Advertisement

ಎಟಿಎಂ ಕೇಂದ್ರಗಳ ಮೂಲಕ ಪಿಎಫ್ಐಗೆ ಹಣ!

01:09 AM Oct 12, 2022 | Team Udayavani |

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಿಷೇಧಕ್ಕೆ ಒಳಗಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಗೆ “ಎಟಿಎಂ ಕೇಂದ್ರ’ಗಳ ಮೂಲಕ ಹಣ ಜಮೆ ಆಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

Advertisement

ಜತೆಗೆ ಬಂಧನಕ್ಕೊಳಗಾಗಿರುವ ಐದು ಮಂದಿಗಳ ಖಾತೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆದಿರುವುದೂ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಘಟನೆಗೆ ಬರುತ್ತಿದ್ದ “ಹವಾಲಾ’ ಹಣದ ಬೇರಿನ ಮೂಲದ ಪತ್ತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ಕೈಹಾಕಿದೆ. ರಾಜ್ಯ ಪೊಲೀ ಸರು ಬಂಧಿಸಿದ್ದ 19 ಮಂದಿಯ ಬ್ಯಾಂಕ್‌ ಖಾತೆ ಹಾಗೂ ಸಂಘಟನೆಯ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ. ಎಟಿಎಂ ಕೇಂದ್ರದಿಂದ ಹಣ ಜಮೆ ಮಾಡಿದವರ ಮಾಹಿತಿ ತಿಳಿಯದು ಎಂದು ಈ ಮಾರ್ಗ ಅನುಸರಿಸಲಾಗಿತ್ತು ಎನ್ನಲಾಗಿದೆ.

ಬಂಧಿತರ ಪೈಕಿ ಬೆಂಗಳೂರಿನ ನಾಸೀರ್‌ ಪಾಷಾ, ದಕ್ಷಿಣ ಕನ್ನಡ ಜಿಲ್ಲೆಯ ಮಹಮ್ಮದ್‌ ಅಶ್ರಫ್, ಮೊಹಿನುದ್ದೀನ್‌, ಅಯೂಬ್‌ ಅಗ್ನಾಡಿ ಹಾಗೂ ತಲೆಮರೆಸಿ ಕೊಂಡಿರುವ ಆರೋಪಿ ಸೇರಿ ಐವರ ಬ್ಯಾಂಕ್‌ ಖಾತೆಯಲ್ಲಿ ಕೋಟ್ಯಂತರ ರೂ. ವ್ಯವಹಾರ ನಡೆದಿದೆ ಎನ್ನಲಾಗಿದ್ದು, ಹಣದ ಮೂಲ ಪತ್ತೆ ಹಚ್ಚಲಾಗುತ್ತಿದೆ.

ಸಂಘಟನೆಗಾಗಿಯೇ ಹಣ ಸಂಗ್ರಹಿಸಿದ್ದು, ದುರ್ಬಳಕೆ ಮಾಡಿಲ್ಲ. ಸಂಘಟನೆಯಿಂದ ಲಕ್ಷಾಂತರ ರೂ. ವೇತನ ಹೊರತು ಪಡಿಸಿ ಬೇರೆ ಯಾವುದೇ ಮೂಲದಿಂದ ನಾವು ಹಣ ಪಡೆಯುತ್ತಿಲ್ಲ ಎಂದು ಆರೋಪಿಗಳು ಹೇಳು ತ್ತಿದ್ದಾರೆ ಎನ್ನುತ್ತವೆ ಪೊಲೀಸ್‌ ಮೂಲಗಳು.

15 ಕೋಟಿ ರೂ.ಗೂ ಅಧಿಕ
ಆರಂಭದಿಂದ ಇದುವರೆಗೆ ಪಿಎಫ್ಐ ಸಂಘಟನೆಯ ರಾಜ್ಯದ ವಿವಿಧ ಖಾತೆ ಗಳಿಗೆ 15 ಕೋಟಿ ರೂ.ಗೂ ಅಧಿಕ ಹಣ ಜಮೆ ಯಾಗಿದೆ ಎನ್ನಲಾಗಿದೆ. ಆದರೆ ಯಾರೆಲ್ಲ ಹಣ ವರ್ಗಾಯಿಸಿದ್ದರು ಎಂಬ ಮಾಹಿತಿ ಸಿಗಬೇಕಿದೆ ಎಂದು ಮೂಲಗಳು ತಿಳಿಸಿವೆ.

