Advertisement

ಮಠಗಳು ಜ್ಞಾನದ ಶಕ್ತಿ ಕೇಂದ್ರಗಳು: ಸಂಸದ ಸಿದ್ದೇಶ್ವರ

12:46 PM Aug 23, 2017 | |

ಧಾರವಾಡ: ಮಠಗಳು ಜ್ಞಾನದ ಶಕ್ತಿ ಕೇಂದ್ರಗಳಾಗಿದ್ದು, ಅವುಗಳಿಂದ ಸದಾ ಕಾಲ ಮೌಲ್ಯಯುತ ಸಂದೇಶ ಹೊರ ಬರಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ನಗರದ ಮುರುಘಾಮಠದಲ್ಲಿ ಮಂಗಳವಾರ ಸಂಜೆ ನಡೆದ ವಚನ ದರ್ಶನ ಪ್ರವಚನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

Advertisement

ಮಠಗಳ ಈ ಸಂದೇಶ ಹೊರ ಹೊಮ್ಮಿಕೆಯಿಂದ ಸಮಾಜದ ಸ್ವಾಸ್ಥ ಕೂಡ ಆರೋಗ್ಯಕರ ಇರಲಿದೆ ಎಂದರು. ಸಂಘ-ಸಂಸ್ಥೆಗಳು ಅಥವಾ ಸರಕಾರದ ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣಕ್ಕೂ ಮಠಗಳು ನೀಡುವ ಸಂಸ್ಕಾರಯುಕ್ತ ಶಿಕ್ಷಣಕ್ಕೂ ಸಾಕಷ್ಟು ವ್ಯತ್ಯಾಸವಿದೆ.

ಅಲ್ಲದೇ ಮಠಗಳು ಹಾಗೂ ಆಯಾ ಮಠಾಧೀಶರು ಶರಣರ ಸಂತರ ಸಾಹಿತ್ಯ ಪ್ರಸಾರ ಮಾಡುವುದರ ಜೊತೆಗೆ ಮಕ್ಕಳಿಗೆ ನಿರಂತರ ಜ್ಞಾನ ದಾಸೋಹ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಚಿತ್ರದುರ್ಗದ ಮುರುಘಾಮಠದ ಡಾ| ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯ ವಹಿಸಿ, ಬಸವಾದಿ ಶರಣರು ವಚನದ ಮೂಲಕ ಜೀವಂತ ಇದ್ದಾರೆ.

ದೇಹದಿಂದ ಅವರನ್ನು ನೋಡಲು ಸಾಧ್ಯವಿಲ್ಲ. ಆದರೆ ಅವರ ಸಾಹಿತ್ಯ ಜೀವಂತ ಇದೆ. ಶರಣರು ಆಸ್ತಿ, ಹಣ ಮಾಡಲಿಲ್ಲ. ಬದಲಾಗಿ ವಚನ ಸಾಹಿತ್ಯವನ್ನೇ ಸಮಾಜಕ್ಕೆ ದೊಡ್ಡ ಆಸ್ತಿಯನ್ನಾಗಿ ಕೊಟ್ಟು ಹೋಗಿದ್ದಾರೆ. ವಚನ ಸಂಪತ್ತನ್ನು ಎಷ್ಟು ಬಳಸಿದರೂ ಅದು ಎಂದಿಗೂ ಕರಗುವುದಿಲ್ಲ ಎಂದರು. 

ವಚನಗಳಲ್ಲಿ ಮಾನವನ ಉದ್ಧಾರಕ್ಕೆ ಬೇಕಾಗಿರುವ ದಾರ್ಶನಿಕಗಳಿವೆ. ವಚನದ ಮೂಲಕ ಗುರು ಲಿಂಗ ದರ್ಶನ ಆಗುತ್ತದೆ. ಇಲ್ಲಿ ಸತ್ಯ ದರ್ಶನ, ಸಾಹಿತ್ಯ, ಮೌಲ್ಯದ ದರ್ಶನ ಸಿಗುತ್ತದೆ. ವಚನಗಳು ಅನುಭಾವ ದರ್ಶನ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣ ಮಾಡುವತ್ತ ಆಲೋಚನೆ, ಸಂಸ್ಕಾರ ನೀಡುತ್ತವೆ.

Advertisement

ಇಂದಿನ ಯುವ ಪೀಳಿಗೆ ವಚನ ಚಿಂತನ ಅಧ್ಯಯನ ಮಾಡಿದರೆ ಜೀವನಕ್ಕೆ ಬೇಕಾಗುವ ಒಳನೋಟ ಕಂಡುಕೊಳ್ಳಬಹುದು ಎಂದರು. ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ರಾಜು ಮರಳಪ್ಪನವರ, ಸಿದ್ರಾಮಣ್ಣ ನಡಕಟ್ಟಿ, ಸಂಗಮೇಶ್ವರ ದೇವರು, ಡಿ.ಬಿ. ಲಕಮನಹಳ್ಳಿ ಇದ್ದರು.

ಇದೇ ಸಂದರ್ಭದಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲ ವಚನ ದರ್ಶನ ಪ್ರವಚನ ನೀಡಿದ ಬೀದರ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ಸಂಗಮೇಶ್ವರ ದೇವರನ್ನು ಗೌರವಿಸಲಾಯಿತು. ಮಲ್ಲು ಗಾಣಗೇರ ನಿರೂಪಿಸಿದರು. ಹುಬ್ಬಳ್ಳಿಯ ಗಾಯಕ ಬಾಲಚಂದ್ರ ನಾಕೋಡ ಅವರು ವಚನ ಗಾಯನ ಪ್ರಸ್ತುತ ಪಡಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ಜರುಗಿತು.  

Advertisement

Udayavani is now on Telegram. Click here to join our channel and stay updated with the latest news.

Next