Advertisement

ಅಮ್ಮನ ಹತ್ರ ಕಾಸಿಲ್ಲ ಅನ್ನೋದು ಮಕ್ಕಳಿಗೂ ತಿಳಿದಿರಲಿ

10:19 AM Feb 22, 2017 | |

ಏನೋ ಕೆಲಸದ ನಿಮಿತ್ತ ಗಾಂಧಿ ಬಜಾರಿಗೆ ಹೋಗಿದ್ದೆ. ಮೂರು ವರ್ಷದ ಮಗಳೂ ಜತೆಗಿದ್ದಳು. ಒಂದಷ್ಟು ಓಡಾಡಿ ಮುಗಿಸಬೇಕಿದ್ದ ಖರೀದಿಗಳ ಜತೆಗೆ ಬಲೂನು ಮತ್ತೂಂದಷ್ಟು ಆಟಿಕೆ ಎಲ್ಲ ಕೊಂಡಾಯ್ತು. ಅಷ್ಟರಲ್ಲಿ ಅದೆಲ್ಲಿಂದಲೋ ರಸ್ತೆಗಿಳಿದ ಛೋಟಾ ಭೀಮ… ಬಲೂನು ಕಾಣಿಸಿತ್ತು. ಶುರುವಾಯ್ತು ರಗಳೆ: ನಂಗೆ ಆ ಬಲೂನೂ ಬೇಕೂ… ನಂತರದ ನಮ್ಮ ಸಂಭಾಷಣೆ ಹೀಗಿತ್ತು.

Advertisement

“ಇಲ್ಲ ಈಗಿನ್ನೂ ಒಂದ್ರಾಶಿ ಆಟಿಕೆ ಕೊಡಿದೀನಿ ಸಾಕು’

“ಅದ್ಯಾವುದೂ ಬೇಡಮ್ಮಾ. ಇದೊಂದು ಕೊಡು ಸಾಕು’

“ಉಹುಂ… ಹಾಗಾಗಲ್ಲ ಮಗಳೇ, ಒಮ್ಮೆ ಕೊಂಡುಕೊಂಡಿದ್ದನ್ನ ವಾಪಸ್‌ ಕೊಡೋಕಾಗಲ್ಲ’

“ಸರಿ ಬಿಡು, ಅದೂ ಇರ್ಲಿ, ಇದೂ ಕೊಡು. ಪ್ರಾಮಿಸ್‌ ನಾನು ಸಾನ್ವಿ ಜತೆ ಶೇರ್‌

Advertisement

ಮಾಡ್ಕೊàತೀನಿ’ (ಆಗಿನ್ನೂ ಎರಡನೇ ಮಗಳು ಹುಟ್ಟಿರಲಿಲ್ಲ)

“ಇಲ್ಲ ಪುಟಾಣಿ. ಈಗ ಅಮ್ಮನ ಹತ್ತಿರ ದುಡ್ಡಿಲ್ಲ, ಇನ್ನೊಮ್ಮೆ ಯಾವಾಗಾದ್ರೂ ಬಂದಾಗ ಕೊಡಿಸ್ತೀನಿ’

“ಅಮ್ಮಾ ಆವಾಗ ದುಡ್ಡಿರತ್ತಾ?’

“ಗೊತ್ತಿಲ್ಲ, ಇದ್ರೆ ಕೊಡಿಸ್ತೀನಿ, ಇಲ್ಲಾಂದ್ರೆ ದುಡ್ಡು ಬಂದಾಗಲೇ ತೊಗೊಳ್ಳೋಣ’

