Advertisement
ಅಮ್ಮಾ…ಈ ಪದದ ಅಗಾಧತೆ ಅರ್ಥವಾಗಬೇಕಾದ್ರೆ, ನಾವೂ ಅಮ್ಮನೇ ಆಗಬೇಕು. ಇಲ್ಲದಿದ್ದರೆ ಆ ಪಾತ್ರದ ಆಳ-ಅಗಲ ಅರಿತುಕೊಳ್ಳುವುದು ಕಷ್ಟ. ಇದು ನನ್ನ ಅನುಭವ. ಅಮ್ಮನನ್ನು ನಾನು ಕಿಂಚಿತ್ತೂ ಅರ್ಥ ಮಾಡಿಕೊಂಡಿಲ್ಲ ಅಂತ ನನಗೆ ಅನಿಸಿದ್ದು, ನನ್ನ ಒಡಲೊಳಗೆ ಚಿಗುರು ಮೂಡಿದಾಗಲೇ. ಅಮ್ಮ, ನಮ್ಮನ್ನೆಲ್ಲ ಯಾಕೆ ಅಷ್ಟೊಂದು ಪ್ರೀತಿ ಮಾಡ್ತಾಳೆ, ನಮ್ಮ ಚಿಕ್ಕಪುಟ್ಟ ಸಂಕಟಗಳೂ ಅವಳಿಗೆ ಹ್ಯಾಗೆ ತಿಳಿಯುತ್ತೆ ಅಂತ ಅರಿವಾಗಿದ್ದು, ಹೊಟ್ಟೆಯೊಳಗಿನ ಕಂದನ ಬೇಕು- ಬೇಡಗಳೆಲ್ಲ ನನಗೆ ಅರ್ಥವಾಗತೊಡಗಿದಾಗಲೇ.
ಮಗು ಹುಟ್ಟುವ ಮೊದಲೇ ನನ್ನ ಒಳಗೊಬ್ಬಳು ತಾಯಿ ಹುಟ್ಟಿದ್ದಳು. ಹೊಟ್ಟೆಯೊಳಗಿನ ಮಗುವಿಗಾಗಿ ನಾನು ಬದಲಾಗಿದ್ದೆ. ಮಗುವಿನ ಬೆಳವಣಿಗೆಗೆ ಪೂರಕವಾಗುವ ಪದಾರ್ಥಗಳನ್ನು ಇಷ್ಟವಿಲ್ಲದಿದ್ದರೂ ತಿನ್ನುತ್ತಿದ್ದೆ. ಇಷ್ಟಪಟ್ಟು ತಿನ್ನುವ ಕೆಲವನ್ನು ಮಗುವಿಗಾಗಿ ತ್ಯಜಿಸಿದ್ದೆ. ನಿಧಾನವಾಗಿ ನಡೆದಾಡುತ್ತಿದ್ದೆ. ಗಾಡಿಯಲ್ಲಿ ಕೂರುವಾಗ, ಕೆಲಸ ಮಾಡುವಾಗ ಮಗುವಿಗೆ ತೊಂದರೆಯಾದರೆ ಎಂದು ಭಯಪಡುತ್ತಿದ್ದೆ. ಒಟ್ಟಿನಲ್ಲಿ, ಗರ್ಭಿಣಿಯಾದಾಗ ನನ್ನ ಮೇಲೆ ನನಗೇ ವಿಪರೀತ ಕಾಳಜಿ ಮೂಡಿಬಿಟ್ಟಿತ್ತು. ಹೊಟ್ಟೆಯೊಳಗೆ ಮಗು ಸುತ್ತಮುತ್ತ ತಿರುಗುವಾಗ, ಕೈ-ಕಾಲು ಆಡಿಸುವಾಗಿನ ಅನುಭವವನ್ನು ಪದಗಳಲ್ಲಿ ವಿವರಿಸಲಾಗದು. ಆಗೊಮ್ಮೆ ಈಗೊಮ್ಮೆ ಕಾಲಿನಿಂದ ಮೆಲ್ಲನೆ ಒದೆಯುವುದು ಬೇರೆ. ಕಣ್ಣಿಗೆ ಕಾಣದ ಮಗುವಿನೊಂದಿಗೆ ನಾನು ಆಗಲೇ ಮಾತು ಶುರುಮಾಡಿದ್ದೆ. ಹೊಟ್ಟೆಯೊಳಗಿಂದಲೇ ಮಗು ಹೂnಂಗುಟ್ಟುತ್ತಿದ್ದೆ ಅಂತೆಲ್ಲಾ ಅನ್ನಿಸುತ್ತಿತ್ತು. ಸುಸ್ತು, ವಾಂತಿ, ವಾಕರಿಕೆ, ಅಸಹಾಯಕತೆಯ ನಡುವೆಯೂ ಹೆಣ್ಣು, ತಾಯ್ತನವನ್ನು ಅನುಭವಿಸುವುದು ಇದಕ್ಕೇ ಇರಬೇಕು.
