Advertisement

ಅಮ್ಮನ‌ ದಶಾವತಾರ!

05:39 AM May 27, 2020 | Lakshmi GovindaRaj |

ಆರನೇ ತರಗತಿ ಓದುವ ಮಗಳಿಂದ ನನಗೊಂದು ಸರ್ಪ್ರೈಸ್‌ ಕಾದಿತ್ತು. “ಅಮ್ಮನ ದಶಾವತಾರ’ ಅಂತೊಂದು ಪುಟ್ಟ ಪ್ರಬಂಧ ಬರೆದು ತಂದಿದ್ದಳು ಪುಟ್ಟಿ…

Advertisement

ಲಾಕ್‌ಡೌನ್‌ ಶುರುವಾದಾ ಗಿನಿಂದ, ಪ್ರತಿನಿತ್ಯ ಮಕ್ಕಳಿಗೆ ಪುರಾಣ ಕಥೆ ಹೇಳುವ ಪರಿಪಾಠ ರೂಢಿಸಿಕೊಂಡೆ. ಮೊಬೈಲು  ಮುಟ್ಟಬೇಡಿ, ಕಾರ್ಟೂನ್‌ ನೋಡಬೇಡಿ ಅಂತ ಕಟ್ಟಪ್ಪಣೆ ಹಾಕಿದ ಕೂಡಲೇ ಮಕ್ಕಳು, “ಹಂಗಾದ್ರೆ ಕಥೆ ಹೇಳು’  ಅಂತ ದುಂಬಾಲು ಬೀಳುತ್ತಿದ್ದವು. ದಿನಾ ಒಂದೊಂದು ಹೇಳಬೇಕು ಅಂತಾದರೆ, ಪುರಾಣದ ಕಥೆ ಹೇಳುವುದೇ ಸೈ ಅನ್ನಿಸಿತು.

ಮೊಗೆದಷ್ಟೂ ಮುಗಿಯದ  ಕಥೆಗಳು ಪುರಾಣದಲ್ಲಿವೆ ಅನ್ನೋದು ಒಂದು ಕಾರಣವಾದರೆ, ಹಂಗಾದರೂ ಮಕ್ಕಳಿಗೆ ಪುರಾಣದ ಬಗ್ಗೆ ಅರಿವು  ಮೂಡಿಸೋಣ ಅನ್ನೋದು ಇನ್ನೊಂದು ಕಾರಣ. ಈ ಕಥಾವಳಿ ಶುರುವಾಗಿದ್ದು ವಿಷ್ಣುವಿನ “ದಶಾವತಾರ’ದಿಂದ. ಲೋಕಕಲ್ಯಾಣಕ್ಕಾಗಿ ಮಹಾವಿಷ್ಣುವು ಭೂಮಿ ಮೇಲೆ ಹತ್ತು ಅವತಾರಗಳನ್ನೆತ್ತಿದ್ದು,  ಆಗ ನಡೆದ ಕಥೆ-ಉಪಕಥೆಗಳನ್ನೆಲ್ಲ ಹೇಳಿದೆ.

ಮಾರನೇದಿನ, ಆರನೇ ತರಗತಿ ಓದುವ ಮಗಳಿಂದ ನನಗೊಂದು ಸರ್ಪ್ರೈಸ್‌ ಕಾದಿತ್ತು. “ಅಮ್ಮನ ದಶಾವತಾರ’ ಅಂತೊಂದು ಪುಟ್ಟ ಪ್ರಬಂಧ ಬರೆದು ತಂದಿದ್ದಳು ಪುಟ್ಟಿ. ಅದರಲ್ಲಿ, ಲಾಕ್‌ಡೌನ್‌ ಸಮಯದಲ್ಲಿ ನೀನು ಕೂಡಾ  ಹತ್ತು ಅವತಾರ ತಾಳಿ, ಮನೆಯವರಿಗೆಲ್ಲ ಸಹಾಯ ಮಾಡಿದ್ದೀಯ. ಅದಕ್ಕಾಗಿ ಥಾಂಕ್ಸ್‌ ಅಮ್ಮ, ಅಂತ ಬರೆದಿದ್ದಳು. ನಾನೆಲ್ಲಿ ಅವತಾರ ತಾಳಿದೆ ಅಂತ ಕುತೂಹಲದಲ್ಲಿ ಪುಟ್ಟಿ ಬರೆದಿದ್ದನ್ನು ಓದಿದೆ.

