ನವೆಂಬರ್ ಎಂಟರ ರಾತ್ರಿ ಮಕ್ಕಳೆಲ್ಲ ಓದುತ್ತ ಕುಳಿತಿದ್ದರು. ಊರಿಂದ ಬಂದ ಅಪ್ಪ -ಅಮ್ಮ ಟಿ.ವಿ.ಯಲ್ಲಿ ಸುದ್ದಿ ಕೇಳುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಐನೂರು, ಸಾವಿರ ನೋಟುಗಳ ರದ್ದತಿಯ ಸುದ್ದಿ ಪ್ರಸಾರವಾಗಿತ್ತು. ಏಕಾಏಕಿ ನಿರ್ಣಯದಿಂದ ಏನೆಲ್ಲ ಪರಿಣಾಮಗಳಾಗಬಹುದು ಎಂದು ಮನೆಯಲ್ಲೇ ಪರ-ವಿರೋಧ ವಾದಗಳು ಶುರುವಾಗಿತ್ತು. ಓದು ನಿಲ್ಲಿಸಿ ರೂಮಿಗೆ ಓಡಿದ ಮಕ್ಕಳು ಕೈಯಲ್ಲಿ ತಮ್ಮ ಪಿಗ್ಗಿ ಬ್ಯಾಂಕ್ ತಂದು ಮೇಜಿನ ಮೇಲಿಟ್ಟರು. “”ಅಜ್ಜ-ಅಜ್ಜಿ , ಚಿಕ್ಕಮ್ಮ-ಚಿಕ್ಕಪ್ಪ ಹೀಗೆ ಎಲ್ಲ ಕೊಟ್ಟ ದುಡ್ಡನ್ನು ನಾವು ಕೂಡಿಟ್ಟಿದ್ದು. ಅದರಲ್ಲಿ ಕೆಲವು ಐನೂರು, ಸಾವಿರದ ನೋಟು ಇದೆ. ನಾಳೇನೇ ನಮ್ಮ ದುಡ್ಡು ಚೇಂಜ್ ಮಾಡಿ ಕೊಡಿ” ಎಂದು ತಮ್ಮ ಅಪ್ಪನಿಗೆ ಆರ್ಡರ್ ಮಾಡಿದರು. “”ಬಂದ ಸಂಬಂಧಿಕರಿಗೆ ಹೆದರಿಸಿ, ಬೆದರಿಸಿ ಬ್ಲ್ಯಾಕ್‌ವೆುಲ್ ಮಾಡಿ ಕಿತ್ತುಕೊಂಡ ನಿಮ್ಮದು ಬ್ಲ್ಯಾಕ್ ಮನಿ” ಎಂದು ಯಜಮಾನರು ಹೇಳಿದ್ದೇ ತಡ ಜಗಳವೇ ಆರಂಭ. ಅಂತೂ ಈ ಎಲ್ಲಾ ಗಲಾಟೆ ನಡುವೆಯೇ ಪಿಗ್ಗಿ ಬ್ಯಾಂಕ್ ಕಂಡದ್ದೇ ಅಮ್ಮ ತನ್ನ ಬಾಲ್ಯದ ದಿನಗಳ ನೆನಪನ್ನು ಬಿಚ್ಚಿಟ್ಟಳು.