Related Articles
ನಾನು ಹೀಗೆಲ್ಲಾ ತಾಯ್ತನವನ್ನು ಅನುಭವಿಸುತ್ತಿದ್ದರೆ, ಯಜಮಾನರು ಮಾತ್ರ ಸ್ವಲ್ಪ ಹೆದರಿದ್ದರು. ಹೆರಿಗೆಯ ದಿನ ಹತ್ತಿರ ಹತ್ತಿರ ಬರುತ್ತಿದ್ದಂತೆ ಮನೆ ಮಂದಿಯೆಲ್ಲ ನನ್ನ ಆರೈಕೆಗೆ ನಿಂತಿದ್ದರು. ಒಂದು ಜೀವ, ಎರಡಾಗುವ ದೈವಿಕ ಸಮಯವದು. ಎಷ್ಟು ಎಚ್ಚರದಲ್ಲಿದ್ದರೂ ಸಾಲದು ಎಂಬುದು ಹಿರಿಯರ ಮಾತು. ಅವರೆಲ್ಲರ ಗಾಬರಿಯನ್ನು ಹೆಚ್ಚಿಸುವಂತೆ ನನಗೆ ಅನಿರೀಕ್ಷಿತವಾಗಿ ನೋವು ಕಾಣಿಸಿಬಿಟ್ಟಿತು. ಮಧ್ಯಾಹ್ನ ಊಟದ ನಂತರ ಶುರುವಾದ ನೋವಿನ ಎಳೆ, ಬರುಬರುತ್ತಾ ಹೆಚ್ಚಾಯ್ತು. ಅಮ್ಮ, ತನಗೆ ಗೊತ್ತಿದ್ದ ಕೆಲವು ಗಿಡ ಮೂಲಿಕೆ ಔಷಧಗಳನ್ನು ಕುಡಿಸಿದಳು. “ಇದು ಹೆರಿಗೆ ನೋವಲ್ಲ. ಕಡಿಮೆಯಾಗುತ್ತೆ’ ಅನ್ನುವುದು ಆಕೆಯ ನಂಬಿಕೆ. ಆದರೆ, ನೋವು ಮಾತ್ರ ಹೆಚ್ಚುತ್ತಲೇ ಹೋಯ್ತು. ಅದು ಹೆರಿಗೆಯ ನೋವು ಹೌದೋ, ಅಲ್ಲವೋ ಅಂತ ಚರ್ಚೆ ಮಾಡಲು ಸಮಯವಿಲ್ಲ ಅಂತ ಯಜಮಾನರು ಆಸ್ಪತ್ರೆಗೆ ಹೊರಟೇಬಿಟ್ಟರು. ನಾನಂತೂ ಹೆದರಿಕೆ, ನೋವು ಎಲ್ಲಾ ಸೇರಿ ಕಂಗಾಲಾಗಿ ಹೋಗಿದ್ದೆ. ನನಗೇನಾದರೂ ಪರವಾಗಿಲ್ಲ, ಮಗು ಮಾತ್ರ ಉಳಿಯಲಿ ಅಂತೆಲ್ಲಾ ಪ್ರಾರ್ಥಿಸುತ್ತಿದ್ದೆ.
Advertisement
ಆಸ್ಪತ್ರೆ ತಲುಪುವ ದಾರಿಯುದ್ದಕ್ಕೂ ನೋವಿನಿಂದ ಚೀರುತ್ತಿದ್ದ ನನ್ನನ್ನು ನೋಡಿ, ಎಲ್ಲರೂ ಹೆದರಿ ಹೋದರು. ಮಧ್ಯಾಹ್ನ ಚೂರು ಊಟ ಮಾಡಿದ್ದು ಬಿಟ್ಟರೆ ಹೊಟ್ಟೆಯಲ್ಲಿ ಏನೂ ಇಲ್ಲ. ನಿಶ್ಶಕ್ತಿ, ನೋವು, ಬಾಯಾರಿಕೆ, ನಾನು ಸತ್ತೇ ಹೋಗುತ್ತಿದ್ದೇನೆ ಅಂತೆಲ್ಲಾ ಅನ್ನಿಸಿ ದುಃಖ ಒತ್ತರಿಸಿ ಬಂತು. ಡಾಕ್ಟರ್ ಮಾತ್ರ, “ಹೆರಿಗೆಯಾಗೋಕೆ ಇನ್ನೂ ಸಮಯ ಇದೆ. ರಾತ್ರಿ ಎರಡೂವರೆ ಆಗಬಹುದು, ಇಲ್ಲಾ ನಾಳೆ ಬೆಳಗ್ಗೆ ಆಗಬಹುದು’ ಅಂದುಬಿಟ್ಟರು. ಈ ನೋವಿನಲ್ಲಿ ನಾನು ಅಷ್ಟು ಹೊತ್ತು ಜೀವ ಹಿಡಿದುಕೊಳ್ಳುವುದು ಸಾಧ್ಯವೇ ಇಲ್ಲ ಅನ್ನಿಸಿತು.
