Advertisement

ಹಣ ಸಂಪಾದನೆಗೆ ನಡೆಯಿತು ಅಪಹರಣ ಸ್ಕೆಚ್‌

11:47 AM Sep 23, 2017 | |

ಬೆಂಗಳೂರು: ಆದಾಯ ತೆರಿಗೆ ಅಧಿಕಾರಿ ಶರತ್‌ ಹತ್ಯೆ ರೂವಾರಿ ವಿಶಾಲ್‌ ಇನ್ನೂ ವಿದ್ಯಾರ್ಥಿ. ನಾಗರಬಾವಿಯಲ್ಲಿರುವ ರಾಜೀವ್‌ ಗಾಂಧಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಎಂಜಿನಿಯರ್‌ ವ್ಯಾಸಂಗ ಮಾಡುತ್ತಿದ್ದ. ಉಲ್ಲಾಳದ ಆರ್‌ಟಿಓ ಕಚೇರಿಯಲ್ಲಿ ಅರೆಕಾಲಿಕ ಉದ್ಯೋಗ ಮಾಡಿಕೊಂಡಿದ್ದ. 

Advertisement

ಇದೇ ವೇಳೆ ತನ್ನ ಸ್ನೇಹಿತ ವಿನಯ್‌ ಪ್ರಸಾದ್‌ ತ್ವರಿತವಾಗಿ ಹಣ ಮಾಡಬೇಕಿದ್ದು, ಕೊಲೆ ಮಾಡಿಯಾದರೂ ಹಣ ಸಂಪಾದನೆ ಮಾಡಬೇಕೆಂದು ವಿಶಾಲ್‌ ಬಳಿ ಹೇಳಿಕೊಂಡಿದ್ದ. ಆಗ ಆರ್‌ಟಿಓ ಕಚೇರಿ ಬಳಿ ಕರೆಸಿಕೊಂಡ ವಿಶಾಲ್‌ ಈ ಬಗ್ಗೆ ವಿವರಿಸಿದ್ದ. ಶರತ್‌ ಬಗ್ಗೆ ಹೇಳಿ, ಆತನ ತಂದೆ ಯಾವುದೇ ಕಾರಣಕ್ಕೂ ಪೊಲೀಸರಿಗೆ ದೂರು ನೀಡುವುದಿಲ್ಲ. ಅಪಹರಣ ಮಾಡಿದರೆ ಹಣ ಸಂಪಾದನೆ ಮಾಡಬಹುದು ಎಂದು ಸಲಹೆ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬ ಜತೆಯೇ ಇದ್ದ ಆರೋಪಿ: ಸಹಚರರ ಜತೆ ಸೇರಿ ಸಂಚು ರೂಪಿಸಿ ಶರತ್‌ ನನ್ನು ಕೊಲೆಗೈದಿದ್ದ ವಿಶಾಲ್‌, ಬಳಿಕ ಶರತ್‌ ಕುಟುಂಬ ಸದಸ್ಯರ ಜತೆಯೇ ಇದ್ದು ಗೌಪ್ಯತೆ ಕಾಪಾಡಿಕೊಂಡಿದ್ದ. ಶರತ್‌ ಪೋಷಕರ ಜತೆ 3-4 ಬಾರಿ ಪೊಲೀಸ್‌ ಠಾಣೆಗೂ ಹೋಗಿ ಪ್ರಕರಣದ ಹಂತವನ್ನು ತಿಳಿದುಕೊಳ್ಳುತ್ತಿದ್ದ. ಬಳಿಕ ಬೇರೆಡೆಯೂ ಹುಡುಕಾಟದಲ್ಲಿ ತೊಡಗಿಕೊಂಡಿದ್ದ.

