Advertisement

Mollywood: ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ ಸಂಗೀತ ನಿರ್ದೇಶಕ; ನೆಟ್ಟಿಗರು ಗರಂ

06:03 PM Jul 17, 2024 | Team Udayavani |

ಕೊಚ್ಚಿ: ಮಾಲಿವುಡ್‌ (Mollywood) ಚಿತ್ರರಂಗದ ಮ್ಯೂಸಿಕ್‌ ಡೈರೆಕ್ಟರ್‌ ಒಬ್ಬರು ಖ್ಯಾತ ನಟನಿಂದ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಮಾಲಿವುಡ್‌ ನಲ್ಲಿ 8 ಜನ ನಿರ್ದೇಶಕರ, 9 ಕಥೆಗಳುಳ್ಳ ‘ಮನೋರಥಂಗಳ್ʼ(Manorathangal) ಎನ್ನುವ ಆಂಥಾಲಜಿ ವೆಬ್ ಸಿರೀಸ್‌ ಬರುತ್ತಿದೆ. ಈ ವೆಬ್‌ ಸಿರೀಸ್‌ ನ ಟ್ರೇಲರ್‌ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ.

ಈ ಕಾರ್ಯಕ್ರಮದಲ್ಲಿ ‘ಮನೋರಥಂಗಳ್ʼನಲ್ಲಿ ನಟಿಸಿರುವ ಹಾಗೂ ಅದರಲ್ಲಿ ಕೆಲಸ ಮಾಡಿರುವ ಹಲವರು ಭಾಗಿಯಾಗಿದ್ದರು. ಮಲಯಾಳಂ ಸಂಗೀತ ನಿರ್ದೇಶಕ ರಮೇಶ್ ನಾರಾಯಣ್ ನಟ ಆಸಿಫ್ ಅಲಿ ಅವರಿಗೆ ಸ್ಮರಣಿಕೆಯೊಂದನ್ನು ನೀಡಬೇಕಿತ್ತು. ಹೀಗಾಗಿ ಆಸಿಫ್‌ ಅಲಿ ಅವರು ನಾರಾಯಣ್‌ ಅವರಿಗೆ ಸ್ಮರಣಿಕೆ ನೀಡಲು ಹೋಗಿದ್ದಾರೆ. ಆದರೆ ರಮೇಶ್‌ ನಾರಾಯಾಣ್‌ ಆಸಿಫ್‌ ಅವರಿಂದ ಪ್ರಶಸ್ತಿ ಸ್ವೀಕರಿಸದೆ ಹಾಗೆಯೇ ನಿಂತಿದ್ದರು. ಇದರಿಂದ ಆಸಿಫ್‌ ಅವರಿಗೆ ಇರಿಸುಮುರಿಸು ಉಂಟಾಗಿದೆ. ಗೊಂದಲದಿಂದಲೇ ಆಸಿಫ್‌ ರಮೇಶ್‌ ನಾರಾಯಣ್‌ ಅವರ ಕೈಗೆ ಪ್ರಶಸ್ತಿ ಇಟ್ಟಿದ್ದಾರೆ.

ರಮೇಶ್‌ ನಾರಾಯಣ್ ನಿರ್ದೇಶಕ ಜಯರಾಜ್‌ ಅವರನ್ನು ಕರೆದು ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ರಮೇಶ್‌ ನಾರಾಯಣ್‌ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

“ರಮೇಶ್ ನಾರಾಯಣ್ ಅವರು ತಮ್ಮ ನಿರ್ದೇಶಕ ಜಯರಾಜ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಲು ಬಯಸಿದ್ದರು. ಈ ಬಗ್ಗೆ ಆಯೋಜಕರಿಗೆ ವಿನಂತಿಸಬೇಕಿತ್ತು. ಆದರೆ ಈ ರೀತಿ ಮಾಡಿದ್ದು ಸರಿಯಲ್ಲ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

“ಹಿರಿಯ ವ್ಯಕ್ತಿಗೆ ತೋರಿದ ಅಗೌರವ ಇದು. ಜನರಿಗೆ ಗೌರವ ಕೊಡಬೇಕೆಂಬ ಸಾಮಾನ್ಯ ಜ್ಞಾನವೊಂದಿರುತ್ತದೆ. ಆದರೆ ಉನ್ನತ ಮಟ್ಟಕ್ಕೇರಿದಾಗ ಅದನ್ನು ಜನ ಮರೆತು ಬಿಡುತ್ತಾರೆ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

