ಚಿಕ್ಕಬಳ್ಳಾಪುರ: ಹಣ ಹೂಡಿಕೆ ಮಾಡಿದರೆ ಅದರ ಮೇಲೆ ಹೆಚ್ಚು ಪ್ರತಿಶತ ಲಾಭ ಕೊಡುವುದಾಗಿ ಹೇಳಿ ನಂಬಿಸಿ ಚಿಕ್ಕಬಳ್ಳಾಪುರ ವ್ಯಕ್ತಿಗೆ ಅನ್‌ಲೈನ್ ಕಳ್ಳರು ಬರೋಬ್ಬರಿ 22.88 ಲಕ್ಷ ರೂ. ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಹಿಸಿಕೊಂಡು ವಂಚನೆ ಮಾಡಿರುವ ಘಟನೆ ನಡೆದಿದೆ.
ಸದ್ಯ 22.88 ಲಕ್ಷ ರೂ. ಹಣ ಕಳೆದುಕೊಂಡಿರುವ ಜಿಲ್ಲೆಯ ಚಿಕ್ಕಬಳ್ಳಾಪುರ ತಾಲೂಕಿನ ಹುನೇಗಲ್ಲು ಗ್ರಾಮದ ನಿವಾಸಿ ಶಿವರಾಜ್ ಕುಮಾರ್ ಬಿನ್ ಲೇಟ್ ವೆಂಕಟಪ್ಪ (33) ಎಂಬುವರು ಸದ್ಯ ಲಕ್ಷಾಂತರ ರೂ.ಹಣ ಕಳೆದು ಕೊಂಡಿರುವ ಬಗ್ಗೆ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿ ವಂಚನೆ ಮಾಡಿದ ವ್ಯಕ್ತಿಹಣ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ.
ಆಗಿದ್ದೇನು: ಶಿವರಾಜ್ ಕುಮಾರ್ ಇಂಡಿಯನ್ ಬ್ಯಾಂಕ್ ಖಾತೆ ಹೊಂದಿದ್ದು ತನ್ನ ಮೊಬೈಲ್ ನಂಬರ್‌ನ್ನು ಖಾತೆಗೆ ಲಿಂಕ್ ಮಾಡಿಕೊಂಡು ಯುಪಿಐ ಮೂಲಕ ತನ್ನ ದೈನಂದಿನ ಹಣಕಾಸಿನ ವ್ಯವಹಾರಗಳನ್ನು ಮಾಡುತ್ತಿದ್ದರು. ಡಿ.11 ರಂದು ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿ ಅಮೇಜಿಂಗ್ ಟಾಸ್ಕ್ ಎಂಬ ಕಾನ್ಸೆಪ್ಟ್ ನಲ್ಲಿ ನಿಮ್ಮ ಮೊತ್ತದ ಮೇಲೆ 30% ಪ್ರತಿಶತ ಪ್ರಾಫಿಟ್ ನೀಡುವುದಾಗಿ ಹೇಳಿ ಹಣ ಹೂಡಿಕೆ ಮಾಡುವಂತೆ ಹೇಳಿದ್ದಾನೆ. ಶಿವರಾಜ್ ಕುಮಾರ್ ಹೂಡಿಕೆ ಮೇಲೆ ಹೆಚ್ಚು ಲಾಭ ಸಿಗುತ್ತದೆಯೆಂಬ ಹೇಳಿ ಆರಂಭದಲ್ಲಿ 1,000, 2000, 3,000 ಹಣ ಹೂಡಿಕೆ ಮಾಡಿ ಅದರಿಂದ ಅಪರಿಚಿತ ವ್ಯಕ್ತಿ ಹೇಳಿದಂತೆ ಹೆಚ್ಚಿನ ಪ್ರಮಾಣದಲ್ಲಿ ಲಾಭ ಗಳಿಸಿದ್ದಾರೆ.
ಇದೇ ರೀತಿ ಶಿವರಾಜ್ ಕುಮಾರ್‌ನನ್ನು ವಂಚಿಸಿದ ಆನ್‌ಲೈನ್ ಕಳ್ಳರು ಹೆಚ್ಚು ಲಾಭದ ಆಸೆ ತೋರಿಸಿ ಅವರಿಂದ ಲಕ್ಷಾಂತರ ರೂ.ಹಣ ಹೂಡಿಕೆ ಮಾಡಿ ಬಳಿಕ ಲಾಭ ಹಾಗೂ ಅಸಲು ಹಣ ಕೊಡದೇ ಒಟ್ಟು 22.88 ಲಕ್ಷ ರೂ.ಹಣವನ್ನು ಸೈಬರ್ ಕಳ್ಳರು ವಂಚಿಸಿರುವುದಾಗಿ ಆತನ ಸೈಬರ್ ಠಾಣೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಟೆಲಿಗ್ರಾಂ ಗ್ರೂಪ್‌ನಲ್ಲಿ ದಂಧೆ: ಟೆಲಿಗ್ರಾಂ ಗ್ರೂಪ್‌ನಲ್ಲಿ ಈ ದಂಧೆ ನಡೆಸಿದ್ದು ಗ್ರಾಹಕರೊಬ್ಬರಿಗೆ ಹೆಚ್ಚು ಹಣ ಬಂದ ತನ್ನ ಬ್ಯಾಂಕ್ ಖಾತೆಗೆ ವರ್ಗಾವಣೆಗೊಂಡ ಹಣದ ಸಂದೇಶವನ್ನು ಸೈಬರ್ ಕಳ್ಳರೇ ಸೃಷ್ಟಿಸಿ ಅದರ ಸ್ಕ್ರೀನ್ ಶಾಟ್‌ನ್ನು ಗ್ರಾಹಕರು ಇರುವ ಟೆಲಿಗ್ರಾಂ ಗ್ರೂಪ್‌ನಲ್ಲಿ ಹಂಚಿಕೊಂಡು ಇತರೇ ಗ್ರಾಹಕರಿಗೆ ನಂಬಿಕೆ ಬರುವಂತೆ ವರ್ತಿಸಿ ಆನ್‌ಲೈನ್ ಕಳ್ಳರು ಶಿವರಾಜ್ ಕುಮಾರ್‌ರಿಂದ 22.88 ಲಕ್ಷ ಹಣ ಪಡೆದು ವಂಚಿಸಿದ್ದಾರೆ.