ಅಷ್ಟೇ ಅಲ್ಲ, ಪೊಲೀಸರ ವಿಚಾರಣೆಯಲ್ಲೂ ಭಾಗಿಯಾಗಿದ್ದ. ಈ ವೇಳೆ ಶರತ್‌ ಕೊನೆಯ ಬಾರಿ ಶಿರ್ಕೆ ಅಪಾಟ್‌ ìಮೆಂಟ್‌ ಬಳಿ ಬರುತ್ತೇನೆ, ನೀನು ಬಾ ಎಂದು ವ್ಯಾಟ್ಸ್‌ಆ್ಯಪ್‌ ಸಂದೇಶ ಕಳುಹಿಸಿದ್ದ. ಆದರೆ, ಅಪಾರ್ಟ್‌ಮೆಂಟ್‌ ಹತ್ತಿರ ಹೋಗಿ ಕಾದರೂ ಬರಲಿಲ್ಲ. ಹೀಗಾಗಿ ನಾನು ವಾಪಸ್‌ ಬಂದೆ ಎಂದು ಸುಳ್ಳು ಹೇಳಿಕೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. 

ಗೊಂದಲದ ಹೇಳಿಕೆ ಮುಳುವಾಯ್ತು: ಆರಂಭದಲ್ಲಿ ವಿಶಾಲ್‌ ಹಾಗೂ ಆತನ ಸ್ನೇಹಿತರ ಮೇಲೆ ತನಿಖಾ ತಂಡಕ್ಕೆ ಸಂಶಯವಿರಲಿಲ್ಲ. ಕೃತ್ಯವನ್ನು ಭೇದಿಸಲು ರಚಿಸಲಾಗಿದ್ದ ಸಿಸಿಬಿಯ ಐದು ವಿಶೇಷ ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದರು. ಅದರಂತೆ ಜ್ಞಾನಭಾರತಿ ಸುತ್ತಮುತ್ತ ಹೆಚ್ಚಿರುವ ಸರಗಳ್ಳರು, ಅಪಹರಣಕಾರರು, ಕೊಲೆಗಡುಕರನ್ನು ವಿಚಾರಣೆ ನಡೆಸಿದ್ದರು. 

Advertisement

ಇದೇ ವೇಳೆ ವಿಶಾಲ್‌ ವಿಚಾರಣೆ ವೇಳೆ, ಪೊಲೀಸರಿಗೆ ಶರತ್‌ ಬಳಿ 3 ಲಕ್ಷ ಹಣವಿತ್ತು. ಆತನಿಗೆ ಲಡಾಖ್‌ ನೋಡುವ ಆಸೆಯಿತ್ತು ಎಂದು ಹೇಳಿಕೆ ನೀಡಿದ್ದ. ಈ ಹೇಳಿಕೆ ಮೂಲಕ ಇಡೀ ಪ್ರಕರಣದ ದಿಕ್ಕು ಬದಲಿಸಲು ಯತ್ನಿಸಿದ್ದ. ಅನುಮಾನಗೊಂಡ ವಿಶೇಷ ತಂಡ ತಕ್ಷಣ ಆತನನ್ನು ವಶಕ್ಕೆ ಪಡೆದು ತೀವ್ರ ರೀತಿಯಲ್ಲಿ ವಿಚಾರಣೆಗೊಳಪಡಿಸಿದಾಗ ಶರತ್‌ನನ್ನು ಹಣದಾಸೆಗಾಗಿ ತನ್ನ ಸ್ನೇಹಿತರೊಂದಿಗೆ ಸೇರಿ ಅಪಹರಣ ಮಾಡಿದ್ದೆವು.

ತಂದೆ ಪೊಲೀಸರಿಗೆ ದೂರು ನೀಡುತ್ತಿದ್ದಂತೆ ಎಲ್ಲಿ ನಮ್ಮ ಸಂಚು ಬಯಲಾಗುವುದೋ ಎಂದು ಹೆದರಿ ಕೊಲೆಗೈದಿದ್ದೇವೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ವಿಶಾಲ್‌ ಮೊಬೈಲ್‌ ಕರೆಗಳು ಕೆಲವೊಂದು ಪ್ರದೇಶಗಳಲ್ಲಿ ಸರಿಯಾಗಿ ಸಿಗುತ್ತಿರಲಿಲ್ಲ. ಈ ವೇಳೆ ಆತ ಎಲ್ಲಿದ್ದ? ಏನು ಮಾಡುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಸಿದಾಗ ಆರೋಪಿಯ ಬಗ್ಗೆ ಸ್ಪಷ್ಪ ಸುಳಿವು ಸಿಕ್ಕಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. 