“ಕಾರ್ಯಕ್ರಮದ ನಿರೂಪಕಿ ರಮೇಶ್‌ ನಾರಾಯಣ್‌ ಅವರನ್ನು ಸಂತೋಷ್‌ ನಾರಾಯಣ್‌ (ಖ್ಯಾತ ಸಂಗೀತ ಸಂಯೋಜಕ) ಎಂದು ಅವಸರದಿಂದ ಕರೆದಿದ್ದರು. ಇದರಿಂದ ಅವರಿಗೆ ಸಿಟ್ಟು ಬಂತು” ಎಂದು ಒಬ್ಬರು ಬರೆದುಕೊಂಡಿದ್ದಾರೆ.

“ನನಗೆ ಆಸಿಫ್‌ ಅವರು ಪ್ರಶಸ್ತಿ ನೀಡುತ್ತಾರೆ ಅಂಥ ಗೊತ್ತಿರಲಿಲ್ಲ. ಅವರು ಅನೇಕ ಕಲಾವಿದರ ನಡುವಿನಿಂದ ಬಂದು ಪ್ರಶಸ್ತಿ ಕೊಟ್ಟರು. ನನಗೆ ಜಯರಾಜ್‌ ಅಲ್ಲಿರಬೇಕಿತ್ತು ಅಂಥ ಅನ್ನಿಸಿತು. ಅದಕ್ಕಾಗಿ ಅವರನ್ನು ನಾನು ಕರೆದೆ. ಅಷ್ಟರಲ್ಲೇ ಆಸಿಫ್‌ ಎಲ್ಲೂ ಹೋಗಿ ಕೂತರು” ಎಂದು ವಿವಾದದ ಬೆನ್ನಲ್ಲೇ ರಮೇಶ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕ ಮತ್ತು ಚಿತ್ರಕಥೆಗಾರ-ನಿರ್ದೇಶಕ ಎಂಟಿ ವಾಸುದೇವನ್ ನಾಯರ್ ಅವರು ಬರೆದ ಕಥೆಗಳನ್ನು ಆಧರಿಸಿ ‘ಮನೋರಥಂಗಳ್ʼ ಸಿರೀಸ್‌ ಬರುತ್ತಿದೆ.

ದಕ್ಷಿಣ ಭಾರತದ ದಿಗ್ಗಜರು ಈ ಸಿರೀಸ್‌ ಬೇರೆ ಬೇರೆ ಕಥೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್, ಮೋಹನ್ ಲಾಲ್,(Mohanlal), ಮಮ್ಮುಟಿ (Mammootty), ಫಾಹದ್ ಫಾಸಿಲ್(Fahadh Faasil) ಮುಂತಾದ ಮಾಲಿವುಡ್‌ ಸೂಪರ್‌ ಸ್ಟಾರ್‌ ಗಳು ನಟಿಸಿದ್ದಾರೆ.

ಇವರಷ್ಟೇ ಅಲ್ಲದೆ ಪಾರ್ವತಿ ತಿರುವೋತು, ಮತ್ತು ಮಧು, ಬಿಜು ಮೆನನ್, ಇಶಿತ್ ಯಾಮಿಮಿ, ಅಪರ್ಣಾ ಬಾಲಮುರಳಿ, ನದಿಯಾ ಮೊಯ್ದು, ಆನ್ ಆಗಸ್ಟಿನ್, ದುರ್ಗಾ ಕೃಷ್ಣ, ಆಸಿಫ್ ಅಲಿ, ಇಂದ್ರಜಿತ್ ಸುಕುಮಾರನ್, ಇಂದ್ರನ್ಸ್ ಮತ್ತು ಸಿದ್ದಿಕ್ ಮೊದಲಾದವರೂ ನಟಿಸಿದ್ದಾರೆ.

ಆಗಸ್ಟ್‌ 15ರಿಂದ ಜೀ5 ನಲ್ಲಿ ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಈ ಸಿರೀಸ್‌ ಸ್ಟ್ರೀಮ್‌ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.