ಗಾಝಿಯಾಬಾದ್: ಇಲ್ಲಿನ ಇಂದಿರಾಪುರಂನಲ್ಲಿ ತನ್ನ ಇಬ್ಬರು ಮಕ್ಕಳನ್ನು ಕೊಂದು ಬಳಿಕ ಪತ್ನಿ ಹಾಗೂ ಕೆಲಸದ ಮಹಿಳೆಯ ಜೊತೆ ತಾನು ವಾಸವಿದ್ದ ಫ್ಲ್ಯಾಟ್ ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ ಉದ್ಯಮಿ ಗುಲ್ಷನ್ ವಾಸುದೇವ ತಾನು ಸಾಯುವುದಕ್ಕೂ ಮೊದಲು ತನ್ನ ಗೆಳೆಯರೊಬ್ಬರಿಗೆ ಕರೆ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.
ಮಂಗಳವಾರದಂದು ಈ ಘಟನೆ ನಡೆದಿದ್ದು, ಇದರಲ್ಲಿ ಶಾಕಿಂಗ್ ಎಂದರೆ ತನ್ನ ಗೆಳೆಯನಿಗೆ ವಿಡಿಯೋ ಕಾಲ್ ಮಾಡಿದ್ದ ಗುಲ್ಷನ್ ವಾಸುದೇವ ತಾನು ಕೊಂದ ತನ್ನಿಬ್ಬರು ಮಕ್ಕಳ ಮೃತದೇಹಗಳನ್ನು ತೋರಿಸಿದ್ದಾನೆ ಎಂಬ ವಿಚಾರವೂ ಬೆಳಕಿಗೆ ಬಂದಿದೆ.
ಜಿಲ್ ಮಿಲ್ ಎಂಬಲ್ಲಿನ ನಿವಾಸಿಯಾಗಿರುವ 70 ವರ್ಷದ ರಮೇಶ್ ಅರೋರಾ ಅವರೇ ಗುಲ್ಷನ್ ಅವರು ವಿಡಿಯೋ ಕಾಲ್ ಮಾಡಿದ ಗೆಳೆಯರಾಗಿದ್ದಾರೆ. ಅರೋರಾ ಅವರಿಗೆ ಮಂಗಳವಾರ ಬೆಳಿಗ್ಗೆ 3.30ಕ್ಕೆ ಗುಲ್ಷನ್ ಅವರಿಂದ ‘ಜೈ ಮಾತಾ ದೀ’ ಎಂಬ ಮೆಸೇಜ್ ಬಂದಿದೆ. ಆ ಹೊತ್ತಿನಲ್ಲಿ ಬಂದ ಮೆಸೇಜ್ ನೋಡಿ ಗಾಬರಿಗೊಂದ ಅರೋರಾ ಅವರು ತಕ್ಷಣ ಗುಲ್ಷನ್ ಮೊಬೈಲಿಗೆ ಕರೆ ಮಾಡಿದ್ದಾರೆ. ಆದರೆ ಆತ ಆನ್ ಲೈನ್ ನಲ್ಲಿದ್ದರೂ ತನ್ನ ಕರೆಗೆ ಸ್ಪಂದಿಸದೇ ಇದ್ದಿದ್ದು ಅರೋರಾ ಅವರನ್ನು ಇನ್ನಷ್ಟು ಗಾಬರಿಗೊಳಿಸಿತ್ತು.
ಬಳಿಕ ಅರೋರಾ ಅವರು 3.38ರ ಸುಮಾರಿಗೆ ವಿಡಿಯೋ ಕಾಲ್ ಮಾಡುತ್ತಾರೆ. ಆ ಸಂದರ್ಭದಲ್ಲಿ ಕರೆ ಸ್ವೀಕರಿಸಿದ ಗುಲ್ಷನ್ ಅವರು ತನ್ನಿಬ್ಬರು ಮಕ್ಕಳ ಮೃತದೇಹಗಳನ್ನು ತೋರಿಸುತ್ತಾರೆ ಮತ್ತು ಮನೆಯಲ್ಲಿದ್ದ ಬಟ್ಟೆಗಳು, ಆಹಾರ ಪದಾರ್ಥಗಳು ಮತ್ತು ಸಿಹಿ ತಿಂಡಿಗಳನ್ನು ಸೋಮವಾರ ರಾತ್ರಿಯೇ ಸೆಕ್ಯುರಿಟಿ ಗಾರ್ಡ್ ಗಳಿಗೆಲ್ಲಾ ಹಂಚಿರುವುದಾಗಿ ಗುಲ್ಷನ್ ತನ್ನ ಮಿತ್ರನಿಗೆ ನಾಲ್ಕುನಿಮಿಷಗಳ ಈ ಕರೆಯ ಅವಧಿಯಲ್ಲಿ ತಿಳಿಸುತ್ತಾರೆ.
ಹಣಕಾಸಿನ ವ್ಯವಹಾರ ಒಂದರಲ್ಲಿ ತಾನು ಸಿಲುಕಿಕೊಂಡಿರುವುದಾಗಿ ಅರೋರಾ ಅವರಿಗೆ ಕರೆ ಸಂದರ್ಭದಲ್ಲಿ ತಿಳಿಸಿದ್ದಾರೆ ಮಾತ್ರವಲ್ಲದೇ ತನ್ನ ಮನೆಯ ಗೋಡೆಯ ಮೇಲೆ ಬರೆದಿದ್ದ ಡೆತ್ ನೋಟ್ ಅನ್ನೂ ಸಹ ವಿಡಿಯೋ ಕಾಲ್ ಮೂಲಕ ಗುಲ್ಷನ್ ಗೆಳೆಯ ಅರೋರಾ ಅವರಿಗೆ ತೋರಿಸಿದ್ದಾರೆ.