1 ಅಡುಗೆಯವಳು: ಈಗ ನಾವೆಲ್ಲರೂ ಮನೆಯಲ್ಲೇ ಇದ್ದೀವಿ. ಹೊತ್ತು ಹೊತ್ತಿಗೆ ಬಿಸಿ ಬಿಸಿ ಊಟ, ತಿಂಡಿ, ಹಾಲು, ಅಪ್ಪನಿಗೆ  ಆಗಾಗ ಟೀ ಮಾಡಿ ಕೊಡುತ್ತಾ, ಅಡುಗೆಯವಳಾಗಿ ನಮ್ಮನ್ನು ಸಲಹುತ್ತಿದ್ದೀಯ. ಸಂಜೆ ಹೊತ್ತಿಗೆ ಬಾಯಿ ಚಪಲ  ಅಂತ ಪೀಡಿಸಿದಾಗ, ದಿನಕ್ಕೊಂದು ಸ್ನಾಕ್ಸ್‌ ಕೂಡಾ ಮಾಡಿ ಕೊಡುತ್ತೀಯಾ. ಥ್ಯಾಂಕ್ಸ್‌ ಹೇಳದೆ ಹೇಗಿರಲಿ?

Advertisement

2 ಮನೆ ಕೆಲಸದಾಕೆ: ಕೆಲಸದವಳು ಬಾರದೇ ಇರುವುದರಿಂದ, ಅವಳು ಮಾಡುತ್ತಿದ್ದ ಕೆಲಸವೂ ಈಗ ನಿನ್ನ ಪಾಲಿಗೆ ಬಂದಿದೆ. ಮನೆಯ ಸ್ವತ್ಛತೆ, ಪಾತ್ರೆ ತೊಳೆಯುವುದು, ಬಾತ್‌ರೂಮ್‌ ಸ್ವತ್ಛತೆಯನ್ನೆಲ್ಲ ಗೊಣಗದೆ ಮಾಡಿದ್ದೀಯ. ನಾನು,  ತಮ್ಮ ಆಟವಾಡುತ್ತ, ಮನೆಯನ್ನು ಅಸ್ತವ್ಯಸ್ತ ಮಾಡಿದಾಗಲೂ ಗದರಲಿಲ್ಲ. ಇಷ್ಟೊಂದು ಸಹನೆ ನಿನಗೆ ಬಂದಿದ್ದು ಎಲ್ಲಿಂದ?

3 ಕ್ಷೌರಿಕ: ಮೊನ್ನೆ ಅಪ್ಪ ಉದ್ದ ಕೂದಲಿನ ಸ್ವಾಮೀಜಿ ಥರ ಕಾಣುತ್ತಿದ್ದಾಗ, “ನಾನೇ ಹೇರ್‌ ಕಟ್‌ ಮಾಡೋಕೆ  ಟ್ರೈ ಮಾಡ್ತೀನಿ’ ಅಂತ ಅಪ್ಪನ ಕೂದಲಿಗೊಂದು ಗತಿ ಕಾಣಿಸಿ, ಬಾರ್ಬರ್‌ ಕೆಲಸಾನೂ ಮಾಡಿದೆ. ಅಗತ್ಯ ಬಿದ್ದರೆ ನಾನು  ಎಲ್ಲದಕ್ಕೂ ಸೈ ಅನ್ನುವ ಆತ್ಮವಿಶ್ವಾಸಕ್ಕೆ ನನ್ನದೊಂದು ಸಲ್ಯೂಟ…!