“”ಈಗೆಲ್ಲಾ ನಿಮಗೆ ಆಣೆ ಎಂದರೆ ತಿಳಿಯುವುದೇ ಇಲ್ಲ. ನಾವು ಮಕ್ಕಳಾಗಿದ್ದಾಗ ಆಣೆಯ ಕಾಲ. ಒಂದು ರೂಪಾಯಿಗೆ ಹದಿನಾರು ಆಣೆಗಳು. ನಾಲ್ಕಾಣೆ ಅಂದರೆ ಇಪ್ಪತ್ತೈದು ಪೈಸೆಗೂ ಬೆಲೆ ಇತ್ತು. ಆ ಕಾಲಕ್ಕೆ ನಮಗೆ ಅದೇ ದೊಡ್ಡ ದುಡ್ಡು. ಹಳ್ಳಿ ಕಡೆಯ ಸಭೆ-ಸಮಾರಂಭಗಳಲ್ಲಿ ಊಟಕ್ಕೆ ಹೋಗುವುದೆಂದರೆ ಬಹಳ ಖುಷಿಯಾಗಿತ್ತು. ನೆರೆಹೊರೆಯ ಗೆಳೆಯ-ಗೆಳತಿಯರು ಸಿಗುತ್ತಾರೆ ಎಂಬುದರ ಜತೆ ಊಟಕ್ಕೆ ಕುಳಿತ ನಮಗೆ ದಕ್ಷಿಣೆಯಾಗಿ ದುಡ್ಡು ಸಿಗುತ್ತಿತ್ತು. ಕರೆದಿದ್ದಕ್ಕೆ ಗೌರವ ಕೊಟ್ಟು ಹೋಗಿ ಪ್ರೀತಿಯಿಂದ ಊಟ ಮಾಡಿದವರಿಗೆ ಕೊಡುವ ಗೌರವ ಅದಾಗಿತ್ತು. ಮಕ್ಕಳಿಗೆ ನಾಲ್ಕಾಣೆ, ಹೆಂಗಸರಿಗೆ ಎಂಟಾಣೆ ಮತ್ತು ಗಂಡಸರಿಗೆ ಒಂದು ರೂಪಾಯಿ. ಲೋಹದ ಈ ನಾಣ್ಯಗಳನ್ನು ಊಟಕ್ಕೆ ಕುಳಿತಾಗ ಎಡಗೈಯಲ್ಲಿ ತೆಗೆದುಕೊಳ್ಳುವಂತಿರಲಿಲ್ಲ. ಹಾಗಾಗಿ ನೀರಿಟ್ಟ ಲೋಟದಲ್ಲಿ ನಾಣ್ಯ ಹಾಕುತ್ತಿದ್ದರು. “ಠಣ್’ ಎಂದು ನಾಣ್ಯ ನೀರಿಗೆ ಬೀಳುವ ಸದ್ದು ನಮಗೆ ಕರ್ಣಾನಂದಕರವಾಗಿತ್ತು. ಊಟ ಮುಗಿದೊಡನೆ ಆ ನಾಣ್ಯವನ್ನು ಭದ್ರವಾಗಿ ಮುಷ್ಠಿಯಲ್ಲಿ ಹಿಡಿದು, ಆಗಾಗ್ಗೆ ಸವರಿ, ಅಲ್ಲೇ ಇದೆ ಎಂದು ಖಚಿತಪಡಿಸಿಕೊಂಡು ಮನೆಗೆ ಬರುವಾಗ ಜಗತ್ತನ್ನೇ ಗೆದ್ದ ಸಂಭ್ರಮ.
ಶಿರಸಿಯಲ್ಲಿದ್ದ ನಮಗೆ ಎರಡು ವರ್ಷಕ್ಕೊಮ್ಮೆ ಮಾರಿಕಾಂಬಾ ಜಾತ್ರೆಯ ಸಡಗರ. ದೂರದೂರದಿಂದ ನೆಂಟರಿಷ್ಟರು ಬಂದು ನಾಲ್ಕಾರು ದಿನ ಠಿಕಾಣಿ ಹೂಡುತ್ತಿದ್ದರು. ಮನೆಯೇನೂ ದೊಡ್ಡದಲ್ಲ, ಬಂದವರಿಗೆಲ್ಲ ಔತಣ ನೀಡುವಷ್ಟು ಶ್ರೀಮಂತರೂ ನಾವಲ್ಲ. ಹೇಗೋ ಎರಡು ಹೊತ್ತು ಊಟ, ಎರಡು ಜೊತೆ ಬಟ್ಟೆ ಇದ್ದವರು ಅಷ್ಟೇ! ಆದರೆ, ಅತಿಥಿಗಳಿಗೆ ಮನೆಯೆಂದೂ ತೆರೆದಿರುತ್ತಿತ್ತು. ನನ್ನ ಆಯಿ ಅಂದರೆ, ನಿಮ್ಮ ಮುತ್ತಜ್ಜಿ ಹೇಗೆ ಅಷ್ಟು ಜನರಿಗೆ ಅನ್ನಪೂರ್ಣೆಯಾಗಿ ಉಪಚಾರ ಮಾಡುತ್ತಿದ್ದಳು ಎಂಬುದು ಇಂದಿಗೂ ಯಕ್ಷಪ್ರಶ್ನೆಯೇ ಸರಿ. ಮಕ್ಕಳಾದ ನಮಗೆ ಇದೆಲ್ಲ ಬೇಕೂ ಆಗಿರಲಿಲ್ಲ, ಗೊತ್ತಾಗುತ್ತಲೂ ಇರಲಿಲ್ಲ. ಜನ ಬಂದಷ್ಟೂ ನಮಗೆ ಉಮೇದು. ಇನ್ನೂ ಉಳಿದುಕೊಳ್ಳಿ ಎಂದು ಒತ್ತಾಯಿಸುತ್ತಿ¨ªೆವು. ಜಾತ್ರೆಗೆ ಬರುವವರೂ ನಮ್ಮಂತೆಯೇ: ಸ್ಥಿತಿವಂತರಲ್ಲ. ಆದರೂ ಬರಿಗೈಯಲ್ಲಿ ಬರುತ್ತಿರಲಿಲ್ಲ. ಮನೆಯಲ್ಲಿ ಬೆಳೆದ ತರಕಾರಿ, ಏಲಕ್ಕಿ, ಕಾಳುಮೆಣಸು, ಹಪ್ಪಳದ ಕಟ್ಟು , ಜೇನುತುಪ್ಪ ಹೀಗೆ ತಮ್ಮ ಕೈಲಾದದ್ದನ್ನು ತರುತ್ತಿದ್ದರು. ಜಾತ್ರೆಗೆ ಹೋಗುವಾಗ ಎಲ್ಲಾ ಮಕ್ಕಳಿಗೆ ಯಥಾಶಕ್ತಿ ದುಡ್ಡು , ಎಂಟಾಣೆ-ಒಂದು ರೂಪಾಯಿ ಕೊಡುತ್ತಿದ್ದರು. ಹಾಗೆ ಕೊಟ್ಟ ದುಡ್ಡನ್ನು ಜೋಪಾನವಾಗಿ ಟಿನ್ ಡಬ್ಬದಲ್ಲಿ ಕೂಡಿಟ್ಟು ಮುಂದಿನ ಜಾತ್ರೆಯಲ್ಲಿ ಪಿನ್ನು , ಹೊಳೆಯುವ ಟೇಪು, ಚುಕ್ಕಿ ಬಳೆ, ಮಂಡಕ್ಕಿ, ಗಿರಿಗಿಟ್ಲೆ , ಬಣ್ಣದ ಶರಬತ್ ಹೀಗೆ ಏನೆಲ್ಲಾ ಕೊಳ್ಳಬಹುದು ಎಂಬ ಲೆಕ್ಕಾಚಾರ ನಡೆಯುತ್ತಿತ್ತು. ಆಗಿನ ಪುಟ್ಟ- ಮುಗ್ಧ ಮನಸ್ಸಿಗೆ ಕೊಳ್ಳುವ ಕನಸು ಕೊಡುತ್ತಿದ್ದ ಸಂತೋಷ ಈಗ ಕೋಟಿ ಕೊಟ್ಟರೂ ಬಾರದು.
ಸ್ವಲ್ಪ ದೊಡ್ಡವರಾದಂತೆ ನಮಗೆ ಸಿಗುತ್ತಿದ್ದ ದಕ್ಷಿಣೆಯೂ ಏರಿತು. ನಾಲ್ಕಾಣೆಯಿಂದ ಎಂಟಾಣೆಗೆ ಬಡ್ತಿ! ಅದರೊಂದಿಗೇ ಹಾಗೆ ಉಳಿಸಿದ ದುಡ್ಡು ಅಮೂಲ್ಯ ಎಂಬುದೂ ಅರಿವಿಗೆ ಬಂದಿತ್ತು. ಹಾಗಾಗಿ, ಎರಡೆರಡೇ ವರ್ಷ ಅಂತರವಿದ್ದ ನಾವು ನಾಲ್ಕು ಮಕ್ಕಳು ಒಟ್ಟಾಗಿ ಆಗಾಗ್ಗೆ ಖರ್ಚು ಮಾಡದೇ ದುಡ್ಡು ಕೂಡಿಟ್ಟು ಕಡೆಗೊಮ್ಮೆ ದೊಡ್ಡದನ್ನು ಕೊಳ್ಳುವ ನಿರ್ಧಾರ ಮಾಡಿ¨ªೆವು. ಅದಕ್ಕೆ ಸರಿಯಾಗಿ ಬೇಸಿಗೆಯ ಒಂದು ಮಧ್ಯಾಹ್ನ ತಳ್ಳುಗಾಡಿಯಲ್ಲಿ ನಾನಾ ರೀತಿ ಮಡಕೆಗಳ ಜತೆ ತೆಂಗಿನಕಾಯಿ ಆಕಾರದ ವಿಚಿತ್ರ ಮಣ್ಣಿನ ಮಡಕೆ ಮಾರಾಟಕ್ಕೆ ಬಂದಿತ್ತು. ಅದರ ತುದಿಯಲ್ಲಿ ಚಿಕ್ಕ ತೂತು. ಕುತೂಹಲದಿಂದ ವಿಚಾರಿಸಿದಾಗ ಅದು ದುಡ್ಡು ಕೂಡಿಡಲು, ತುದಿಯ ತೂತು ನಾಣ್ಯ ಹಾಕಲು ಎಂಬ ಉತ್ತರ ಸಿಕ್ಕಿತ್ತು. ದುಡ್ಡು ಹಾಕುವುದೇನೋ ಸರಿ, ತೆಗೆಯುವುದು ಹೇಗೆ ಎಂಬ ನಮ್ಮ ಪ್ರಶ್ನೆಗೆ ಮಡಕೆ ತೆಗೆಯಲು ಸಾಧ್ಯವಿಲ್ಲ, ತುಂಬಿದೊಡನೆ ಒಡೆದು ತೆರೆಯುವುದು ಎಂದು ಮಾರುವಾತ ವಿವರಿಸಿದ್ದ. ಆವರೆಗೆ ಅಂತಹ ವಸ್ತು ನೋಡದ ನಮಗೆ ಅದರಲ್ಲಿ ದುಡ್ಡು ಕೂಡಿಡುವುದು ಏನೋ ಸಾಧನೆ ಅನ್ನಿಸಿತ್ತು. ಅಂತೂ ಎಲ್ಲರೂ ದುಡ್ಡು ಹಾಕಿ ಸಾಕಷ್ಟು ದೊಡ್ಡದಾದ ಆ ಮಡಕೆ ಕೊಂಡಿ¨ªೆವು. ದೇವರ ಮನೆ ಪಕ್ಕದಲ್ಲಿದ್ದ ಕಪಾಟಿನ ಮೇಲ್ಭಾಗದಲ್ಲಿ ಅದನ್ನು ಇಡಲಾಯಿತು. ಯಾರಾದರೂ ಕಣ್ಣು ಹಾಕಿ ಬಿಟ್ಟರೆ ಎಂಬ ಹೆದರಿಕೆಯಿಂದ, ಆಯಿ ಹಾಕಿದ ಚೆಂದದ ಕಸೂತಿ ಉಳ್ಳ ಬಟ್ಟೆ ಮುಚ್ಚಿಟ್ಟೆವು. ನಮ್ಮ ತಯಾರಿ ನೋಡಿ, ಕಪಾಟಿನಲ್ಲಿ ಕಲಶ ಕೂರಿಸಿದ್ದೀರಿ, ಕೈ ಮುಗಿವುದೊಂದೇ ಬಾಕಿ ಎಂದು ಅಪ್ಪ ತಮಾಷೆ ಮಾಡುತ್ತಿದ್ದ. ಆ ದಿನದಿಂದಲೇ ಶುರು ನಮ್ಮ ಹಣ ಸಂಗ್ರಹಿಸುವ ಕೆಲಸ. ದಿನಾ ಬೆಳಿಗ್ಗೆ ದೇವರಿಗೆ ಕೈ ಮುಗಿಯುವಾಗ ಬಾಯಿ ಏನೇನೋ ಮಂತ್ರ ಮಣಮಣಿಸಿದರೂ ಮನಸ್ಸು ಪೂರ್ತಿ ಲಕ್ಷ್ಮೀಯ ಫೋಟೋದತ್ತಲೇ! ಆಭರಣಗಳಿಂದ ಸಿಂಗಾರವಾದ ಆ ಲಕ್ಷ್ಮೀ ಕೈಯಿಂದ ನಾಣ್ಯಗಳ ಮಳೆಯೇ ಸುರಿಯುತ್ತಿದ್ದದ್ದು ನಮಗೆ ಆಕರ್ಷಕವಾಗಿತ್ತು. ರಾತ್ರಿ ಮಲಗುವ ಮುನ್ನ ಕತೆ ಕೇಳುವಾಗ ಬಾಲ ಶಂಕರ, ಬಡ ವೃದ್ಧೆಯಲ್ಲಿ ಭಿಕ್ಷೆ ಬೇಡಿ ಆಕೆಯ ಸ್ಥಿತಿಗೆ ಮರುಗಿ ಲಕ್ಷ್ಮೀಯನ್ನು ಸ್ತುತಿಸಿ ಕನಕಮಾಲಾಧಾರಾ ಸ್ತೋತ್ರ ರಚಿಸಿದ್ದನ್ನು, ಆನಂತರ ಗುಡಿಸಲ ಮಾಡಿನಿಂದ ಚಿನ್ನದ ನೆಲ್ಲಿಕಾಯಿಗಳ ಮಳೆ ಸುರಿದಿದ್ದನ್ನು ಕೇಳುವಾಗ ನಮ್ಮ ಕಣ್ಣಲ್ಲೂ ಕನಕದ ಕನಸು. ಕತೆ ಮುಗಿದ ಮೇಲೆ ನಿಧಾನವಾಗಿ ಎದ್ದು , ಕಪಾಟಿನಲ್ಲಿದ್ದ ಮಡಕೆ ಸವರಿ, ಕೆಲವೊಮ್ಮೆ ಕುಲುಕಿ ಝಣ ಝಣ ಸದ್ದು ಕೇಳಿ ಮಲಗುತ್ತಿ¨ªೆವು. ಯಾವಾಗಲಾದರೂ ಬೇಸರವಾದಾಗ ಮಡಕೆಯಲ್ಲಿ ಎಷ್ಟಿರಬಹುದು ಎಂದು ಊಹಿಸುತ್ತಿದ್ದರೆ ಬೇಸರ ತನ್ನಿಂತಾನೇ ಕಡಿಮೆಯಾಗುತ್ತಿತ್ತು.
