ಮಂಗಳೂರು: ಆನ್‌ಲೈನ್‌ನಲ್ಲಿ ಹಣ ದ್ವಿಗುಣ ಮಾಡುವ ಆಮಿಷಕ್ಕೆ ಒಳಗಾಗಿ ವ್ಯಕ್ತಿಯೋರ್ವರು 8.78 ಲ.ರೂ. ಕಳೆದುಕೊಂಡ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಅಪರಿಚಿತ ವ್ಯಕ್ತಿ +447468726354 ಸಂಖ್ಯೆಯಿಂದ ದೂರುದಾರ ವ್ಯಕ್ತಿಯ ವಾಟ್ಸಪ್‌ಗೆ ಪಾರ್ಟ್ ಟೈಂ ಉದ್ಯೋಗದ ಬಗ್ಗೆ ಮಾ.13ರಂದು ಸಂದೇಶ ಕಳುಹಿಸಿದ್ದ. ಅನಂತರ ಟಾಸ್ಕ್ ನೀಡಿ 100 ರೂ. ಪಾವತಿಸಲು ತಿಳಿಸಿದ್ದ. ಅದರಂತೆ ದೂರುದಾರ ವ್ಯಕ್ತಿ ಪೋನ್ ಪೇ ಮೂಲಕ ಪಾವತಿಸಿದ್ದಾರೆ. ಬಳಿಕ ಅಪರಿಚಿತ ವ್ಯಕ್ತಿ ಟೆಲಿಗ್ರಾಂ ಆ್ಯಪ್‌ನ ಲಿಂಕ್ ಕಳುಹಿಸಿ ಅದರಲ್ಲಿ ಹಣವನ್ನು ಆನ್‌ಲೈನ್ ಮೂಲಕ ದ್ವಿಗುಣ ಮಾಡಲು 8 ಟಾಸ್ಕ್ ಮಾಡುವಂತೆ ತಿಳಿಸಿದ. ವಿವಿಧ ಬ್ಯಾಂಕ್‌ಗಳಿಗೆ ಹಂತ ಹಂತವಾಗಿ 4,25,068 ರೂ. ವರ್ಗಾಯಿಸಿಕೊಂಡಿದ್ದ.
ಬಳಿಕ ಅಪರಿಚಿತ ವ್ಯಕ್ತಿ ಬಜಾಜ್‌ಲೋನ್‌ನ ಆಫರ್ ನೀಡಿ ಪ್ರೋಸೆಸ್ ಚಾರ್ಜಸ್, ಟಿಡಿಎಸ್, ಜಿಎಸ್‌ಟಿ, ಬ್ಯಾಂಕ್ ಸೆಕ್ಯುರಿಟಿ ಡಿಪಾಸಿಟ್ ಎಂಬುದಾಗಿ ನಂಬಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಮತ್ತೆ 4,53,638 ರೂ. ಸೇರಿದಂತೆ ಒಟ್ಟು 8,78,706 ರೂ.ಗಳನ್ನು ಮಾ.13ರಿಂದ ಎ.3ರ ಅವಧಿಯಲ್ಲಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ.