ಬೆಂಗಳೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ವಿಶೇಷ ತ್ವರಿತ ನ್ಯಾಯಾಲಯ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಕೋಣನಕುಂಟೆಯ ಸುಪ್ರಜಾನಗರ ನಿವಾಸಿ ಲಕ್ಷ್ಮಣ್ (36) ಶಿಕ್ಷೆಗೊಳಗಾದ ಅಪರಾಧಿ.
ಐದು ವರ್ಷದ ಸಂತ್ರಸ್ತೆ ಅಂಗನವಾಡಿಗೆ ಹೋಗುತ್ತಿದ್ದು, ಅಪರಾಧಿ ಮನೆ ಸಮೀಪದಲ್ಲೇ ಪೋಷಕರ ಜತೆ ವಾಸವಾಗಿತ್ತು. 2018ರ ಜ.13ರಂದು ಬೆಳಗ್ಗೆ 8.45ರಲ್ಲಿ ಸಂತ್ರಸ್ತೆ ತಾಯಿ, ಮಗಳನ್ನು ಅಂಗನವಾಡಿಗೆ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಅದೇ ದಿನ ಬೆಳಗ್ಗೆ 10 ಗಂಟೆಗೆ ಆರೋಪಿ ಮಗುವನ್ನು ಪುಸಲಾಯಿಸಿ ತನ್ನೊಂದಿಗೆ ಕರೆದೊಯ್ದು ಅಂಗನವಾಡಿ ಮತ್ತು ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳ ಕಚೇರಿ ಮಧ್ಯೆ ಇರುವ ಪ್ಯಾಸೆಜ್‌ಗೆ ಕರೆದೊಯ್ದು ಮಗುವಿನ ಜತೆ ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ.
ಈ ಬಗ್ಗೆ ಮಗು, ತಾಯಿ ಬಳಿ ಹೇಳಿಕೊಂಡಿತ್ತು. ಈ ಸಂಬಂಧ ಸಂತ್ರಸ್ತೆ ತಾಯಿ, ಕೋಣನಕುಂಟೆ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಠಾಣಾಧಿಕಾರಿಗಳಾದ ಧರ್ಮೇಂದ್ರ ಮತ್ತು ಸದಾನಂದ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿ, ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ 15 ಮಂದಿ ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿತ್ತು. ಅಂತಿಮವಾಗಿ ವಾದ ಆಲಿಸಿದ ಕೋರ್ಟ್, ಅಪರಾಧಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 50 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ, ನೊಂದ ಬಾಲಕಿಗೆ ಡಿಎಲ್‌ಎಸ್‌ಎಯಿಂದ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್.ರೂಪಾ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಅಭಿಯೋಜಕರಾಗಿ ಪಿ.ಕೃಷ್ಣವೇಣಿ ವಾದ ಮಂಡಿಸಿದರು.