ಅಂತೂ ಬಹಳ ಶ್ರದ್ಧೆ-ಭಕ್ತಿಯಿಂದ ಎಲ್ಲರೂ ತಮಗೆ ಸಿಕ್ಕ ನಾಣ್ಯಗಳನ್ನು ಸುಮಾರು ಆರು ತಿಂಗಳು ಹಾಕಿದ್ದೇನೋ ಹೌದು. ಆದರೆ, ಆಶ್ಚರ್ಯವೆಂದರೆ ಮಡಕೆ ಪೂರ್ತಿಯಾಗಿ ತುಂಬಿಯೇ ಇರಲಿಲ್ಲ. ಎಷ್ಟೇ ಹಾಕಿದರೂ ತುಂಬದ ಇದು, ಮಾಯಾ ಮಡಕೆಯೇನೋ ಎಂದು ಮಕ್ಕಳಾದ ನಾವು ಮಾತಾಡಿಕೊಂಡರೆ ಅಲ್ಲೇ ಇರುತ್ತಿದ್ದ ಆಯಿ, “ಎಷ್ಟು ತುಂಬಿದರೂ ಸಾಕಾಗದ ಚೀಲ, ನಮ್ಮ ಹೊಟ್ಟೆಯಂತೆ ಇದು ಇರಬಹುದು’ ಎನ್ನುತ್ತಿದ್ದಳು. ಜತೆಗೆ, “ದುಡ್ಡು ಸಿಕ್ಕೊಡನೆ ನಾವು ಓಡಿ ಕಾತುರದಿಂದ ಅದನ್ನು ತಂದು ಹಾಕುತ್ತಿದ್ದ ರೀತಿಗೆ ಎಲ್ಲಾ ಕೂಡಿಡಬೇಡಿ, ಸ್ವಲ್ಪವಾದರೂ ಉಪಯೋಗಿಸಿ, ಆನಂದಿಸಿ ಮಕ್ಕಳೇ’ ಎನ್ನುತ್ತಿದ್ದಳು. ನಮಗೆ ಆ ಮಾತು ಸರಿ ಅನಿಸಿದರೂ ಏನೋ ದೊಡ್ಡದನ್ನು ಖರೀದಿಸುವ ಆಸೆ. ಹಾಗಾಗಿ ಬಾಯಿಗೆ ರುಚಿಯಾದ ಪೆಪ್ಪರಮಿಂಟ್, ಬೊಂಬಾಯಿ ಮಿಠಾಯಿ, ಕಣ್ಣಿಗೆ ಚೆಂದ ಕಂಡ ರಿಬ್ಬನ್ನು-ಬಳೆ ಹೀಗೆ ಸಣ್ಣಪುಟ್ಟದ್ದನ್ನು ಕೊಳ್ಳುವ ಬಯಕೆಯನ್ನು ಬಹಳ ಕಷ್ಟದಿಂದ ಬಿಗಿದು ಕಟ್ಟಿ ಎಲ್ಲವನ್ನೂ ಮಡಕೆಗೆ ಹಾಕುವುದನ್ನು ಮಾಡುತ್ತಿದ್ದೆವು.
