ಅವನು ಸರ್ಕಾರಿ ನೌಕರನಾಗಿರಬಹುದು, ಇಲ್ಲವೇ ಫ್ಯಾಕ್ಟರಿ ಕಾರ್ಮಿಕನಾಗಿರಬಹುದು. ಅಷ್ಟೇ ಯಾಕೆ? ತರಕಾರಿ ಮಾರಾಟಗಾರ, ಪೆಟ್ಟಿಗೆ ಅಂಗಡಿಯ ಮಾಲೀಕ, ಹೋಟೆಲ್ ಉದ್ಯಮಿ ಅಥವಾ ಕೃಷಿಕ- ಈ ಯಾರೇ ಆಗಿರಬಹುದು. ಎಲ್ಲರಿಗೂ ಇರುವ ಬಹು ದೊಡ್ಡ ಆಸೆಯೆಂದರೆ, ಒಂದಷ್ಟು ಕಾಸು ಮಾಡಬೇಕು ಎನ್ನುವುದು. ಕಾಸಿದ್ದ ಕಡೆಯಲ್ಲಿ ಖುಷಿ ಇರುವುದಿಲ್ಲ ಎಂಬ ಮಾತೂ ಇದೆ.
ಆದರೆ ಅದನ್ನು ಒಪ್ಪಲು ಯಾರೂ ಸಿದ್ಧರಿಲ್ಲ. ಕಾಸು ಇದ್ದರೆ ಮಾತ್ರ ಸುತ್ತಲಿನ ಸಮಾಜದಲ್ಲಿ ಪರಿಚಿತರು- ಬಂಧುಗಳ ಗುಂಪಿನಲ್ಲಿ ಮರ್ಯಾದೆ ಸಿಗುತ್ತದೆ ಎಂದು ಪದೇ ಪದೆ ಸಾಬೀತಾಗಿರುವುದರಿಂದ ಹಣವಂತರಾಗಲು ಎಲ್ಲರೂ ಆಸೆ ಪಡುವವರೇ.ಒಂದು ಬಾರಿ ಶ್ರೀಮಂತ ಎಂದು ಕರೆಸಿಕೊಂಡರೆ ಆ ಕ್ಷಣದಿಂದಲೇ ಸೋಷಿಯಲ್ ಸ್ಟೇಟಸ್ ಬದಲಾಗುತ್ತದೆ. ಶ್ರೀಮಂತ ಎಂದು ಬ್ರ್ಯಾಂಡ್ ಆದಮೇಲೆ ನೀವು ಬೈಕಿನಲ್ಲೋ, ಸಿಟಿ ಬಸ್ಸಿನಲ್ಲೋ ಓಡಾಡಲು ಆಗುವುದಿಲ್ಲ. ಕಾರಿನಲ್ಲೇ ಓಡಾಡಬೇಕು. ಕಾರು ಅಂದ ತಕ್ಷಣ ಒಂದು ಸಂಗತಿ ನೆನಪಾಯ್ತು.
‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಎಂಬುದು ಹಳೆಯ ಮಾತು. ‘ಹಾಸಿಗೆ ಇದೆಯಲ್ಲ, ಅದಕ್ಕಿಂತ ಕಡಿಮೆ ಕಾಲು ಚಾಚು’ ಎಂಬುದು ಈಗಿನ ಮಾತು. ಅಂದರೆ ನಮಗೆ ಫಾರ್ಚೂನರ್ ಕಾರು ಖರೀದಿಸುವ ಸಾಮರ್ಥ್ಯ ಇದ್ದರೂ ಅದಕ್ಕಿಂತ ಐದಾರು ಲಕ್ಷ ಕಡಿಮೆ ಬೆಲೆಯ ಕಾರು ಖರೀದಿಸುವುದು ಸೂಕ್ತ. ಏಕೆಂದರೆ ನಾಳಿನ ಪರಿಸ್ಥಿತಿ, ಸವಾಲುಗಳನ್ನು ಬಲ್ಲವರಾರು? ದಿಢೀರನೆ ಪೆಟ್ರೋಲ್ ಬೆಲೆ, ದಿನಸಿ, ಮೆಡಿಕಲ್ ಬಿಲ್ಲುಗಳೆಲ್ಲಾ ಒಮ್ಮೆಲೇ ಏರಿದರೆ? ನಮ್ಮೆಲ್ಲಾ ಉಳಿತಾಯ ಒಂದೇ ಸಲ ಅವಕ್ಕೆ ಖರ್ಚಾಗಿ ಬಿಟ್ಟರೆ? ಹೀಗಾಗಿ ಯಾವುದೇ ವಸ್ತು ಖರೀದಿಸುವ ಮುನ್ನ ಹಲವು ಲೆಕ್ಕಾಚಾರಗಳನ್ನು ಮಾಡಬೇಕಾಗುತ್ತದೆ.