ಜತೆಗಿದ್ದ ಗೆಳತಿಗೆ ಯಾಕೋ ಇದು ಇಷ್ಟವಾಗಲಿಲ್ಲ. ಕೇಳಿಯೇ ಬಿಟ್ಟಳು ದುಡ್ಡಿನ ವಿಷ್ಯ ಮಗು ಹತ್ರ ಯಾಕೆ? ಅವೆಲ್ಲ ಅವಳಿಗೆ ಅರ್ಥ ಆಗತ್ತಾ? ಅಷ್ಟಕ್ಕೂ ನಮ್ಮತ್ರ ದುಡ್ಡಿಲ್ಲ ಅಂತ ಯಾಕನ್ನಿಸಬೇಕು ಮಗೂಗೆ? ಅಪ್ಪಅಮ್ಮ ಬಡವರು ಅಂದುಕೊಳ್ಳಲ್ವೇನೇ ? ನಿಂಗಂತೂ ಇವೆಲ್ಲ ತಲೆಗೇ ಹೋಗಲ್ವಾ? ಚೈಲ್ಡ… ಸೈಕಾಲಜಿ ಬೇರೆ ಓದಿದೀಯ. ಎಲ್ಲಾ ದಂಡಕ್ಕೆ… ಒಂದೇ ಉಸಿರಲ್ಲಿ ಹೇಳಿದ್ದಳು. 

ಹೆಚ್ಚು ಮಾತಾಡದೆ ನಕ್ಕು ಸುಮ್ಮನಾಗಿದ್ದೆ.

ಮಗಳು ಚಿಕ್ಕವಳು ನಿಜ, ಆದರೆ ನಮ್ಮ ಮನೆಯ ಸದಸ್ಯೆ. ನಾವು ದೊಡ್ಡವರು ಮನೆಯಲ್ಲಿ ಎಷ್ಟು ಮುಖ್ಯವೋ ಅವಳೂ ಅಷ್ಟೇ ಮುಖ್ಯಳು. ಕಂಡಿದ್ದೆಲ್ಲ ಕೇಳಬಹುದು, ಕೇಳಿದ್ದೆಲ್ಲ ಸಿಗುತ್ತದೆ ಎಂಬ ಭಾವನೆ ಮೂಡಿಸೋದಕ್ಕಿಂತ ಅನುಕೂಲ ಇದ್ದಾಗ ಮಾತ್ರ ಲಭ್ಯತೆ ಅನ್ನೋದನ್ನ ತಿಳಿ ಹೇಳಬೇಕಿತ್ತಷ್ಟೇ ನಾನು. ಅದು ಹಣಕಾಸಿನದಿರಲಿ, ಬೇರೆಯದಿರಲಿ ಮನೆಯ ಆಗು ಹೋಗುಗಳು ಮಕ್ಕಳಿಗೆ ಗೊತ್ತಿರಬೇಕು. ಮಾತ್ರವಲ್ಲ, ಬದುಕಲ್ಲಿ ಬಹಳಷ್ಟು ಸಲ ಇಲ್ಲ ಸಿಗುವುದಿಲ್ಲ ಅನ್ನುವುದು ಇಂದಿನ ತಲೆಮಾರಿನ ಮಕ್ಕಳಿಗೆ ಅರ್ಥವಾಗಬೇಕಾದ್ದು ಬಹು ದೊಡ್ಡ ಅವಶ್ಯಕತೆ. ಅಪ್ಪ ಬೈಕ್‌ ಕೊಡಿಸಲಿಲ್ಲ, ಅಮ್ಮ ಮೊಬೈಲ್‌ ಕೊಡಿಸಲಿಲ್ಲ ಅನ್ನೋ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ತಲೆಮಾರಿಗೆ ಯಾವುದರ ಬೆಲೆಯೂ ಗೊತ್ತಿಲ್ಲವೇನೋ ಎಂಬ ಅನುಮಾನ ಕಾಡುತ್ತದೆ. ಜತೆಗೇ ಅಯ್ಯೋ ಪಾಪ ಕೂಡ !!