Advertisement

ಎನ್‌ಐಎಗೆ ಪತ್ರ
ಬೆಂಗಳೂರು ಪೊಲೀಸರು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಗೆ ಪತ್ರ ಬರೆದಿದ್ದು, ಬಂಧನದಲ್ಲಿರುವ ಏಳು ಆರೋಪಿಗಳು ಹಾಗೂ ಅವರು ಸಂಘಟನೆ ಹೆಸರಿನಲ್ಲಿ ನಡೆಸುತ್ತಿದ್ದ ವ್ಯವಹಾರದ ಬಗ್ಗೆ ಕೆಲವು ಮಾಹಿತಿ ಕೋರಿದ್ದಾರೆ. ಈ ಮಾಹಿತಿ ಆಧರಿಸಿ ಮುಂದಿನ ತನಿಖೆ ನಡೆಯಲಿದೆ.

ಧಾರ್ಮಿಕ ಕೇಂದ್ರಗಳಿಂದಲೂ ಹಣ
ಪಿಎಫ್ಐ ಸಂಘಟನೆಗೆ ರಾಜ್ಯದ ಕೆಲವು ಧಾರ್ಮಿಕ ಕೇಂದ್ರ ಗಳೂ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ನೀಡುತ್ತಿದ್ದವು ಎನ್ನಲಾಗಿದೆ. ಜತೆಗೆ ಖುದ್ದು ಸಂಘಟನೆ ಕಾರ್ಯಕರ್ತರೇ ಅಧಿಕೃತವಾಗಿ ಸಾಮಾಜಿಕ ಕಾರ್ಯಕ್ರಮಗಳಿಗೆ ಧಾರ್ಮಿಕ ಕೇಂದ್ರಗಳಿಗೆ ಬರುವವರಿಂದ ದೇಣಿಗೆ ಸಂಗ್ರಹಿಸುತ್ತಿದ್ದರು. ಅದರ ಅಲ್ಪ ಹಣವನ್ನು ಸ್ಕಾಲರ್‌ಶಿಪ್‌ ಹಾಗೂ ಇತರ ಕಾರ್ಯಕ್ರಮಗಳಿಗೆ ಬಳಸಿ, ದೊಡ್ಡ ಮೊತ್ತದ ಹಣವನ್ನು ಅಕ್ರಮ ಚಟುವಟಿಕೆಗಳಿಗೆ ಬಳಸುತ್ತಿದ್ದರು ಎನ್ನಲಾಗಿದೆ.

ಹೀಗೆ ನಗದು ರೂಪದಲ್ಲಿ ಸಂಗ್ರಹವಾದ ಹಣವನ್ನು ಕಾರ್ಯಕರ್ತರು ಎಟಿಎಂ ಕೇಂದ್ರಗಳ ಮೂಲಕ ಸಂಘಟನೆ ಖಾತೆಗೆ ಜಮೆ ಮಾಡುತ್ತಿದ್ದರು. ಕೆಲವು ಬಾರಿ ಸಂಘಟನೆ ಮುಖಂಡರ ಖಾತೆಗೆ ಜಮೆ ಮಾಡಿರುವ ಮಾಹಿತಿಯೂ ಲಭ್ಯ ವಾಗಿದೆ. ಈ ರೀತಿ ಬೆಂಗಳೂರು ಅಲ್ಲದೇ ಹೊರ ರಾಜ್ಯಗಳ ಎಟಿಎಂಗಳಿಂದಲೂ ಹಣ ಬರುತ್ತಿತ್ತು. ಒಟ್ಟಾರೆ ಶೇ. 60ರಷ್ಟು ದೇಣಿಗೆ ರೂಪ ದಲ್ಲಿ ಸಂಗ್ರಹಿಸಿದ ಹಣ ಸಂಘಟನೆಗೆ ಸಿಗುತ್ತಿತ್ತು ಎಂದು ಮೂಲಗಳು ತಿಳಿಸಿವೆ.

- ಮೋಹನ್‌ ಭದ್ರಾವತಿ

 

Advertisement

Udayavani is now on Telegram. Click here to join our channel and stay updated with the latest news.

Next