ಆದರೂ ಒಮ್ಮೆ ಶಾಲೆಯಿಂದ ಬರುವಾಗ ಇನ್ನೂ ತುಂಬದ ಮಡಕೆ ಬಗ್ಗೆಯೇ ಚರ್ಚೆ ನಡೆದು ಯಾಕೋ ಮನದಲ್ಲಿ ಸಣ್ಣ ಅನುಮಾನ ಸುಳಿದಾಡಿತ್ತು. ಮಕ್ಕಳಲ್ಲೇ ಎಲ್ಲರಿಗಿಂತ ದೊಡ್ಡವನಾದ ಅಣ್ಣ , ಜಾಣನೂ-ತುಂಟನೂ ಆಗಿದ್ದ. ಅವನದ್ದೇ ಏನಾದರೂ ಕೈವಾಡವಿರಬಹುದೇ ಎಂಬ ಶಂಕೆ ಮೂಡಿತ್ತು. ಅದಕ್ಕಾಗಿ ಆತನಿಗೆ ಗೊತ್ತಾಗದಂತೆ ಏಳು ಹೆಡೆಯ ಸರ್ಪದಂತೆ ನಮ್ಮ ಮಡಕೆ ಕಾಯಲಾರಂಭಿಸಿದ್ದೆವು. ಒಂದು ಸಂಜೆ, ದೀಪ ಹಚ್ಚುವ ಸಮಯ. ಆಯಿ, ಅಡುಗೆಮನೆಯಲ್ಲಿ ಒರಳುಕಲ್ಲಿನಲ್ಲಿ ಏನೋ ರುಬ್ಬುತ್ತಿದ್ದಳು. ಅಪ್ಪ ಪೇಟೆಯಿಂದ ಬಂದಿರಲಿಲ್ಲ. ಆಟಕ್ಕೆ ಹೋಗಿದ್ದ ನಾವು ಸದ್ದಿಲ್ಲದೆ ಮನೆಯೊಳಗೆ ಹೊಕ್ಕರೆ ಕಂಡಿದ್ದೇನು? ಅಣ್ಣ ನಮ್ಮ ಮಡಕೆಯನ್ನು ತಲೆ ಕೆಳಗೆ ಮಾಡಿ ಅದರ ತೂತಿಗೆ ಪಿನ್ನು ಚುಚ್ಚಿ ನಾಣ್ಯ ಬೀಳಿಸುತ್ತಿದ್ದ. ನಾವು ಕೂಗಿದ ರೀತಿಗೆ ಅಣ್ಣ ಬೆಚ್ಚಿ ಬಿದ್ದಿದ್ದ, ಅಡುಗೆ ಮನೆಯಿಂದ ಆಯಿಯೂ ಓಡಿಬಂದಿದ್ದಳು. ಅಣ್ಣನ ಕೈಲಿದ್ದದ್ದು ಎರಡೋ ಮೂರೋ ನಾಣ್ಯಗಳಾದರೂ ನಮಗದು ಸಹಿಸಲು ಅಸಾಧ್ಯವಾಗಿತ್ತು. ಅಷ್ಟು ಕಷ್ಟಪಟ್ಟು ಕೂಡಿಟ್ಟ ಹಣವನ್ನು ಈ ರೀತಿ ಲಪಟಾಯಿಸಿದರೆ? ಕಣ್ಮುಂದೇ ಕಟ್ಟಿದ ಭವ್ಯ ಸೌಧ ಕುಸಿಯುತ್ತಿರುವ ಭಾವ. ಕಣ್ಣೀರು ಸುರಿಸುತ್ತ ನಡುಗುವ ದನಿಯಿಂದ ಆಯಿಯ ಹತ್ತಿರ ದೂರು ಹೇಳಿದ್ದೆವು. ಆಕೆ ಅಣ್ಣನಿಗೆ ಗದರಿದ ಹಾಗೆ ಮಾಡಿ, “ಹೋಗಲಿ ಬಿಡಿ ಮಕ್ಕಳೇ’ ಎಂದು ನಮಗೇ ಸಮಾಧಾನ ಹೇಳುತ್ತಿದ್ದಳು. ಅದೇ ಹೊತ್ತಿಗೆ ಅಣ್ಣ ಬಾಂಬ್ ಸಿಡಿಸಿಬಿಟ್ಟ. “ಇದರಲ್ಲಿ ನನ್ನದೇನೂ ತಪ್ಪಿಲ್ಲ. ಆಯಿಯೇ ನನಗೆ ಹೀಗೆ ತೆಗೆಯುವಂತೆ ಹೇಳಿದ್ದು. ದುಡ್ಡು ತೆಗೆದು ದೀಪ ಹಚ್ಚುವ ಚಿಮಣಿ ಎಣ್ಣೆ ತರಲು ಹೇಳಿ¨ªಾಳೆ’ ನಮಗೆ ನಿಂತ ನೆಲವೇ ಕುಸಿದ ಅನುಭವ. ತಾನು ಸಿಕ್ಕಿಬಿದ್ದು, ಈಗ ಸುಳ್ಳು ಹೇಳುತ್ತಾನೆ ಎಂದು ಜಗಳ ಮಾಡಿದರೂ ಆಯಿ ಮರುಮಾತಾಡದೇ ಸುಮ್ಮನಿದ್ದಳು. ಶಿಲೆಯಂತೆ ನಿಂತ ಆಕೆಯ ಭಂಗಿ ಅದು ಸತ್ಯ ಎಂಬುದನ್ನು ಸಾರಿ ಹೇಳುತ್ತಿತ್ತು. ನಾವು ಮೂವರೂ ಜೋರಾಗಿ ಅಳುತ್ತಲೇ, “ಹೀಗೆ ಇಬ್ಬರೂ ಸೇರಿ ಮೋಸ ಮಾಡಬಾರದಿತ್ತು’ ಎಂದು ಕೂಗಾಡಿದೆವು. ಆಯಿ ಒಂದೆರಡು ನಿಮಿಷ ಏನೂ ಮಾತಾಡಲಿಲ್ಲ. ಮುಖ ಮಾತ್ರ ಕೆಂಪಾಗಿತ್ತು, ಸಣ್ಣದಾಗಿತ್ತು.