ಇತ್ತೀಚಿನ ತಲೆಮಾರಿನ ಪೋಷಕರು ಕೂಡ ಇದಕ್ಕೆ ಕಾರಣರು ಎಂಬುದನ್ನು ಅಲ್ಲಗಳೆಯುವಂತಿಲ್ಲ. ನಮ್ಮ ಸಮಸ್ಯೆ ನಮಗಷ್ಟೇ ಇರಲಿ, ಮಕ್ಕಳಿಗೆ ಗೊತ್ತಾಗದಿರಲಿ ಅಂತಲೇ ಮುಚ್ಚಿಡುತ್ತಾರೆ. ಅದರಲ್ಲೂ ದುಡ್ಡಿನ ಸಮಸ್ಯೆ ಇದ್ದರಂತೂ ಮುಗೀತು. ಅದರ ಗಾಳಿ ಕೂಡ ಮಕ್ಕಳಿಗೆ ಸೋಕದಂತೆ ಎಚ್ಚರಿಕೆ ವಹಿಸುತ್ತಾರೆ. ಈ ಕ್ಷೇತ್ರದಲ್ಲಿ ನಡೆದ ಇತ್ತೀಚಿನ ಬಹಳಷ್ಟು ಸಂಶೋಧನೆಗಳ ಪ್ರಕಾರ ಮಕ್ಕಳಿಗೆ ಇವೆಲ್ಲವೂ ಗೊತ್ತಿರಬೇಕು. ಸಮಸ್ಯೆಯ ಗಂಭೀರತೆ ಸಣ್ಣವರಿದ್ದಾಗ ಗೊತ್ತಾಗದೇ ಹೋಗಬಹುದು, ಬೆಳೆಯುತ್ತ ಹೋದಂತೆ ಅರ್ಥ ಆಗುತ್ತದೆ. ಮತ್ತು ಇವುಗಳು ಕಷ್ಟಗಳನ್ನು ಎದುರಿಸುವ ಮೆಟ್ಟಿಲುಗಳೂ ಆಗಿ ಮಕ್ಕಳನ್ನು ಗಟ್ಟಿಗೊಳಿಸುತ್ತವೆ.

ಎಟಿಎಂ ಅನ್ನೋದು ನಾವು ಹಾಕಿದ ದುಡ್ಡನ್ನಷ್ಟೇ ಕೊಡುತ್ತದೆಯೇ ಹೊರತು ಅದು ಬತ್ತದ ದುಡ್ಡಿನ ಗಣಿಯಲ್ಲ ಅನ್ನೋ ಮೂಲಭೂತ ವಾಸ್ತವ ಅರಿವಾಗೋ ವರೆಗೂ ದುಡ್ಡಿಲ್ಲ ಅಂದರೆ ಎಟಿಎಂ ನಲ್ಲಿ ತಗೋ ಎಂಬ ಮಾತು ನಿಲ್ಲುವುದಿಲ್ಲ. ಅಥವಾ ಇನ್ನಾವುದೇ ಸೌಕರ್ಯ, ಸವಲತ್ತುಗಳು ಇಲ್ಲದಿರುವುದು ಅವಮಾನವಲ್ಲ ಎಂಬ ಸತ್ಯವೂ ಅರಿವಾಗಬೇಕಾದ್ದು ಇಂದಿನ ಅನಿವಾರ್ಯತೆ. ಸ್ಪಷ್ಟವಾದ ಗುರಿ, ದುಡಿಮೆಯ ಛಲವಿದ್ದರೆ ಅವುಗಳನ್ನೆಲ್ಲ ಗಳಿಸುವುದು ಅಸಾಧ್ಯವಲ್ಲ ಎಂಬುದನ್ನೂ ಗೊತ್ತಾಗಿಸಬೇಕು ಕೂಡ. ಎಷ್ಟೋ ಸಲ ಮಕ್ಕಳಿಗೆ ಪೋಷಕರ ಸಾಮರ್ಥ್ಯವೇ ಗೊತ್ತಿಲ್ಲದ ಕಾರಣ ಬಹಳ ಬೇಗ ನಿರಾಶೆಗೆ ಒಳಗಾಗುತ್ತಾರೆ, ಮತ್ತು ಬೇಡಿಕೆಯ ಪಟ್ಟಿಗೆ ಕಡಿವಾಣ ಹಾಕಲೂ ಮರೆಯುತ್ತಾರೆ. ಪಕ್ಕದ ಬೆಂಚಿನ ಗೆಳೆಯನೋ, ಎದುರು ಮನೆಯ ಗೆಳತಿಯೋ ಕೊಂಡಂಥ ವಸ್ತುವೊಂದು ತನಗೂ ಬೇಕು ಅನಿಸುವುದು ಮಕ್ಕಳಿಗೆ ಸಹಜವಾದ್ದು ಅದರಲ್ಲಿ ತಪ್ಪಿಲ್ಲ. ಕೊಳ್ಳಲು ಸಾಧ್ಯವಾಗದೇ ಇದ್ದಾಗ ಅದನ್ನು ನೋವಾಗದ ರೀತಿಯಲ್ಲಿ ತಿಳಿ ಹೇಳುವುದರಲ್ಲಿ ಬಹಳಷ್ಟು ಸಲ ಎಡವಟ್ಟುಗಳಾಗುತ್ತವೆ.