ಸಿನಿಮಾಗೆ ಹೋಗಿದ್ದ ಆರೋಪಿಗಳು: ಸೆ.20ರಂದು ಬೆಳಗ್ಗೆ ಆರೋಪಿಗಳೆಲ್ಲರೂ ಇತ್ತೀಚೆಗೆ ಬಿಡುಗಡೆಯಾದ “ಮಗುಳುನಗೆ’ ಸಿನಿಮಾಕ್ಕೆ ಹೋಗಿದ್ದರು. ಬಳಿಕ ಕೆರೆ ಬಳಿ ಬಂದು ನೋಡಿದಾಗ ಮೃತ ದೇಹ ತೇಲುತ್ತಿತ್ತು. ಕೂಡಲೇ ಗಾಬರಿಗೊಂಡ ಎಲ್ಲರೂ ಕಾರಿನಲ್ಲಿ ನರಸಿಂಹಯ್ಯನ ಕೆರೆಯಿಂದ 2-3 ಕಿ.ಮೀಟರ್‌ ದೂರದಲ್ಲಿರುವ ಕಲ್ಲು ಕ್ವಾರೆಗೆ ಕೊಂಡೊಯ್ದ ಹೂತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಶರತ್‌ ಸೋದರಿಯಿಂದಲೇ ವಿಡಿಯೋ ತರಿಸಿಕೊಂಡಿದ್ದ!: ಮೃತ ಶರತ್‌ ಸಹೋದರಿಯಿಂದ ಅಪಹರಣದ ಬಗ್ಗೆ ಮಾಹಿತಿ ಪಡೆದುಕೊಂಡ ಆರೋಪಿ ವಿಶಾಲ್‌, ಗಾಬರಿಗೊಂಡವನಂತೆ ವರ್ತಿಸಿ ತಾನೇ ಶರತ್‌ನ ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿದ್ದ ದೃಶ್ಯಗಳನ್ನು ಅನುಮಾನ ಬಾರದಂತೆ ಆಕೆಯಿಂದಲೇ ಮತ್ತೆ ಕಳುಹಿಸಿಕೊಂಡಿದ್ದಾನೆ. ಅಲ್ಲದೇ, ಆ ವಿಡಿಯೋಗಳನ್ನು ತನ್ನ ತಾಯಿಗೆ ತೋರಿಸಿ ನೋಡಮ್ಮ ಶರತ್‌ನನ್ನು ಯಾರೋ ಅಪಹಹರಣ ಮಾಡಿದ್ದಾರೆ ಎಂದು ಅಪಹರಣಕಾರರಿಗೆ ಬಾಯಿಗೆ ಬಂದಂತೆ ನಿಂದಿಸಿದ್ದಾನೆ.

ಜತೆಗೆ ಶಿರ್ಕೆ ಅಪಾಟ್‌ಮೆಂಟ್‌ ಬಳಿ ಬರುವುದಾಗಿ ಶರತ್‌ ಕೊನೆಯ ಬಾರಿಗೆ ಕಳುಹಿಸಿದ್ದ ಸಂದೇಶವನ್ನು ಶರತ್‌ ಕುಟುಂಬಸ್ಥರಿಗೆ ತೋರಿಸಿದ್ದ. ಹೀಗಾಗಿ ಯಾರಿಗೂ ಆತನ ಮೇಲೆ ಶಂಕೆ ವ್ಯಕ್ತವಾಗಲಿಲ್ಲ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next