Advertisement

ಮತದಾರರಿಗೆ ಹಣ, ಬೆಳ್ಳಿ ನಾಣ್ಯ ಹಂಚಿಕೆ

10:16 AM Jun 09, 2018 | Team Udayavani |

ವಾಡಿ: ಮತದಾನ ಮಾಡಲು ಮತಗಟ್ಟೆಯತ್ತ ಬರುತ್ತಿದ್ದ ಪದವೀಧರ ಮತದಾರರಿಗೆ ಬೆಳ್ಳಿ ನಾಣ್ಯ ಮತ್ತು ಹಣ ಹಂಚಿಕೆ ಮಾಡುತ್ತಿದ್ದ ಜೆಡಿಎಸ್‌ ಮುಖಂಡರೊಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

Advertisement

ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆ ನಿಮಿತ್ತ ಶುಕ್ರವಾರ ಪಟ್ಟಣದ ಸರ್ಕಾರಿ ಕನ್ಯಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆ ಸಂಖ್ಯೆ 67ರಲ್ಲಿ ಮತದಾನ ನಡೆಯುತ್ತಿತ್ತು. ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು ಮತದಾನ ಕೇಂದ್ರ ಸುತ್ತ ಬೀಡು ಬಿಟ್ಟಿದ್ದರು. ಇದರ ಮಧ್ಯೆ ಬಾಸ್ಕರ್‌ ರೆಡ್ಡಿ ಎನ್ನುವ ಬಳ್ಳಾರಿ ಮೂಲದ ಜೆಡಿಎಸ್‌ ಮುಖಂಡರೊಬ್ಬರು ಮತಗಟ್ಟೆಗೆ ಬರುತ್ತಿದ್ದ ಪದವೀಧರ ಮತದಾರರಿಗೆ ಗೌಪ್ಯವಾಗಿ ಬೆಳ್ಳಿ ನಾಣ್ಯ ಮತ್ತು 500 ರೂ. ಹಂಚಿ ಜೆಡಿಎಸ್‌ ಅಭ್ಯರ್ಥಿ ಎನ್‌.ಪ್ರತಾಪರೆಡ್ಡಿ ಅವರಿಗೆ ಮತ ಹಾಕುವಂತೆ ಮನವಿ ಮಾಡುತ್ತಿದ್ದರು ಎನ್ನಲಾಗಿದೆ.

ಪರಿಚಿತ ವ್ಯಕ್ತಿಯ ಚಲನವಲನದ ಬಗ್ಗೆ ಸಂಶಯಗೊಂಡ ಮಾಜಿ ಶಾಸಕ ವಾಲ್ಮೀಕಿ ನಾಯಕ, ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ, ಪ್ರಧಾನ ಕಾರ್ಯದರ್ಶಿ ವೀರಣ್ಣ ಯಾರಿ, ರಾಜು ಮುಕ್ಕಣ್ಣ, ಕಿಶನ ಜಾಧವ, ಶ್ರವಣಕುಮಾರ ಮೌಸಲಗಿ, ಗಿರಿಮಲ್ಲಪ್ಪ ಕಟ್ಟಿಮನಿ, ರಾಜೇಶ ಅಗರವಾಲ, ಭೀಮಶಾ ಜಿರೊಳ್ಳಿ ಸೇರಿದಂತೆ ಇನ್ನಿತರ ಕಾರ್ಯಕರ್ತರು ಆತನನ್ನು ವಿಚಾರಣೆಗೆ ಒಳಪಡಿಸಿದರು. ಆತನಲ್ಲಿ ಜೆಡಿಎಸ್‌ ಕರಪತ್ರಗಳು, ಸಾಯಿಬಾಬಾ, ಓಂ ಎಂದು ಮುದ್ರಿಸಲಾದ ತಲಾ 10 ಗಾಂ ತೂಕದ ಒಟ್ಟು 48 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಹಣವಿದ್ದ ಇನ್ನೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಬಿಜೆಪಿ ಮುಖಂಡರು ತಕ್ಷಣ ಚುನಾವಣಾಧಿಕಾರಿ ಬಸಲಿಂಗಪ್ಪ ಡಿಗ್ಗಿ ಅವರಿಗೆ ದೂರು ನೀಡಿದರು. ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಬಸಲಿಂಗಪ್ಪ ಡಿಗ್ಗಿ ಮುಖಂಡನನ್ನು ಮತ್ತು ನಾಣ್ಯ, ಕರಪತ್ರಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದರು. ಬಿಜೆಪಿ ಅಧ್ಯಕ್ಷ ಬಸವರಾಜ ಪಂಚಾಳ ಹಾಗೂ ಎಸ್‌ಸಿ ಮೋರ್ಚಾ ತಾಲೂಕು ಅಧ್ಯಕ್ಷ ರಾಜು ಮುಕ್ಕಣ್ಣ ನೀಡಿದ ದೂರಿನ ಮೇರೆಗೆ ವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿ¨

ಜೆಡಿಎಸ್‌ ಮುಖಂಡನೊಬ್ಬ ಮತಗಟ್ಟೆ ಎದುರು ಬಹಿರಂಗವಾಗಿ ವಿದ್ಯಾವಂತ ಮತದಾರರಿಗೆ ಹಣ ಮತ್ತು ಬೆಳ್ಳಿ ನಾಣ್ಯ ಹಂಚಿಕೆ ಮಾಡುತ್ತಿದ್ದರೂ ಕಾಂಗ್ರೆಸ್‌ ಮುಖಂಡರು ಪ್ರಶ್ನೆ ಮಾಡದೆ ಮೌನವಾಗಿದ್ದಾರೆ. ಸರ್ಕಾರದಲ್ಲಿ ಪಾಲು ಪಡೆದಿರುವಂತೆ ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸುವಲ್ಲೂ ಕಾಂಗ್ರೆಸ್‌-ಜೆಡಿಎಸ್‌ ಪಾಲು ಪಡೆದುಕೊಂಡಿವೆ. ಬುದ್ಧಿವಂತ ಮತದಾರರಿಗೆ ಹಣ ಹಂಚಿಕೆ ಮಾಡಲು ಮುಂದಾಗಿರುವ ಜೆಡಿಎಸ್‌ ಪ್ರಜಾತಂತ್ರ ವ್ಯವಸ್ಥೆಯ ಮೌಲ್ಯವನ್ನೇ ಧಿಕ್ಕರಿಸಿ ನೀಚ ರಾಜಕಾರಣಕ್ಕಿಳಿದಿದೆ.
 ವಾಲ್ಮೀಕಿ ನಾಯಕ, ಮಾಜಿ ಶಾಸಕ 

Advertisement

Udayavani is now on Telegram. Click here to join our channel and stay updated with the latest news.

Next