4 ದರ್ಜಿ: ಯಾವತ್ತೋ ಕಲಿತ ಹೊಲಿಗೆಯನ್ನು ಮತ್ತೆ ನೆನಪಿಸಿಕೊಂಡು ಅಜ್ಜಿಗೆ ಬ್ಲೌಸ್‌, ಅತ್ತೆಯ ಸೀರೆಗೆ ಫಾಲ್ಸ… ಹೊಲಿದು, “ಪರವಾಗಿಲ್ಲ ಎಂದೋ ಕಲಿತಿದ್ದು, ಈಗಲೂ ನೆನಪಿದೆ’ ಅಂತ, ಟೈಲರ್‌ನ ಅವತಾರವನ್ನೂ ಎತ್ತಿಬಿಟ್ಟೆ. ನಂಗೂ  ಒಂದು ಉದ್ದ ಲಂಗ ಹೊಲಿದುಕೊಡ್ತೀನಿ ಅಂದಿದ್ದೀಯ, ಮರೀಬೇಡ…

5 ವೈದ್ಯೆ: ಲಾಕ್‌ಡೌನ್‌ನ ಮೊದಲ ವಾರದಲ್ಲಿ, ತಮ್ಮನಿಗೆ ಹೊಟ್ಟೆನೋವು ಕಾಡಿದಾಗ ನಮಗೆಲ್ಲ ಎಷ್ಟು ಹೆದರಿಕೆಯಾಗಿತ್ತು ಗೊತ್ತಾ? ಆಸ್ಪತ್ರೆಗೆ ಹೇಗೆ ಕರೆದುಕೊಂಡು  ಹೋಗೋದು ಅಂತ ಅಪ್ಪ ಟೆನ್ಶನ್‌ ಮಾಡಿಕೊಂಡಾಗ, “ಏನಿಲ್ಲ, ಗ್ಯಾಸ್‌ ಆಗಿದೆ ಅಷ್ಟೇ’ ಅನ್ನುತ್ತಾ, ಕಷಾಯ ಮಾಡಿ ಕುಡಿಸಿ ಅವನನ್ನು ಸರಿ ಮಾಡಿದೆ.  ಹೌದಮ್ಮಾ, ನೀನು ಯಾವ ವೈದ್ಯರಿಗೂ ಕಮ್ಮಿಇಲ್ಲ!

6 ಶಿಕ್ಷಕಿ: ಶಾಲೆ ಇಲ್ಲ, ಪರೀಕ್ಷೆನೂ ಇಲ್ಲ ಅಂತ ಖುಷಿಯಿಂದ ಕುಣಿಯುತ್ತಿದ್ದ ನನ್ನನ್ನೂ, ತಮ್ಮನನ್ನೂ ದಿನಾ ಸಂಜೆ ಕೂರಿಸಿ ಪಾಠ ಹೇಳ್ತಿಯಲ್ಲ, ನೀನೇನು ಟೀಚರ್ರಾ? ಅಲ್ಲದಿದ್ದರೇನಂತೆ, ನಮ್ಮ ಮಿಸ್‌ಗಿಂತಲೂ ಸಮಾಧಾನವಾಗಿ ಪಾಠ  ಮಾಡೋ ನೀನೇ ನನ್ನ ಬೆಸ್ಟ್ ಟೀಚರ್‌!

7 ಆಪ್ತ ಸಮಾಲೋಚಕಿ: ಊರಿಂದ ಅಜ್ಜಿ ಫೋನ್‌ ಮಾಡಿ ಕೊರೊನಾ ಬಗ್ಗೆ ಹೆದರಿಕೊಂಡಾಗ, ಪಕ್ಕದ ಮನೆ ಆಂಟಿ ಅವರ ಮಗನ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಚಡಪಡಿಸುವಾಗ, ಕೆಲಸದಾಕೆ ಫೋನ್‌ ಮಾಡಿ ಕಷ್ಟ ತೋಡಿಕೊಂಡಾಗ  ಅವರಿಗೆಲ್ಲ ಸಮಾಧಾನ ಮಾಡಿ, ಆಪ್ತ ಸಮಾಲೋಚಕಿ ಆಗಿಬಿಟ್ಟೆ! ನಿಂಗೆ ಹೆದರಿಕೆ, ಟೆನ್ಶನ್‌ ಆಗೋದೇ ಇಲ್ವಾ? ನಿಂಗೆ ಹೆದ್ರಿಕೆ ಆದಾಗ ಯಾರು ಸಮಾಧಾನ ಮಾಡ್ತಾರೆ?

