Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ

05:14 PM Sep 08, 2019 | Team Udayavani |

ಮೊಳಕಾಲ್ಮೂರು: ಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿದ್ದೇನೆ. ಈ ಕ್ಷೇತ್ರಕ್ಕೆ 67 ವರ್ಷಗಳ ನಂತರ ಸಿಕ್ಕಿರುವ ಸಚಿವ ಸ್ಥಾನವನ್ನು ಮೊಳಕಾಲ್ಮೂರು ಕ್ಷೇತ್ರದ ಜನತೆಗೆ ಸಮರ್ಪಣೆ ಮಾಡಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಶನಿವಾರ ರೋಟಾ ವೈರಸ್‌ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಕ್ಷೇತ್ರದಿಂದ 67 ವರ್ಷಗಳ ಹಿಂದೆ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪನ ವರು ಮುಖ್ಯಮಂತ್ರಿಯಾದ ನಂತರ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ನಿಜಲಿಂಗಪ್ಪನವರ ನಂತರ ಈ ಸ್ಥಾನ ಕ್ಷೇತ್ರಕ್ಕೆ ದೊರೆತಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಈ ಹಿಂದಿನ ಬಿಜೆಪಿ ಸಕಾರದಲ್ಲಿ ಆರೋಗ್ಯ ಸಚಿವನಾಗಿದ್ದಾಗ ತಾಲೂಕಿನ ಸರ್ಕಾರಿ ಆಸ್ಪತ್ರೆಯನ್ನು ನೂರು ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆದರೆ ಸಮರ್ಪಕವಾದ ವೈದ್ಯರು ಮತ್ತು ಸಿಬ್ಬಂದಿ ನೇಮಕ ಹಾಗೂ ಮೂಲ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ಈ ಆಸ್ಪತ್ರೆಗೆ ಹೆರಿಗೆಗಾಗಿ ಬಂದಿದ್ದ ಮುಸ್ಟಲಗುಮ್ಮಿ ಗ್ರಾಮದ ಮಹಿಳೆಯೊಬ್ಬಳು ತಜ್ಞ ವೈದ್ಯರಿಲ್ಲದ ಕಾರಣ ಬಳ್ಳಾರಿ ವಿಮ್ಸಗೆ ಹೋಗುವ ಸಂದರ್ಭದಲ್ಲಿ ಮೃತಪಟ್ಟಿದ್ದಳು. ಜಿಲ್ಲೆಯಲ್ಲಿರುವ ಐದು ಅನಿಸ್ತೇಷಿಯಾ ವೈದ್ಯರಲ್ಲಿ ಚಳ್ಳಕೆರೆ ಆಸ್ಪತ್ರೆಯ ಅನಿಸ್ತೇಷಿಯಾ ವೈದ್ಯರನ್ನು ಮೊಳಕಾಲ್ಮೂರು ಆಸ್ಪತ್ರೆಗೆ ವಾರದಲ್ಲಿ 3 ದಿನ ಇಲ್ಲವೇ 30 ದಿನಗಳ ಕಾಲ ಪೂರ್ಣ ಪ್ರಮಾಣದ ಕೆಲಸಕ್ಕೆ ನಿಯೋಜನೆ ಮಾಡುವಂತೆ ಆದೇಶಿಸಲಾಗಿದೆ ಎಂದರು.

ರೋಟಾ ವೈರಸ್‌ ಮಕ್ಕಳಿಗೆ ಮಾರಣಾಂತಿಕ ಕಾಯಿಲೆಯಾಗಿದ್ದು,ಈ ರೋಗದಿಂದ ಪ್ರಾಣಾಪಾಯದಿಂದ ಕಾಪಾಡಿಕೊಳ್ಳಲು ರೋಟಾ ವೈರಸ್‌ ಲಸಿಕೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಈ ಹಿಂದೆ 108 ತುರ್ತು ವಾಹನದ ಸೌಲಭ್ಯವನ್ನು ಕಲ್ಪಿಸಿ ಚಿಕತ್ಸೆ ಪಡೆಯಲು ಶ್ರಮಿಸಲಾಗಿದೆ. ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ರೂ. ವೇತನ ನಿಗದಿಪಡಿಸಿ ನಿಲುಗಡೆಯಾದ ಸಂಪೂರ್ಣ ವೇತನ ನೀಡಲು ಪ್ರಯತ್ನಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿಯವರು ಆಯುಷ್ಮಾನ್‌ ಭಾರತ್‌’ಯೋಜನೆಯನ್ನು ಜಾರಿಗೆ ತಂದಿದ್ದರೂ ಆರೋಗ್ಯ ಕರ್ನಾಟಕದಿಂದ ಗೊಂದಲ ಉಂಟಾಗಿತ್ತು. ಹಾಗಾಗಿ ‘ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸ್ಥಗಿತಗೊಳಿಸಿ ‘ಆಯುಷ್ಮಾನ್‌ ಭಾರತ್‌’ ಯೋಜನೆಯನ್ನು ಮುಂದುವರೆಸಲಾಗುವುದು. ರಾಜ್ಯದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳನ್ನು ಕೆಪಿಎಸ್‌ಸಿ ವತಿಯಿಂದ ನೇಮಕ ಮಾಡಿಕೊಳ್ಳುವ ಬದಲಾಗಿ ನೇರವಾಗಿ ನೇಮಕ ಮಾಡಿಕೊಳ್ಳುವಂತೆ ಆದೇಶಿಸಲಾಗಿದೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಎಂಬಿಬಿಎಸ್‌ ಪದವಿ ಪಡೆದವರನ್ನು ನೇಮಕ ಮಾಡಿ ವೈದ್ಯರ ಕೊರತೆ ನೀಗಿಸಲಾಗುವುದು. ಹೊರಗಡೆ ಔಷಧಿಗೆ ವೈದ್ಯರು ಚೀಟಿ ಬರೆದುಕೊಟ್ಟಲ್ಲಿ ಅಂತಹ ವೈದ್ಯರನ್ನು ಕೆಲಸದಿಂದ ವಜಾ ಮಾಡುವುದಾಗಿ ಎಚ್ಚರಿಸಿದರು.

Advertisement

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪಾಲಾಕ್ಷ, ಆರ್‌ಸಿಎಚ್ ಅಧಿಕಾರಿ ಡಾ| ಕುಮಾರಸ್ವಾಮಿ, ಸರ್ವೇಕ್ಷಣಾಧಿಕಾರಿ ಡಾ| ಮಂಜುನಾಥಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ| ತುಳಸಿ ರಂಗನಾಥ, ಆಡಳಿತ ವೈದ್ಯಾಧಿಕಾರಿ ಡಾ| ಪದ್ಮಾವತಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ, ವೈದ್ಯರಾದ ಡಾ| ಬೊಮ್ಮಣ್ಣ, ಡಾ| ಅಭಿನವ, ಅಜರ್‌ ಅಮೀನ್‌, ಬಿಜೆಪಿ ಮಂಡಲ ಕಾರ್ಯದರ್ಶಿ ಶ್ರೀರಾಮ ರೆಡ್ಡಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಂಜೀವಪ್ಪ, ಪಪಂ ಸದಸ್ಯರಾದ ಟಿ.ಟಿ. ರವಿಕುಮಾರ್‌, ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next