Advertisement

ಹಂಪಿಯಲ್ಲಿ ಸನ್ಯಾಸತ್ವ ದೀಕ್ಷೆ

10:20 PM Dec 29, 2019 | Lakshmi GovindaRaj |

ಕೊಪ್ಪಳ/ಬಳ್ಳಾರಿ: ಪೇಜಾವರ ಶ್ರೀಗಳ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿದ್ದೇ ಐತಿಹಾಸಿಕ ಹಿನ್ನೆಲೆಯುಳ್ಳ ಹಂಪಿಯಲ್ಲಿ. 1931ರಲ್ಲಿ ಜನಿಸಿದ್ದ ಶ್ರೀಗಳು, ಸಣ್ಣ ವಯಸ್ಸಿನಲ್ಲೇ ಆಧ್ಯಾತ್ಮಕದತ್ತ ಒಲವು ತೋರಿದ್ದರು. ಹೀಗಾಗಿ 8 ವರ್ಷದವರಿರುವಾಗಲೇ 1938ರ ಡಿ.3ರ ಬಹುಧಾನ್ಯ ಸಂವತ್ಸರದ ಮಾರ್ಗಶಿರ ಶುದ್ಧ ಪಂಚಮಿಯಂದು ಹಂಪಿಯ ಯಂತ್ರೋದ್ಧಾರಕ ಸನ್ನಿ ಧಿಯಲ್ಲಿ ಸನ್ಯಾಸ ದೀಕ್ಷೆ ಪಡೆದಿದ್ದರು. ಕೊಪ್ಪಳ-ಹೊಸಪೇಟೆ ಭಾಗಕ್ಕೆ ಪ್ರವಾಸ ಕೈಗೊಂಡಾಗಲೆಲ್ಲ ಮುಖ್ಯ ಪ್ರಾಣ ದೇವರ ಸನ್ನಿಧಾನಕ್ಕೆ ತೆರಳಿ ಜಪ-ತಪ ಕೈಗೊಳ್ಳುತ್ತಿರುವುದನ್ನು ಮಾತ್ರ ಮರೆತಿರಲಿಲ್ಲ.

Advertisement

ಬರಗಾಲ ಬಂದಾಗ 10 ದಿನ ತಂಗಿದ್ದರು
ಕಲಬುರಗಿ: 1972ರ ಭೀಕರ ಬರಗಾಲ ಸಂದರ್ಭದಲ್ಲಿ 10 ದಿನಗಳ ಕಾಲ ಜಿಲ್ಲೆಯಲ್ಲಿಯೇ ವಾಸ್ತವ್ಯ ಹೂಡಿದ್ದ ಪೇಜಾವರ ಶ್ರೀಗಳು ಜನ-ಜಾನುವಾರು ಅಗತ್ಯ ಸಹಾಯ ಕಲ್ಪಿಸಿದ್ದರು. ಪ್ರತಿ ದಿನ ನಾಲ್ಕೆದು ಹಳ್ಳಿಗಳಿಗೆ ಸಂಚರಿಸಿ ಜನರಿಗೆ ಧೈರ್ಯ ತುಂಬು ವುದರೊಂದಿಗೆ ಜನರಿಗೆ ಅಗತ್ಯವಾದ ಬಟ್ಟೆಬರೆ-ಧವಸಧಾನ್ಯ ನೀಡಿದ್ದರು. ಇವರ ಜತೆ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ, ಪಾದೂರು ರಾಮಕೃಷ್ಣ ತಂತ್ರಿ ಹಾಗೂ ಇತರರು ತೆರಳುತ್ತಿದ್ದರು.