ಈಗ ಮತ್ತೆ ಮೊದಲಿನ ಮಾತಿಗೆ ಹೋಗುವುದಾದರೆ, ಕಾರ್ಮಿಕ, ಪೆಟ್ಟಿಗೆ ಅಂಗಡಿ ಮಾಲೀಕ, ಹೋಟೆಲ್ ಉದ್ಯಮಿ, ತರಕಾರಿ ಮಾರಾಟಗಾರ- ಇವರೆಲ್ಲರೂ ಒಂದಷ್ಟು ಹೆಚ್ಚುವರಿ ಲಾಭ ಮಾಡಲು ಯೋಚಿಸುತ್ತಾರಲ್ಲ, ಅಂಥವರು ತಮಗೆ ಪರಿಚಿತವಾಗಿರುವ ಕ್ಷೇತ್ರದಲ್ಲಿ ಸಣ್ಣದೊಂದು ಬಂಡವಾಳ ಹೂಡಿ ರಿಸ್ಕ್ ತೆಗೆದುಕೊಂಡಾಗ ಮಾತ್ರ ಗೆಲ್ಲಲು ಸಾಧ್ಯ. ಒಬ್ಬ ಜಮೀನ್ದಾರ, ತಾನು ಕೃಷಿಯಲ್ಲಿ ಗೆದ್ದಿದ್ದೇನೆ ಎಂದು ಹೋಟೆಲ್ ಉದ್ಯಮದಲ್ಲೂ ಗೆಲ್ಲಲು ಸಾಧ್ಯವಿಲ್ಲ. ಅದು ಕಷ್ಟಕರ.
ಹೋಟೆಲ್ ಉದ್ಯಮದಲ್ಲಿ ಈಗಾಗಲೇ ಯಶಸ್ಸು ಕಂಡಿರುವ ಜನರ ಮಾರ್ಗದರ್ಶನ ಇದ್ದರೆ ಮಾತ್ರಗೆಲುವು ಸಾಧ್ಯ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಕಿಂಗ್ ಎನ್ನಿಸಿಕೊಂಡವ ಚಿತ್ರರಂಗಕ್ಕೆ ಬಂದು ಹಣ ಕಳೆದುಕೊಳ್ಳುವುದು, ಅಕೌಂಟೆಂಟ್ ಅನಿಸಿಕೊಂಡ ನೌಕರ ಬೇಕರಿ ಶುರು ಮಾಡಿ ಕೈಸುಟ್ಟುಕೊಳ್ಳುವುದು ಇವೆಲ್ಲಾ ನಿರ್ಲಕ್ಷ್ಯದಿಂದ ಆಗುವ ಅನಾಹುತ. ಹೀಗಾಗಿ ಹಾಸಿಗೆ ಇದ್ದಷ್ಟು ಅಲ್ಲ, ಇರುವುದಕ್ಕಿಂತ ಕಡಿಮೆ ಕಾಲು ಚಾಚಿದರೆ ಮಾತ್ರ ನೆಮ್ಮದಿ ಕಾಣಬಹುದು.