Advertisement
ಮುದ್ದಿನ ಮಗಳೇ,ಹೇಗಿದ್ದೀ? ಹೇಗಿದೆ ಹೊಸ ಸಂಸಾರ? ನೀನು ಮತ್ತು ಅಳಿಯ ಸದಾ ಕ್ಷೇಮವಾಗಿರಲಿ ಎಂದು ನಾನು ನಿತ್ಯವೂ ದೇವರಲ್ಲಿ ಪ್ರಾರ್ಥಿಸುತ್ತೇನೆ.
Related Articles
Advertisement
ನನಗೆ ಮೂಳೆ ನೋವು. ಡಾಕ್ಟರ್‌ಗೆ ತೋರಿಸಿದಾಗ, ಸಂಧಿವಾತ ಅಂತಂದರು. ಆಗ ನನಗೆ ನಿನ್ನ ಅಜ್ಜಿ ಹೇಳಿದ್ದ ಮನೆಔಷಧಿ ನೆನಪಿಗೆ ಬಂತು. ಒಂದು ಕಪ್ ಬಿಸಿನೀರಿಗೆ 1 ಟೀ ಚಮಚ ಜೇನುತುಪ್ಪ ಹಾಗೂ ಚಕ್ಕೆಪುಡಿ ಸೇರಿಸಿ ಕುಡಿದೆ. ಮೂಳೇನೋವೇ ಮಾಯ. ನಿನಗೂ ಮುಂದೆ ಹೀಗೆಯೇ ಆದ್ರೆ, ಇದನ್ನೇ ಮಾಡು.
ಇದು ಮಳೆಗಾಲ ಬೇರೆ. ಯಾವಾಗ ಫೋನ್ ಮಾಡಿದ್ರೂ, ಕೆಮ್ಮು- ನೆಗಡಿ ಅಂತಿರುತ್ತೀಯ. ಒಂದು ಟೇಬಲ್ ಚಮಚ ಜೇನು ತುಪ್ಪಕ್ಕೆ ಕಾಲು ಚಮಚ ಚಕ್ಕೆ ಪುಡಿ ಹಾಕಿ 3 ದಿನ ತಗೊಂಡು ನೋಡು. ಕೆಮ್ಮು- ನೆಗಡಿ ಎಲ್ಲೋ ಹೊರಟು ಹೋಗಿರುತ್ತೆ. ಇನ್ನು ನಿನ್ನ ಗಂಡನಿಗೆ ಹೇಳು, ನೀನು ತವರು ಮನೆಗೆ ಬಂದಾಗ, ಅವನು ಹೋಟೆಲ್‌ಗೆ ಊಟಕ್ಕೆ ಹೋಗೋದು ಬೇಡ ಅಂತ. ಅಕಸ್ಮಾತ ತಿಂದೂ ಹೊಟ್ಟೆ ತೊಳೆಸುತ್ತಿದ್ದರೆ ಅಥವಾ ಅಜೀರ್ಣವಾದರೆ, ಅದಕ್ಕೂ ಒಂದು ಉಪಾಯವಿದೆ. ಒಂದು ಟೀ ಚಮಚ ಜೇನು ತುಪ್ಪಕ್ಕೆ ಕಾಲು ಚಮಚ ಚಕ್ಕೆಪುಡಿ ಸೇರಿಸಿ, ಒಂದು ಕಪ್ ನೀರಿನಲ್ಲಿ ಶುಂಠಿಯ ತುಣುಕು ಸೇರಿಸಿ, ಅದನ್ನು ಕುಡಿಯಬೇಕು. ಹಾಗೆಯೇ ಎರಡು ಚಮಚ ಚಕ್ಕೆ ಪುಡಿ ಜೊತೆ ಒಂದು ಚಮಚ ಜೇನು ತುಪ್ಪ ಹಾಕಿ, ಬಿಸಿನೀರಿನಲ್ಲಿ ಕುಡಿದರೂ ಸಮಸ್ಯೆಗೆ ಪರಿಹಾರ ಸಿಗುತ್ತೆ. ನಿತ್ಯವೂ ಇದನ್ನು ತೆಗೆದುಕೊಂಡರೆ, ವೈರಲ್ ಫೀವರ್ ಬರುವುದೇ ಇಲ್ಲ.
ಮಗಳೇ ನಿನ್ನ ಮೊಡವೆಗಳು ಹೇಗಿವೆ? ಮದುವೆ ಹೊತ್ತಿನಲ್ಲಿ ಅದೇ ತಾನೆ ನಿನಗೆ ಚಿಂತೆಯಾಗಿ ಕಾಡಿದ್ದು? ಮೇಲೆ ಹೇಳಿದಂತೆ ಮೂರು ಚಮಚ ಜೇನು ತುಪ್ಪ, ಒಂದು ಚಮಚ ಚಕ್ಕೆ ಪುಡಿ ಸೇರಿಸಿ ರಾತ್ರಿ ಮಲಗುವ ಮುಂಚೆ ಮುಖಕ್ಕೆ ಹಚ್ಚಿ ಬೆಳಗ್ಗೆ ಮುಖ ತೊಳೆಯಬೇಕು. ಒಂದೆರಡು ವಾರಗಳೊಳಗೆ ಮೊಡವೆಗಳು ಮಾಯವಾಗುತ್ತವಂತೆ. ನನಗೆ ಇದನ್ನು ಪಕ್ಕದ ಮನೆಯ ಸಾವಿತ್ರಿ ಹೇಳಿದಳು.
ಜ್ವರ ಬಂದಾಗ ಆದಷ್ಟು ಬಿಸಿನೀರನ್ನೇ ಕುಡೀಬೇಕು. ಜೇನು ತುಪ್ಪದ ಜೊತೆಗೆ ನಿಂಬೆ ಹಣ್ಣಿನ ರಸ ಬೆರೆಸಿ ಕುಡಿದರೆ ಕಫ, ಕೆಮ್ಮಿನೊಂದಿಗೆ ಹೊರಗೆ ಬರುತ್ತೆ. ಇದನ್ನು ದಿವಸಕ್ಕೆ 2-3 ಸಲ ಮಾಡಬೇಕು. ನೀನು ಯಾವಾಗಲೂ ಐಸ್‌ಕ್ರೀಮ್ ತಿಂದು ಗಂಟಲು ನೋವು ಅಂತಲೇ ಇರಿ¤àಯ. ಅರ್ಧ ಚಮಚ ಮೆಣಸಿನಪುಡಿ, ತಲಾ ಒಂದೊಂದು ಚಮಚದಂತೆ ಚಕ್ಕೆಪುಡಿ, ಶುಂಠಿ ಪುಡಿ ಮತ್ತು ಜೇನುತುಪ್ಪವನ್ನು ಒಂದು ಲೋಟದಲ್ಲಿ ಬೆರೆಸಿ, ದಿನಕ್ಕೆರಡು ಬಾರಿ ಸೇವಿಸಬೇಕು. ಬಾಯಿ ವಾಸನೆ ಬಂದರೆ, ಜೇನುತುಪ್ಪ ಹಾಗೂ ಚಕ್ಕೆಪುಡಿಯನ್ನು ನೀರಿನಲ್ಲಿ ಸೇರಿಸಿ, ಬಾಯಿ ಮುಕ್ಕಳಿಸಿದರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಪುಟ್ಟಾ… ಸುಖವಾದ ಆರೋಗ್ಯಯುತ ಸಂಸಾರಕ್ಕೆ ಇವು ಅತ್ಯಮೂಲ್ಯ ಸಲಹೆ. ಮರೆಯದೇ ಪಾಲಿಸು. ಗಂಡನ ಆರೋಗ್ಯವನ್ನೂ ಚೆನ್ನಾಗಿ ನೋಡಿಕೋ.
ಇತಿ ನಿನ್ನ ಅಮ್ಮಾ
ಹೀರಾ ರಮಾನಂದ್