ಆ ಅಮೃತ ಘಳಿಗೆ…“ಹೆರಿಗೆ ನೋವು ಕಾಣಿಸಿಕೊಂಡೆಲೆ ಡಾಕ್ಟರ್ ಬರ್ತಾರೆ’ ಅಂದರು ಅಲ್ಲಿದ್ದ ನರ್ಸ್. ಅಯ್ಯೋ ದೇವರೇ, ಇನ್ನೆಷ್ಟು ನೋವು ತಿನ್ನಬೇಕು ಅಂತ ನಾನು ಅಳತೊಡಗಿದ್ದೆ. ಭಯ, ನೋವಿನಲ್ಲಿ ನಿಮಿಷಗಳು ಗಂಟೆಗಳಂತೆ ಅನ್ನಿಸುತ್ತಿತ್ತು. ನರ್ಸ್, ಹೆರಿಗೆಗೆ ಬೇಕಾದ ತಯಾರಿ ನಡೆಸಿದ್ದರು. ನೋವಿನ ತೀವ್ರತೆ ಹೆಚ್ಚಿದಾಗ, ಡಾಕ್ಟರ್ ಬಂದರು. ನನ್ನನ್ನು ಹೆರಿಗೆ ಕೊಠಡಿಗೆ ಸಾಗಿಸಿದರು. ನಾನು ಹೆದರಿಕೆಯಿಂದ ಕಣ್ಣು ಮುಚ್ಚಿದೆ. ಸುತ್ತಮುತ್ತ ಯಾರ್ಯಾರೋ ನಿಂತಿದ್ದರು. ಅವರಲ್ಲೇ ಯಾರೋ ಒಬ್ಬರು, ನನ್ನನ್ನು ಸಮಾಧಾನಿಸುತ್ತಿದ್ದರು. ನನ್ನ ಕೂಗು ಇಡೀ ಆಸ್ಪತ್ರೆಗೆ ಕೇಳಿಸುವಷ್ಟು ಜೋರಾಗಿತ್ತು. ಹೆರಿಗೆ ಕೊಠಡಿಗೆ ಹೋಗುವಾಗ ಕಣ್ಣು ಮುಚ್ಚಿದವಳು, ಮಗು ಹೊರ ಬಂದ ಮೇಲೆಯೇ ಕಣ್ಣು ಬಿಟ್ಟಿದ್ದು. ಡಾಕ್ಟರ್, ಗಂಡು ಮಗು ಎಂದು ನನ್ನ ಕೂಗಿ ಕರೆದಾಗ, ಮಂಪರು ಹರಿದಿತ್ತು. ಮಧ್ಯರಾತ್ರಿ 1.30ರ ಸಮಯಕ್ಕೆ ನನಗೆ ಮರು ಜನ್ಮ ನೀಡಿ, ಮಗ ಮಡಿಲು ತುಂಬಿದ್ದ. ಹೊರಗೆ ದಿಗಿಲಿನಿಂದ ಕಾಯುತ್ತಿದ್ದವರು, ಮಗುವಿನ ಅಳು ಕೇಳಿ ನೆಮ್ಮದಿಯ ನಿಟ್ಟುಸಿರುಬಿಟ್ಟರು. ಸಾಮಾನ್ಯ ಹೆರಿಗೆ ಆಗಲಿ ಎಂದು ಬಯಸಿದ್ದ ಮನೆಯವರಿಗೂ ಖುಷಿಯಾಗಿತ್ತು.
ಅಮ್ಮನಾಗುವ ಕಷ್ಟ ಏನಂತ ನನಗೀಗ ಅರ್ಥವಾಗುತ್ತಿದೆ. ರಾತ್ರಿಯೆಲ್ಲಾ ಅತ್ತು ನಿದ್ದೆಗೆಡಿಸುವ ಮಗನನ್ನು ಸಮಾಧಾನಿಸುವುದು ಕಷ್ಟವೇ. ಆದರೂ, ಅದೊಂಥರ ಹಿತವಾದ ಅನುಭವ. ಹಾಲೂಡಿಸಿ, ಡೈಪರ್ ಬದಲಿಸಿ, ಮಗುವಿನ ಮೃದು ಸ್ಪರ್ಶದಲ್ಲಿ ಕಳೆದು ಹೋಗುವ ನನ್ನ ನೋಡಿ ಅಮ್ಮ ಕಣ್ಣಲ್ಲೇ ಕೇಳುತ್ತಾಳೆ, “ಈಗ ಗೊತ್ತಾಯ್ತಾ ತಾಯ್ತನ ಅಂದ್ರೆ ಏನೂಂತ?’ ನಾನೂ ಹೇಳುತ್ತೇನೆ, “ಅಮ್ಮಾ, ನಿನ್ನ ನೋವ ನಾ ಬಲ್ಲೆ’ ಅಂತ. – ಹರ್ಷಿತಾ ಹರೀಶ ಕುಲಾಲ್