ಕಡೆಗೆ ನಿಧಾನವಾಗಿಯೇ, “ಹೌದು, ಅಣ್ಣ ಹೇಳಿದಂತೆ ಎಲ್ಲವೂ ನಿಜವೇ. ನೀವು ಹೇಳುವುದು ಸರಿ. ನಾನು ಹೀಗೆ ಮಾಡಬಾರದಿತ್ತು. ಆದರೆ ಏನು ಮಾಡಲಿ? ನೀವು ನಾಲ್ಕು ಮಕ್ಕಳು. ಪುಸ್ತಕ, ಶಾಲೆಗೆ ಸ್ಕಾಲರ್‌ಶಿಪ್ ಬರುತ್ತದೆ, ಆ ಖರ್ಚಿಲ್ಲ ನಿಜ. ಆದರೆ ಹೊಟ್ಟೆಗೆ ಬಟ್ಟೆಗೆ ಬೇಕಲ್ಲವೇ? ನಿಮ್ಮ ಅಪ್ಪನ ಆದಾಯದಲ್ಲಿ ಹೇಗೋ ಎಲ್ಲವನ್ನೂ ತೂಗಿಸಲು ಹರಸಾಹಸ ಮಾಡಿದರೂ ತಿಂಗಳ ಕೊನೆಯಲ್ಲಿ ಕೈ ಖಾಲಿಯೇ. ಆಗ ದಿನನಿತ್ಯದ ಖರ್ಚು ಪೂರೈಸಲು ಕೆಲವು ಬಾರಿ ಅಣ್ಣನಿಂದ ಇದರಿಂದ ದುಡ್ಡು ತೆಗೆಸಿದ್ದು ನಿಜ. ನನಗಂತೂ ಇದು ಆಪದ್ಧನವೇ! ನಾಳೆಗಾಗಿ ಕೂಡಿಡುವುದು ಸರಿ, ಆದರೆ ಇವತ್ತನ್ನು ಕಳೆಯುವುದು ಹೇಗೆ ಮಕ್ಕಳೇ? ನಿಮ್ಮ ದುಡ್ಡಲ್ಲಿ ಚಾಪುಡಿ, ಬೇಳೆ, ಸಕ್ಕರೆ ಇನ್ನೂ ಏನೇನೋ ತಂದಿದ್ದೇನೆ. ನೀವು ಪ್ರತೀ ಬಾರಿ ಆತುರಾತುರವಾಗಿ ದುಡ್ಡು ಹಾಕಿ ಎಣಿಸುತ್ತಿದ್ದದ್ದು ಕಂಡಾಗ ಮನಸ್ಸು ಚುರ್ ಎನ್ನುತ್ತಿತ್ತು. ಆದರೆ ಕೈ ಖಾಲಿಯಾದಾಗ ಅಸಹಾಯಕತೆ. ಯಾರಲ್ಲಾ ಸಾಲಸೋಲ ಮಾಡುವ ಬದಲು ಮಕ್ಕಳ ದುಡ್ಡು ಅವರಿಗೇ ಉಪಯೋಗಿಸುವುದರಲ್ಲಿ ತಪ್ಪಿಲ್ಲ ಎನಿಸಿ ಧೈರ್ಯ ತಂದುಕೊಂಡೆ. ನಿಮ್ಮ ಮನಸ್ಸಿಗೆ ತುಂಬಾ ನೋವಾಗಿದೆ. ಆದರೇನು ಮಾಡಲಿ, ಮರ್ಯಾದೆಯಿಂದ ಬದುಕಲು ಪ್ರಯತ್ನಿಸುವ ನಮ್ಮ ಸ್ಥಿತಿ ಇಂಥದ್ದು. ಇಷ್ಟಕ್ಕೆಲ್ಲಾ ಕಾರಣವಾದ ಈ ಮಡಕೆಯನ್ನು ಒಡೆದು ದುಡ್ಡು