ಗದ್ದೆ ಖರೀದಿಸಿ ಗಿರಿಜನರಿಗೆ ನೀಡಿದ್ದರು
ಚಿಕ್ಕಮಗಳೂರು: ವಿಶ್ವೇಶ ತೀರ್ಥ ಶ್ರೀಪಾದಂಗಳು ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಜನತೆಗೆ ಮೂಲ ಸೌಲಭ್ಯ ಒದಗಿಸಿದ್ದರು. ಬಂದೂಕಿಗೆ ಬಂದೂಕು ಉತ್ತರವಲ್ಲ ಎಂಬುದನ್ನು ಪ್ರೀತಿ, ವಿಶ್ವಾಸ, ಅಭಿವೃದ್ಧಿ ಮೂಲಕ ನಿರೂಪಿಸಿದ್ದರು. ಹಳ್ಳಿಗಳಲ್ಲಿ ಕುಡಿಯುವ ನೀರು, ಶಾಲೆ, ಸ್ವಉದ್ಯೋಗಕ್ಕೆ ಸಹಾಯ ಮಾಡಿದ್ದರು. ಭತ್ತದ ಗದ್ದೆಗಳನ್ನು ಖರೀದಿಸಿ ಗಿರಿಜನರಿಗೆ ನೀಡಿದ್ದಲ್ಲದೇ ಕೃಷಿಕರಿಗೆ ವಿವಿಧೆಡೆ ನೀರಾವರಿ ಸೌಲಭ್ಯ ಒದಗಿಸಿದ್ದರು. ವಸತಿ ರಹಿತರಿಗೆ ಮನೆ ನಿರ್ಮಿಸಿ ಕೊಟ್ಟಿದ್ದರು. ಕೆಲವು ಕಡೆ ತೀರಾ ಆರ್ಥಿಕ ಸಂಕಷ್ಟದಲ್ಲಿದ್ದ ವ್ಯಕ್ತಿಗಳಿಗೆ ನಿರ್ಮಿಸಿದ್ದ ಮನೆಗಳನ್ನು ಕ್ರಯಕ್ಕೆ ಕೊಂಡು ಫಲಾನುಭವಿಗಳಿಗೆ ನೀಡಿದ್ದರು.

ರೈತರ ಜತೆ ಬ್ಯಾರೇಜ್‌ಗೆ ಶ್ರಮದಾನ
ಬಾಗಲಕೋಟೆ: ಕೇಂದ್ರದ ಮಾಜಿ ಸಚಿವ, ಜಮಖಂಡಿಯ ಮಾಜಿ ಶಾಸಕ ದಿ.ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ 1989ರಲ್ಲಿ ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರೇ ಬ್ಯಾರೇಜ್‌ ನಿರ್ಮಿಸಿದ್ದಾರೆ. 94 ಲಕ್ಷ ರೂ. ವೆಚ್ಚದಲ್ಲಿ 11 ತಿಂಗಳ ಅವಧಿಯಲ್ಲಿ ಕಟ್ಟಲಾಗಿದೆ. ರೈತರೇ ಸೇರಿ ಬ್ಯಾರೇಜ್‌ ಕಟ್ಟುತ್ತಿರುವ ವಿಷಯ ಕೇಳಿ ಜಮಖಂಡಿಗೆ ಆಗಮಿಸಿದ ಪೇಜಾವರ ಶ್ರೀಗಳು, ಇಡೀ ಒಂದು ದಿನ ರೈತರೊಂದಿಗಿದ್ದು ಶ್ರಮದಾನ ಮಾಡಿದ್ದರು. ಅಲ್ಲದೇ ತಮ್ಮ ಮಠದಿಂದ ರೈತರ ನಿಧಿಗೆ ಆರ್ಥಿಕ ನೆರವೂ ನೀಡಿದ್ದರು.