ಪ್ರತಿದಿನ ನಮ್ಮನ್ನು ನೋಡುತ್ತಲೇ ಬೆಳೆಯುವ ಮಕ್ಕಳು ಪ್ರತಿಯೊಂದನ್ನೂ ಗಮನಿಸುತ್ತಿರುತ್ತಾರೆ. ಮುಚ್ಚಿಟ್ಟ ಬಹಳಷ್ಟು ಸಂಗತಿಗಳ ಬಗ್ಗೆ ಅವರಿಗೆ ಗೊಂದಲಗಳಿರುತ್ತವೆ. ಅತ್ತ ಅರ್ಥವೂ ಆಗದೇ ಇತ್ತ ಕೇಳಲೂ ಆಗದೇ ಎಡಬಿಡಂಗಿಗಳಾಗಿರುತ್ತಾರೆ. ವಾಸ್ತವದಲ್ಲಿ ಮಕ್ಕಳಿಗೆ ನಾವು ಹೇಳಿದ್ದನ್ನು ಅರಿಯುವ ಶಕ್ತಿ ನಾವಂದುಕೊಂಡಿದ್ದಕ್ಕಿಂತ ಹೆಚ್ಚೇ ಇರುತ್ತದೆ. ಅವರ ಮಟ್ಟಕ್ಕಿಳಿದು ಹೇಳುವ ಚಾತುರ್ಯವನ್ನ ಬೆಳೆಸಿಕೊಳ್ಳಬೇಕಿರುವುದು ಪೋಷಕರಾದ ನಮ್ಮ ಕರ್ತವ್ಯ. ಆವಾಗಷ್ಟೇ ಮಕ್ಕಳು ನಿಜಕ್ಕೂ ಮನೆಯ ಆಗು ಹೋಗುಗಳನ್ನು ಅರಿತು, ಅದೇ ಇತಿ ಮಿತಿಗಳನ್ನು ಕಲಿತು ಸ್ಪಂದಿಸುವ ಮತ್ತು ಅವುಗಳ ಜತೆಗೇ ಬೆಳೆಯುವ ಗುಣ ರೂಢಿಸಿಕೊಳ್ಳುತ್ತಾರೆ. ಹೀಗೆ ಬೆಳೆದ ಮಕ್ಕಳು ಬದುಕಿನ ಕಷ್ಟಗಳನ್ನು ಎದುರಿಸಲು, ಗೆಲ್ಲಲು ಸಮರ್ಥರೂ ಆಗಿರುತ್ತಾರೆ. ಇಲ್ಲ ಎನ್ನುವುದು ಅವಮಾನವಲ್ಲ ಅನ್ನೋದು ಪೋಷಕರಿಗೆ ಮೊದಲು ಅರ್ಥವಾಗಬೇಕು, ಆವಾಗಷ್ಟೇ ಅದನ್ನು ಮಕ್ಕಳಲ್ಲೂ ತುಂಬಲು ಸಾಧ್ಯ.

-ವಿಜಯಲಕ್ಷ್ಮೀ ಎಂ

Advertisement

Udayavani is now on Telegram. Click here to join our channel and stay updated with the latest news.

Next