8 ಸ್ನೇಹಿತೆ: ಮನೆಯಿಂದ ಹೊರಗೆ ಹೋಗೋಕೆ ಆಗದೆ, ಫ್ರೆಂಡ್ಸ್  ಗಳನ್ನು ಮೀಟ್‌ ಮಾಡೋಕೆ ಆಗದೆ ಬೇಜಾರಾದಾಗೆಲ್ಲ ನಂಗೆ ನೀನೇ ಸ್ನೇಹಿತೆ ಆಗಿಬಿಟ್ಟೆ. ದಿನಾ ನಿನ್ನ ಬಳಿ ಏನೇನೋ ತಲೆ ಹರಟೆ  ಮಾಡಿ, ನಿನ್ನ ಕೆಲಸಕ್ಕೆ ಡಿಸ್ಟರ್ಬ್ ಮಾಡ್ತಾ ಇದ್ದೆ ಅದಕ್ಕೆ ಸಾರೀ…

9 ಅಮ್ಮ: ಅಮ್ಮಾ, ಅಮ್ಮಾ, ಅಮ್ಮಾ… ದಿನದಲ್ಲಿ ನಾನೂ,  ತಮ್ಮನೂ ಅದೆಷ್ಟು ಬಾರಿ ಹೀಗೆ ನಿನ್ನ ಕರೆದಿಲ್ಲ. ಕೆಲವೊಮ್ಮೆ ಯಾವುದೋ ಮುಖ್ಯವಾದ ಮೀಟಿಂಗ್‌ನಲ್ಲಿ ಇರುವಾಗ, ನಾವಿಬ್ಬರೂ ತಾರಕ ಸ್ವರದಲ್ಲಿ “ಅಮ್ಮಾ…’ ಅಂತ ಕೂಗುತ್ತಿದ್ದೆವು. ಅದೇ ಅಪ್ಪನನ್ನು ಹಾಗೆ ಡಿಸ್ಟರ್ಬ್   ಮಾಡಿದರೆ, ಪೆಟ್ಟು ಬಿತ್ತುಅಂತಲೇ ಅರ್ಥ. ಆದ್ರೆ, ನೀನು ಒಂದು ದಿನವೂ ನಮ್ಮ ಮೇಲೆ ಕೋಪಿಸಿಕೊಂಡಿಲ್ಲ. ಅದಕ್ಕೇ ನೀನಂದ್ರೆ ನಂಗೆ ಮುದ್ದು.

10 ಉದ್ಯೋಗಸ್ಥೆ (ಎಂಜಿನಿಯರ್‌): ಇಷ್ಟೆಲ್ಲಾ ಕೆಲಸದ ಮಧ್ಯೆ ನಿನ್ನ ಆಫೀಸ್‌ ಕೆಲಸ! ಬೆಳಗ್ಗೆ, ಮಧ್ಯಾಹ್ನ, ಸಂಜೆ ಆμàಸಿಂದ ಕಾಲ್‌ ಮೇಲೆ ಕಾಲ…. ಕೆಲವೊಮ್ಮೆ ರಾತ್ರಿಯೂ. ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವುದಕ್ಕಿಂತ ಸ್ಪೀಡಾಗಿ  ಲ್ಯಾಪ್‌ಟಾಪ್‌ ಬಟನ್‌ ಒತ್ತಿ ಕೆಲಸ ಮಾಡ್ತಿಯಲ್ಲ ಅಮ್ಮ, ಅದು ಹೇಗೆ ನಿಂಗೆ ಎಲ್ಲವೂ ಸಾಧ್ಯ?

*****

ಅರೆ, ಚೋಟುದ್ದದ ಮಗಳು ಇಷ್ಟೆಲ್ಲಾ ಯೋಚಿಸಿ ಬಿಟ್ಟಳಾ ಅಂತ ಖುಷಿಯಿಂದ ಮನೆಯವರ ಕಡೆ  ಡಿದರೆ, “ಹೆಂಗಿದೆ ನನ್ನ ಪ್ರಬಂಧ’ ಅನ್ನುವಂತೆ ಕಿರು ನಕ್ಕರು. ಒಹೋ, ಇದು ಅಪ್ಪ- ಮಗಳ ಪ್ರಬಂಧ ಅಂತ ಅರಿವಾಗಿ, ನಾ ಮಾಡುವ ಕೆಲಸ ಸಾರ್ಥಕವಾಯ್ತು ಅಂತ ಕಣ್ಣು ತುಂಬಿಕೊಂಡೆ.

* ವಿದ್ಯಾಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next