ಹಂಚಿಕೊಳ್ಳಿ. ಅದು ಅಲ್ಲಿರುವುದೇ ಬೇಡ. ನಾಳೆ ನಾಳೆಗಿರಲಿ, ಇವತ್ತು ಒಂದಷ್ಟು ಹೊತ್ತಾದರೂ ನಿಮ್ಮ ಆಸೆ ನೆರವೇರಲಿ’ ಎಂದುಬಿಟ್ಟಳು. ಆಯಿಯ ಸೀರೆಯ ಬಣ್ಣ ಮಾಸಿತ್ತು. ಕೈಗೆ ದೋಸೆ ಹಿಟ್ಟು ಅಂಟಿತ್ತು. ಬೆವರಿಗೆ ಹಣೆಯ ಕುಂಕುಮ ಕರಗಿ ಹರಿಯುತ್ತಿತ್ತು. ಹಾಗೇ ಕಣ್ಣಲ್ಲಿ ನೀರೂ!
ಆಯಿಯ ಮಾತುಗಳು ಪೂರ್ತಿ ಅರ್ಥವಾಗುವ ವಯಸ್ಸು ನಮ್ಮದಲ್ಲ. ಆದರೂ ದುಡ್ಡು ಹೋದ ಸಂಕಟದ ಜತೆ ಆಯಿಯ ಕಂದಿದ ಮುಖ ದುಃಖ ಮೂಡಿಸಿತ್ತು. ಆಯಿಯ ಒತ್ತಾಯದಂತೆ ಫಟಾರ್ ಎಂದು ಮಡಕೆ ಒಡೆದು ಇದ್ದಷ್ಟು ದುಡ್ಡು ಹಂಚಿಕೊಂಡು ಆಕೆಗೂ ಪಾಲು ಕೊಟ್ಟೆವು. ಮಡಕೆ ಮುರಿದು ಚೂರಾಗಿತ್ತು ಥೇಟ್ ಆಯಿಯ ಮತ್ತು ನಮ್ಮ ಮನಸ್ಸಿನಂತೆ. ಅದಾದ ನಂತರ ನಾವು ದುಡ್ಡು ಕೂಡಿಡುವುದನ್ನೇ ಬಿಟ್ಟೆವು.
ಇದು ನಮ್ಮ ಪಿಗ್ಗಿ ಬ್ಯಾಂಕ್ ಕತೆ- ಎಂದು ಅಮ್ಮ ತನ್ನ “ಚಿಲ್ಲರೆ’ ನೆನಪುಗಳನ್ನು ಹಂಚಿಕೊಂಡಳು. ಮಕ್ಕಳಿಂದ “ಹುಂ, ಊಹುಂ’ ಯಾವುದೂ ಇಲ್ಲ, ಬರೀ ಸೊರ್ ಸೊರ್ ಸದ್ದು. ನೋಟಿನ ಭರಾಟೆಯಲ್ಲೂ ಚಿಲ್ಲರೆ ನೆನಪು ಎಲ್ಲರನ್ನೂ ಕಂಗೆಡಿಸಿದ್ದು ಸತ್ಯ. ಒಂದೂ ಮಾತಿಲ್ಲದೇ ಮಕ್ಕಳು ತಮ್ಮ ಪಿಗ್ಗಿ ಬ್ಯಾಂಕ್ ನನ್ನ ಕೈಗಿತ್ತು ಅಮ್ಮನ ತೊಡೆಯ ಮೇಲೆ ಮಲಗಿದರು. ನನಗೆ ಆ ಬಾಕ್ಸ್‌ನಲ್ಲಿದ್ದ ಚಿಲ್ಲರೆಯ ಝಣ ಝಣದೊಂದಿಗೆ ಆಯಿಯ ಮುಖ ಕಣ್ಮುಂದೆ ಕಾಡುತ್ತಿತ್ತು.
ಕೆ. ಎಸ್. ಚೈತ್ರಾ