ಸಂತ್ರಸ್ತರಿಗೆ ಸೂರು ಕಲ್ಪಿಸಿದ ಸಂತ
ಕಲಬುರಗಿ: 2009-10ರಲ್ಲಿ ಭೀಕರ ಪ್ರವಾಹ ಉಂಟಾದಾಗ ಪೇಜಾವರ ಶ್ರೀಗಳು ಜೇವರ್ಗಿ ತಾಲೂಕಿನ ಕೂಡಿ ದರ್ಗಾ- ಕೋನಹಿಪ್ಪರಗಾ ಗ್ರಾಮದಲ್ಲಿ ಸಂತ್ರಸ್ತರಿಗೆ ಸೂರು ಕಲ್ಪಿಸಿದ್ದರು. ಪ್ರವಾಹಕ್ಕೆ ಅಫ‌ಜಲಪುರ-ಜೇವರ್ಗಿ ತಾಲೂಕಿನ 70ಕ್ಕೂ ಹೆಚ್ಚು ಹಳ್ಳಿಗಳು ಮುಳುಗಡೆಯಾಗಿದ್ದವು. 2 ವರ್ಷದೊಳಗೆ 123 ಮನೆಗಳನ್ನು ನಿರ್ಮಿಸಿ ಶ್ರೀಗಳವರು ಗ್ರಾಮಗಳಿಗೆ ತೆರಳಿ ಸ್ವತಃ ಹಕ್ಕು ಪತ್ರ ವಿತರಿಸಿದ್ದರು.

Advertisement

ದಲಿತ ಕೇರಿಗೆ ಭೇಟಿ
ದಾವಣಗೆರೆ: ವಿಶ್ವೇಶ ತೀರ್ಥ ಶ್ರೀಪಾದಂಗಳು 2015ರಲ್ಲಿ ದಾವಣಗೆರೆ ನಿಟುವಳ್ಳಿಯಲ್ಲಿರುವ ದಲಿತ ಕೇರಿಗೆ ಭೇಟಿ ನೀಡಿದ್ದರು. ಆದಿ ಜಾಂಬವ ಗುರುಪೀಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಅವರೊಂದಿಗೆ ನಿಟುವಳ್ಳಿಯ ಎ.ಕೆ. ಮಂಜಪ್ಪ ಮತ್ತು ಪೂಜಾರ್‌ ನಾಗರಾಜ್‌ ಅವರ ಮನೆಯಲ್ಲಿ ವಿಶ್ವೇಶ ತೀರ್ಥ ಶ್ರೀಪಾದಂಗಳ ಪಾದಪೂಜೆ ನಡೆಸಲಾಗಿತ್ತು.

ಮತ್ತೂರು ಸಂಸ್ಕೃತ ಗ್ರಾಮ
ಶಿವಮೊಗ್ಗ: 1981ರಲ್ಲಿ ಶಿವಮೊಗ್ಗ ಜಿಲ್ಲೆ ಮತ್ತೂರು ಗ್ರಾಮದಲ್ಲಿ ಹಿಂದೂ ಸೇವಾ ಸಂಸ್ಥಾನ ಕಾರ್ಯಕರ್ತರಾದ ಕೃಷ್ಣಶಾಸ್ತ್ರಿ ಅವರು 10 ದಿನದಲ್ಲಿ ಸಂಸ್ಕೃತ ಕಲಿಸುವ ಶಿಬಿರ ನಡೆಸಿದ್ದರು. ಇದರ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪೇಜಾವರ ಶ್ರೀಗಳು, ಮತ್ತೂರು ಗ್ರಾಮವನ್ನು ಸಂಸ್ಕೃತ ಗ್ರಾಮವೆಂದು ಘೋಷಿಸಿದ್ದರು. ಸಂಸ್ಕೃತ ಕಳೆದು ಹೋಗುವ ಕಾಲಘಟ್ಟದಲ್ಲಿ ಸಂಜೀವಿನಿ ಕೊಟ್ಟಿದ್ದರು. ಸಂಸ್ಕೃತ ಬರೀ ಗ್ರಂಥ ಭಾಷೆಯಲ್ಲ, ಪಂಡಿತರ ಭಾಷೆಯಲ್ಲ, ಜನಸಾಮಾನ್ಯರು ಕಲಿಯುವ ಭಾಷೆ ಎಂದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next