೇ ಇಲ್ಲ, ಸ್ಥಳೀಯ ನಾಗರಿಕರ ಹಿತ ಕಾಯುವುದು ನಮ್ಮ ಕರ್ತವ್ಯ, ಒಂದೊಮ್ಮೆ ಕಸ ಹಾಕಿದರೆ ನಾನು ಸಹ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದರು.